ಕರಾವಳಿಗರ ಆರ್ಥಿಕತೆಗೆ ಬಲ ನೀಡುವ ಮಳೆಗಾಲ!

| Published : Jun 24 2024, 01:34 AM IST

ಸಾರಾಂಶ

ಜೂನ್‌ನಲ್ಲಿ ಉತ್ತಮ ಮಳೆ ಜತೆಗೆ ಗುಡುಗು ಬಂದರೆ ಕಲ್ಲಣಬೆ ಹೆಕ್ಕುವುದು, ತೋಡು, ನದಿಗಳಲ್ಲಿ ನೀರು ಹರಿದಾಗ ಏಡಿ, ಮೀನು ಹಿಡಿಯುವುದು ಈ ಭಾಗದಲ್ಲಿ ಸಾಮಾನ್ಯ. ಜತೆಗೆ ಏಡಿ, ಮೀನು ಹಿಡಿಯಲು ಗೂರಿಗಳ ಮಾರಾಟವೂ ಜೋರಾಗಿರುತ್ತದೆ.

ಮೀನು, ಏಡಿ, ಕಲ್ಲಣಬೆ ಹೆಕ್ಕುವ ಹಳ್ಳಿ ಜನ । ಗೂರಿಗಳಿಗೂ ಭಾರಿ ಬೇಡಿಕೆ, ಬೆಲೆರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಮಳೆಗಾಲ ಬಂತೆಂದರೆ ಕರಾವಳಿ ಪ್ರದೇಶದ ಜೀವಂತಿಕೆ ಇಮ್ಮಡಿಗೊಳಿಸುವ ಸಮಯ. ಜೊತೆಗೆ ಕರಾವಳಿಗರ ಆರ್ಥಿಕ ಸಬಲತೆಗೂ ಕಾರಣವಾಗುತ್ತದೆ. ಈ ಸಮಯದಲ್ಲಿ ಹಸುರು ಒಂದೆಡೆಯಾದರೆ, ಹಳ್ಳಿಗಳಲ್ಲಿ ಆಹಾರದ ಬೇಟೆ ಇನ್ನೊಂದೆಡೆ. ಜೂನ್‌ನಲ್ಲಿ ಉತ್ತಮ ಮಳೆ ಜತೆಗೆ ಗುಡುಗು ಬಂದರೆ ಕಲ್ಲಣಬೆ ಹೆಕ್ಕುವುದು, ತೋಡು, ನದಿಗಳಲ್ಲಿ ನೀರು ಹರಿದಾಗ ಏಡಿ, ಮೀನು ಹಿಡಿಯುವುದು ಈ ಭಾಗದಲ್ಲಿ ಸಾಮಾನ್ಯ. ಜತೆಗೆ ಏಡಿ, ಮೀನು ಹಿಡಿಯಲು ಗೂರಿಗಳ ಮಾರಾಟವೂ ಜೋರಾಗಿರುತ್ತದೆ.

ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶವಾದ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಜನರ ಬಾಯಲ್ಲಿ ‘ಉಬೆರ್ ಗುದ್ದರ ಪೋಯಾ’ ಎನ್ನುವ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಈ ಸಮಯದಲ್ಲಿ ಯುವಕರು ಮೀನು, ಏಡಿ ಹಿಡಿಯುವ ಕಾಯಕದಲ್ಲಿ ತೊಡಗಿರುತ್ತಾರೆ. ತೋಡು, ನದಿಯಲ್ಲಿ ಹಿಡಿದ ಏಡಿಗಳಿಗೆ ಬಲು ಬೇಡಿ. ಐದು ಏಡಿಗೆ 500ರಿಂದ 1 ಸಾವಿರ ರು. ವರೆಗೆ ಬೆಲೆಗೆ ಮಾರಾಟವಾಗುತ್ತದೆ.

ಏಡಿ ಹಿಡಿಯಲು ಗೂರಿಗಳ ಬಳಕೆ: ಏಡಿ ಹಿಡಿಯಲು ಗೂರಿಗಳನ್ನು ಬಳಸುತ್ತಾರೆ. ಗೂರಿಗಳಲ್ಲಿ ಏಡಿಗಳಿಗೆ ಆಹಾರವನ್ನು ಇಟ್ಟು ನೀರಿನಲ್ಲಿಟ್ಟು ಏಡಿ ಹಿಡಿಯಲಾಗುತ್ತದೆ. ಕಾರ್ಕಳ ತಾಲೂಕಿನ ಎಳ್ಳಾರೆ, ಚೆನ್ನಿಬೆಟ್ಟು, ಕಡ್ತಲ, ಮುನಿಯಾಲು ಪ್ರದೇಶಗಳಲ್ಲಿ ಕೆಲವು ಸಮುದಾಯದವರು ಗೂರಿಗಳನ್ನು ತಯಾರಿಸುತ್ತಾರೆ. ಗೂರಿಯೊಂದಕ್ಕೆ ಆಕಾರಕ್ಕೆ ತಕ್ಕಂತೆ 400- 500 ರು. ವರೆಗೆ ಬೆಲೆ ಇದೆ.

