ಸಾರಾಂಶ
ಕನ್ನಡಪ್ರಭವಾರ್ತೆ ತುಮಕೂರು
ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವುದರಿಂದ ಆರ್ಥಿಕವಾಗಿ ಸಬಲತೆ ಹೊಂದುವ ಬಗ್ಗೆ ಗ್ರಾಮೀಣ ಪ್ರದೇಶದವರಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಹಿರೇಹಳ್ಳಿಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತರಬೇತಿ ಪಡೆಯುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಉದ್ಯೋಗಾಕಾಂಕ್ಷಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಕಚೇರಿಯಲ್ಲಿ ತರಬೇತಿ ಸಂಸ್ಥೆಗಳು ನೀಡುವ ತರಬೇತಿ ಕುರಿತು ಭಿತ್ತಿ ಪತ್ರಗಳನ್ನು ಪ್ರಚುರಪಡಿಸಬೇಕು. ಸ್ವಚ್ಛ ವಾಹಿನಿ ಕಸದ ವಾಹನಗಳ ಧ್ವನಿವರ್ಧಕಗಳಲ್ಲಿ ತರಬೇತಿ ಪಡೆಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಧ್ವನಿ ಮುದ್ರಿಕೆಯ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸರ್ಕಾರವು ಹೊಸದಾಗಿ ವಿಶ್ವಕರ್ಮ ಸಮುದಾಯದವರಿಗೆ ತರಬೇತಿ ನೀಡುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಶೀಘ್ರ ತರಬೇತಿ ನೀಡಲು ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.ತರಬೇತಿ ಸಂಸ್ಥೆಗಳಲ್ಲಿ ವಸತಿಯುತ ತರಬೇತಿ ನೀಡುವುದರೊಂದಿಗೆ ಹೆಚ್ಚು ನಿರುದ್ಯೋಗಿಗಳಿರುವ ಗ್ರಾಮ ಪಂಚಾಯತಿಗಳಲ್ಲಿ ತರಬೇತಿ ಹಮ್ಮಿಕೊಳ್ಳಬೇಕು. ಇದರಿಂದ ಸಂಸ್ಥೆಗಳಲ್ಲಿ ನೀಡುವ ವಸತಿಯುತ ತರಬೇತಿಗೆ ಹಾಜರಾಗಲು ಸಾಧ್ಯವಾಗದವರು ತರಬೇತಿ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನಂತರ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆ ನಿರ್ದೇಶಕ ಎಸ್. ಅರುಣ್ ಕುಮಾರ್ ಮಾತನಾಡಿ, ಸಂಸ್ಥೆಯ ಸ್ಥಾಪನೆ, ನಿಗದಿಪಡಿಸಿಕೊಂಡ ಗುರಿ, ತರಬೇತಿಗಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಾಗೂ ಬಿಡುಗಡೆಯಾಗಬೇಕಾದ ಅನುದಾನ ವಿವರ, ಪ್ರಗತಿ ಸಾಧನೆಯ ಮಾಹಿತಿಯನ್ನು ನೀಡುತ್ತಾ, ಸಂಸ್ಥೆಯಲ್ಲಿ ಶೇ. ೯೦ ರಷ್ಟು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಸಂಸ್ಥೆ ಆರಂಭವಾದಾಗಿನಿಂದ ಈವರೆಗೂ ೧೮ ರಿಂದ ೪೫ ವರ್ಷದೊಳಗಿನ ೧೧೦೦೦ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ೨೦೨ ಅಭ್ಯರ್ಥಿಗಳಿಗೆ ಹೊಲಿಗೆ, ಅಗರಬತ್ತಿ, ದ್ವಿಚಕ್ರ ವಾಹನ ರಿಪೇರಿ, ಮೋಟಾರ್ ರಿವೈಂಡಿಂಗ್ ಸೇರಿದಂತೆ ವಿವಿಧ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಅಭ್ಯರ್ಥಿಗಳಿಗೆ ಸಂಸ್ಥೆಯಿಂದ ಅಲ್ಲದೆ ವಿವಿಧ ಬ್ಯಾಂಕ್, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಾಯೋಜಕತ್ವದಲ್ಲಿಯೂ ತರಬೇತಿ ನೀಡಲಾಗುವುದು. ಸಂಸ್ಥೆಯಿಂದ ತರಬೇತಿ ಪಡೆದವರಿಗೆ ಬ್ಯಾಂಕ್ ಮೂಲಕ ಸಾಲ-ಸೌಲಭ್ಯಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆ ರಾಜ್ಯ ನಿರ್ದೇಶಕ ಮಂಜುನಾಥ, ನಬಾರ್ಡ್‌ನ ಕೀರ್ತಿಪ್ರಭ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮಹದೇವಯ್ಯ, ಮಹಿಳಾ ಕಲ್ಯಾಣಾಧಿಕಾರಿ ಪವಿತ್ರಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ಜಾಹ್ನವಿ, ವಾರ್ತಾ ಇಲಾಖೆ ಆರ್. ರೂಪಕಲಾ, ಜಿಲ್ಲಾ ಪಂಚಾಯತಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಂಗಸ್ವಾಮಿ ಹಾಗೂ ವ್ಯವಸ್ಥಾಪಕ ಮಂಜುನಾಥ, ಸಂಸ್ಥೆಯ ಫ್ಯಾಕಲ್ಟಿಗಳಾದ ಡಾ. ರಮ್ಯಾ, ಪ್ರದೀಪ್, ವಿಕಲಚೇತನ ಶಿಬಿರಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.