ಸಾರಾಂಶ
ಕೀರ್ತನಕನ್ನಡಪ್ರಭ ವಾರ್ತೆ ಕುಶಾಲನಗರಮಳೆಗಾಲ ಬಂತೆಂದರೆ ಸಾಕು, ಕುಶಾಲನಗರದ ಪಟ್ಟಣ ವ್ಯಾಪ್ತಿಯ ಪ್ರದೇಶಗಳ ಬಡಾವಣೆಗಳ ನಿವಾಸಿಗಳು 5 ತಿಂಗಳು ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಸರ್ವೇ ಸಾಮಾನ್ಯವಾಗಿದೆ.ನದಿ ನಿರ್ವಹಣೆಯ ಕೊರತೆ ಮತ್ತು ಹಾರಂಗಿ ಜಲಾಶಯದಿಂದ ಹೊರ ಬಿಡಲಾಗುವ ಹೆಚ್ಚುವರಿ ನೀರು ಒಟ್ಟಾಗಿ ಪ್ರವಾಹದ ಪರಿಸ್ಥಿತಿಗೆ ಮಾರ್ಪಟ್ಟು ಕುಶಾಲನಗರ ವ್ಯಾಪ್ತಿಯ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಕಾವೇರಿ ನದಿ ತಟದ ತಗ್ಗು ಪ್ರದೇಶದ ಬಡಾವಣೆಗಳ ನೂರಾರು ಸಂಖ್ಯೆಯ ನಾಗರಿಕರು ಬವಣೆಗೆ ಒಳಪಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದೆ. 2018ರ ನಂತರ ಮೂರು ವರ್ಷ ನಿರಂತರ ಪ್ರವಾಹ ಬಂದ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ 7ಕ್ಕೂ ಅಧಿಕ ಬಡಾವಣೆಗಳು ಮತ್ತು ನದಿ ಪಾತ್ರದ ತಗ್ಗು ಪ್ರದೇಶದ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ನಡುವೆ 20 -21ರಲ್ಲಿ ನದಿ ಹೂಳೆತ್ತುವ ಮತ್ತು ನಿರ್ವಹಣೆ ಕಾಮಗಾರಿ ನಡೆದ ಹಿನ್ನೆಲೆಯಲ್ಲಿ ಪ್ರವಾಹ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು.ಆದರೆ ಪ್ರತಿ ವರ್ಷ ಕುಶಾಲನಗರದ ಸಾಯಿ ಬಡಾವಣೆಗೆ ಮಾತ್ರ ನೀರು ನುಗ್ಗಿ ಜನರು ಸ್ಥಳಾಂತರಗೊಳ್ಳುತ್ತಿರುವುದು ವಾಡಿಕೆ ಆಗಿದೆ. ಈ ಮೂಲಕ ಬಡಾವಣೆ ನಾಗರಿಕರ ಇಡೀ ಜನಜೀವನವೇ ಸಂಪೂರ್ಣ ಏರುಪೇರಾಗುತ್ತಿದೆ.