ಕಲ್ಲಣಬೆಗೂ ಬೇಡಿಕೆ: ಗುಡುಗು ಮಳೆಗೆ ಹುಟ್ಟುವ ಕಲ್ಲಣಬೆಗೂ (ತುಳುವಿನಲ್ಲಿ ಕಲ್ಲಲಾಂಬು) ಈ ಬಾರಿ ಭಾರಿ ಬೇಡಿಕೆ ಇದೆ. ಈ ಸಲ ಕಲ್ಲಣಬೆಗಳ ಲಭ್ಯತೆಯ ಪ್ರಮಾಣ ಕಡಿಮೆ ಇರುವುದರಿಂದ ಸೇರಿಗೆ 500-1000 ರು. ಬೆಲೆಗೆ ಮಾರಾಟವಾಗುತ್ತಿದೆ. ಹಾಗೆಯೇ ಬುಕ್ಕಿಂಗ್‌ ಮಾಡಿ ಕಲ್ಲಣಬೆ ಪಡೆಯುತ್ತಿದ್ದಾರೆ.

* ಗದ್ದೆ, ಹಳ್ಳಗಳು ಮೀನಿನ ಆಸರೆ:

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿಯುವ ನದಿಗಳಾದ ಸ್ವರ್ಣ, ಸೀತಾ ನದಿಗಳು, ಅದರ ಉಪನದಿಗಳ ಹೊಂಡಗಳಲ್ಲಿ ವಾಸಿಸುವ ಸಿಹಿ ನೀರಿನ ಮೀನುಗಳು ಒಂದು ಸ್ಥಳದಿಂದ ಬೇರೆ ಸ್ಥಳಕ್ಕೆ ವಲಸೆ ಹೋಗಿ ಮೊಟ್ಟೆ ಇಡುವ ಕಾಲ ಇದು. ಹೀಗಾಗಿ ಬೈಲು, ಗದ್ದೆಗಳಲ್ಲಿ ಮೀನುಗಳು ಟಾರ್ಚ್ ಲೈಟಿಗೆ ಹೊಳೆಯುತ್ತಾ ಕದಲದೆ ಹಳ್ಳಿಗರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತವೆ.

..................

ಮಳೆಗಾಲದಲ್ಲಿ ಕೆಲವು ಯುವಕರು ಉತ್ಸಾಹದಿಂದ ಮೀನು, ಏಡಿ ಹಿಡಿಯಲು ಕಾತರದಿಂದ ಕಾಯುವುದು ಇಲ್ಲಿ ಸಹಜವಾಗಿದೆ. ಅದೊಂದು ಹಳ್ಳಿಯ ಹುಡುಗರ ಕಾಯಕ ಕೂಡ ಹೌದು.

। ನಾರಾಯಣ ಗುಡಿಗಾರ್ ಕೆರುವಾಶೆ-----------------ಮಳೆಗಾಲ ಆರಂಭವಾದ ಕಾರಣ ಏಡಿಗಳನ್ನು ಹಿಡಿಯಲು ಗೂರಿಗಳನ್ನು ಕೊಂಡುಕೊಳ್ಳುತ್ತಾರೆ‌.‌ ನಿತ್ಯ 4-5 ಗೂರಿಗಳು ಮಾರಾಟವಾಗುತ್ತಿವೆ. ಅಲಂಕಾರಿಕ ವಸ್ತುವಾಗಿ ಬಳಸುವುದರಿಂದ ಕೂಡ ವರ್ಷವಿಡೀ ಬೇಡಿಕೆ ಇದೆ. ಆದರೆ ಮಳೆಗಾಲದಲ್ಲಿ ಏಡಿಗಾಗಿ ಬೇಡಿಕೆ ಹೆಚ್ಚು.

। ಸುಧಾಕರ ಚೆನ್ನಿಬೆಟ್ಟು ಎಳ್ಳಾರೆ, ಗೂರಿ ತಯಾರಕರು

-----------

ಕಳೆದ ಹತ್ತು ವರ್ಷಗಳಿಂದ ಕಲ್ಲಣಬೆ ಹೆಕ್ಕಿ ತಂದು ಕಾರ್ಕಳದ ಅಂಗಡಿಗಳಿಗೆ ಮಾರಾಟ ಮಾಡುತ್ತೇವೆ. ಈಗ ಉತ್ತಮ ಬೇಡಿಕೆ ಇದ್ದು, ಮುಂಗಡ ಬುಕ್ಕಿಂಗ್ ಕೂಡ ಮಾಡುತ್ತಾರೆ. ಕಲ್ಲಣಬೆ ಹುಡುಕುವುದು ಸವಾಲಿನ ಕೆಲಸವಾಗಿದೆ. ಈ ಬಾರಿ ಸೇರಿಗೆ 500 -1000 ರು. ವರೆಗೆ ಬೇಡಿಕೆ ಇದೆ. ಆದರೆ ಬೇಡಿಕೆ ಹೆಚ್ಚಾದಾಗ ಬೆಲೆಯು ಏರಿಕೆಯಾಗುತ್ತದೆ. ಕಳೆದ ಬಾರಿ ಸೇರಿಗೆ 2000 ರು. ವರೆಗೆ ಬೇಡಿಕೆ ಇತ್ತು.

। ಅಪ್ಪಿ ಹರಿಖಂಡಿಗೆ, ಕಲ್ಲಣಬೆ ಹುಡುಕುವವರು