ಸಾರಾಂಶ
ಹಾವೇರಿ: ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಡಾ. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಘಟಕ ಹಾಗೂ ಮಕ್ಕಳ ಸಹಾಯವಾಣಿ ಪ್ರಸಕ್ತ ಸಾಲಿನ ಮೊದಲನೇ ತ್ರೈಮಾಸಿಕ ಅವಧಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾಘಟಕದ ಸಭೆ ಹಾಗೂ ಮಕ್ಕಳ ಸಹಾಯವಾಣಿಯ ಪ್ರಗತಿ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ೨೭ ಬಾಲ್ಯವಿವಾಹ ಪ್ರಕರಣಗಳ ಪೈಕಿ ೨೫ ತಡೆಯಲಾಗಿದೆ, ಎರಡು ಬಾಲ್ಯವಿವಾಹ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಾಗ ಅಧಿಕಾರಿಗಳು, ಪೊಲೀಸರ ಸಹಕಾರ ಪಡೆದು ಬಾಲ್ಯವಿವಾಹ ತಡೆಗಟ್ಟಬೇಕು ಹಾಗೂ ಬಾಲ್ಯವಿವಾಹ ತಡೆಯುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು. ಬಾಲ್ಯ ವಿವಾಹ ನಿಷೇಧ, ಪೊಕ್ಸೋ ಕಾಯ್ದೆ ಹಾಗೂ ಮಕ್ಕಳ ಸಹಾಯವಾಣಿ-೧೦೯೮ರ ಕುರಿತು ಶಾಲಾ ಮುಖ್ಯೋಪಾಧ್ಯಾಯರಿಗೆ ಅರಿವು ಮೂಡಿಸಬೇಕು. ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಮಟ್ಟದಲ್ಲಿ ವಾರಕ್ಕೊಮ್ಮೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪೊಲೀಸ್, ಜಿಲ್ಲಾ ಮಕ್ಕಳ ರಕ್ಷಣಾಘಟಕ, ಮಕ್ಕಳ ಸಹಾಯವಾಣಿ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಥಳಿಯ ಮಟ್ಟದಲ್ಲಿ ಎರಡು ಅಥವಾ ಮೂರು ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಮಕ್ಕಳ ಸಹಾಯವಾಣಿ, ಪೊಕ್ಸೋಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ತಿಳಿಸಬೇಕು. ಕಾಯ್ದೆಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರೆ ಮಕ್ಕಳಮೇಲಾಗುವ ಅನ್ಯಾಯಗಳ ಬಗ್ಗೆ ತಿಳುವಳಿಕೆ ಬರುತ್ತದೆ ಎಂದರು.ಬಾಲ್ಯವಿವಾಹ, ಪೊಕ್ಸೋ ಪ್ರಕರಣಗಳನ್ನು ಕೂಡಲೇ ದಾಖಲಿಸಿಕೊಳ್ಳಲು ಹಾಗೂ ಬಾಲ ಗರ್ಭಿಣಿಯರ ಆಸ್ಪತ್ರೆಯ ಎಮ್.ಎಲ್.ಸಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿನ ಅನಾಥ, ಏಕಪೋಷಕ ಪೋಷಕ ಮಕ್ಕಳು, ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಲಕರ ಮಕ್ಕಳು, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರ ಪಾಲಕರ ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಪಾಲಕರ ಮಕ್ಕಳು, ವಿಚ್ಛೆದಿತ/ಪರಿತ್ಯಕ್ತ ಪಾಲಕರ ಮಕ್ಕಳು ಇದ್ದಲ್ಲಿ ಪ್ರಾಯೋಜಕತ್ವ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಲು ಅರಿವು ಮೂಡಿಸಬೇಕು. ಇಂತಹ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.ವಿಶೇಷ ಪಾಲನಾ ಯೋಜನೆಯಡಿ ೬೬೩ ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳತ್ತಿದ್ದು, ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಮಕ್ಕಳ ಸಹಾಯವಾಣಿಗೆ ಬಾಲಕಾರ್ಮಿಕ ಮಕ್ಕಳಿಗೆ ಸಂಬಂಧಪಟ್ಟ ಕರೆಗಳು ಬಂದರೆ, ಕೂಡಲೇ ಪ್ರಕರಣ ದಾಖಲಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಾಯೋಜಕತ್ವದಡಿ ಈಗಾಗಲೇ ೨೪೬ ಮಕ್ಕಳು ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ ಹೊಸದಾಗಿ ೨೩ ಮಕ್ಕಳ ನೋಂದಣಿಯಾಗಿದೆ. ಈ ಮಕ್ಕಳಿಗೆ ಬಿ.ಟಿ ಪೋರ್ಟಲ್ ಮೂಲಕ ಅನುದಾನ ಜಮೆ ಮಾಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಸಭೆಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸರ್ಕಾರಿ ಮತ್ತು ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.