ಈ ಸಾಲಿನಲ್ಲಿ ಮೇನಲ್ಲೇ ಕಾವೇರಿ ನದಿ ಕುಶಾಲನಗರ ವ್ಯಾಪ್ತಿಯಲ್ಲಿ ತುಂಬಿ ಹರಿಯಲಾರಂಭಿಸಿದ್ದು, ಜನರ ನಿದ್ದೆಗೆಡಿಸಿದೆ. ಕಾವೇರಿ ಜಲಾನಯನ ಪ್ರದೇಶಗಳಾದ ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಮೂರ್ನಾಡು, ಸಿದ್ದಾಪುರ ಮತ್ತು ಮಡಿಕೇರಿ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದ ಮಳೆ ಬೀಳುತ್ತಿದ್ದು ಒಂದೇ ದಿನದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ 15 ಅಡಿಗಿಂತಲೂ ಹೆಚ್ಚು ಹರಿವಿನ ಪ್ರಮಾಣ ಏರಿಕೆ ಕಂಡು ಬರುತ್ತಿದ್ದು, ಇದು ದಾಖಲೆಯಾಗಿದೆ.ಮೇನಲ್ಲಿ ಮೂರು ಬಾರಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದು, ನದಿ ತಟದ ಜನಗಳು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿತ್ತು. ಕುಶಾಲನಗರದಲ್ಲಿ ನದಿ ತಟದ ತಗ್ಗು ಪ್ರದೇಶಗಳಿಗೆ ಸಾವಿರಾರು ಲೋಡ್‌ಗಳಷ್ಟು ಮಣ್ಣು ತುಂಬಿಸಿ ನದಿಯ ಮೂಲ ಸ್ವರೂಪವನ್ನು ಬಹುತೇಕ ಬದಲಾವಣೆ ಮಾಡಿರುವುದು ಕೂಡ ಇತ್ತೀಚಿನ ಆತಂಕಕಾರಿ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನುತ್ತಾರೆ ಸ್ಥಳೀಯರು.
ನದಿಗೆ ಸಂಪರ್ಕ ಕಲ್ಪಿಸುವ ಜಲಮೂಲಗಳ ಎಲ್ಲ ಮಾರ್ಗಗಳನ್ನು ಮಣ್ಣು ತುಂಬಿಸಿ ನೀರಿನ ಹರಿವಿಗೆ ಸಂಪೂರ್ಣ ಅಡ್ಡಿ ಉಂಟು ಮಾಡಿರುವುದು ಕೂಡ ಪಟ್ಟಣದ ವಿವಿಧ ಬಡಾವಣೆಗಳು ಮುಳುಗುವ ಸ್ಥಿತಿ ಉಂಟಾಗಲು ಇನ್ನೊಂದು ಕಾರಣವಾಗಿದೆ.ಕುಶಾಲನಗರದ ಬೈಚನಹಳ್ಳಿ ಇಂದಿರಾ ಬಡಾವಣೆ, ದಂಡಿನಪೇಟೆ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಕಳೆದ ಏಳು ವರ್ಷದಿಂದ ಪ್ರವಾಹ ಪರಿಸ್ಥಿತಿ ನಿರಂತರವಾಗಿ ಎದುರಾಗುತ್ತಿದೆ.ಕುವೆಂಪು ಬಡಾವಣೆಗೆ ಸರ್ಕಾರದ ಮೂಲಕ ಕಾವೇರಿ ನೀರಾವರಿ ನಿಗಮ ನದಿ ತಟದಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ಒಂದನ್ನು ರೂಪಿಸಿದ್ದು, ಅದು ಪ್ರವಾಹ ಬಡಾವಣೆಯ ಮನೆಗಳಿಗೆ ನುಗ್ಗುವುದನ್ನು ತಪ್ಪಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಆದರೆ ಅತಿ ತಗ್ಗು ಪ್ರದೇಶದಲ್ಲಿರುವ ಸಾಯಿ ಬಡಾವಣೆ ಮಾತ್ರ ನಿರಂತರವಾಗಿ ಕಳೆದ ಏಳು ವರ್ಷಗಳಿಂದ ಕಾವೇರಿ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಿದರೂ ಅದು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ.ಬಡಾವಣೆಯ ಒಂದು ಬದಿಯಲ್ಲಿ ರಾಜ ಕಾಲುವೆ ಇದ್ದು, ಅದರಲ್ಲಿ ಮಳೆಗಾಲದಲ್ಲಿ ಪಟ್ಟಣದ ಹಲವು ಬಡಾವಣೆಗಳ ನೀರು ಹರಿದು ನದಿ ಸೇರಬೇಕಾಗಿದೆ. ನದಿ ತಟದಲ್ಲಿ ಬಡಾವಣೆಯ ಕೊನೆ ಭಾಗದಲ್ಲಿ ಮಣ್ಣು ತುಂಬಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಆದರೆ ಇದರಿಂದ ಯಾವುದೇ ರೀತಿ ಪ್ರಯೋಜನ ಅಸಾಧ್ಯ ಎಂದು ಬಡಾವಣೆಯ ನಾಗರಿಕರು ತಿಳಿಸಿದ್ದಾರೆ. ಸಾಯಿ ಬಡಾವಣೆಯಲ್ಲಿ ನಿರ್ಮಾಣವಾದ ತಡೆಗೋಡೆ ಈಗಾಗಲೇ ಕುಸಿಯಲು ಆರಂಭಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಕುವೆಂಪು ಬಡಾವಣೆಯ ತಡೆಗೋಡೆ ಕಾಮಗಾರಿ ಯಶಸ್ಸು ಕಂಡಿದೆ. ಆದರೆ ಸಾಯಿ ಬಡಾವಣೆ ಕಾಮಗಾರಿಯಿಂದ ಪ್ರವಾಹದ ನೀರು ಬಡಾವಣೆಯ ಮನೆಗಳಿಗೆ ಒಳ ಬರುವುದನ್ನು ತಪ್ಪಿಸಲು ಅಸಾಧ್ಯವಾಗಲಿದೆ. ರಾಜಕಾಲುವೆ ಮೂಲಕ ಹರಿಯುವ ನೀರನ್ನು ನದಿಗೆ ಹರಿಯುವುದನ್ನು ಸ್ಥಗಿತಗೊಳಿಸಿದರೆ ಇಡೀ ಬಡಾವಣೆಯ ಮನೆಗಳು ಕಲುಷಿತ ನೀರಿನಿಂದ ಜಲಾವೃತಗೊಳ್ಳಲಿವೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ರಾಜ ಕಾಲುವೆಯ ನೀರಿನ ಹರಿವಿನ ಪ್ರಮಾಣವನ್ನು ನಿರ್ವಹಣೆ ಮಾಡಲು ಪುರಸಭೆ ಮುಂದಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಾಯಿ ಬಡಾವಣೆಯಲ್ಲಿ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.ಹಾರಂಗಿ ಅಣೆಕಟ್ಟಿನಿಂದ ಹಂತಹಂತವಾಗಿ ನೀರು ಬಿಡುವ ಯೋಜನೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು, ಯಾವುದೇ ಸಂದರ್ಭ ಅಣೆಕಟ್ಟಿನ ನೀರಿನಿಂದ ಪ್ರವಾಹ ಉಂಟಾಗದಂತೆ ಸಂಪೂರ್ಣ ಎಚ್ಚರ ವಹಿಸಲಾಗುವುದು.। ಐ.ಕೆ. ಪಟ್ಟಸ್ವಾಮಿ, ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರಕುಶಾಲನಗರ ಪುರಸಭೆ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ತಗ್ಗುಪ್ರದೇಶದ ಬಡಾವಣೆಗಳ ನಿವಾಸಿಗಳಿಗೆ ಪ್ರವಾಹದ ಅಪಾಯದಿಂದ ತಪ್ಪಿಸಿಕೊಳ್ಳಲು ಸ್ಥಳಾಂತರ ಆಗುವಂತೆ ಮುನ್ನೆಚ್ಚರಿಕೆಯ ನೋಟಿಸ್ ಎರಡನೇ ಬಾರಿ ನೀಡಲಾಗಿದೆ.
। ಗಿರೀಶ್, ಪುರಸಭೆ ಮುಖ್ಯ ಅಧಿಕಾರಿಅಣೆಕಟ್ಟು ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚಿಸಿದ್ದು, ಮಳೆಗಾಲದ ಅವಧಿಯಲ್ಲಿ ಪ್ರವಾಹದಿಂದ ಯಾವುದೇ ಸಂದರ್ಭ ನಿವಾಸಿಗಳಿಗೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
। ಡಾ.ಮಂತರ್ ಗೌಡ, ಮಡಿಕೇರಿ ಶಾಸಕ