ಕಿಲೋಗೆ ₹ 600 ತಲುಪಿದ ಒಣದ್ರಾಕ್ಷಿ ಬೆಲೆ!

| Published : Jul 20 2025, 01:15 AM IST

ಸಾರಾಂಶ

ಜನವರಿಯಿಂದ ಏಪ್ರಿಲ್‌ವರೆಗೆ ದ್ರಾಕ್ಷಿ ಕಟಾವಿಗೆ ಬರುತ್ತದೆ. ಈ ನಾಲ್ಕು ತಿಂಗಳಲ್ಲಿ ಹಸಿ ದ್ರಾಕ್ಷಿ ಎಲ್ಲ ಮಾರುಕಟ್ಟೆಗಳಲ್ಲಿ ಕಿಲೋಗೆ ₹100 ವರೆಗೆ ಸಿಗುತ್ತದೆ. ತೋಟಗಾರರು ಶೇ. 20ರಷ್ಟು ಮಾತ್ರ ಹಸಿ ದಾಕ್ಷಿಯನ್ನು ಮಾರಾಟ ಮಾಡುತ್ತಾರೆ

ಶಿವಾನಂದ ಅಂಗಡಿ ಹುಬ್ಬಳ್ಳಿ

ಒಣಕೊಬ್ಬರಿ ಬೆಲೆ ಹೆಚ್ಚಳದ ಬೆನ್ನಲ್ಲೇ ಎರಡು ತಿಂಗಳಿಂದ ಒಣದ್ರಾಕ್ಷಿಯ ಬೆಲೆ ಸಹ ಒಂದರಿಂದ ದುಪ್ಪಟ್ಟು, ಮೂರು ಪಟ್ಟು ಹೆಚ್ಚಳವಾಗಿದ್ದು, ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ದ್ರಾಕ್ಷಿ ಖರೀದಿಗೆ ಬಂದ ಗ್ರಾಹಕರು ಹೌಹಾರುತ್ತಿದ್ದಾರೆ.

ಎರಡ್ಮೂರು ತಿಂಗಳ ಹಿಂದಷ್ಟೇ ₹200ಗೆ ಕಿಲೋ ಸಿಗುತ್ತಿದ್ದ ಒಣದ್ರಾಕ್ಷಿ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ₹600 ಮಾರಾಟವಾಗುತ್ತಿದೆ. ಕಡಿಮೆ ಗುಣಮಟ್ಟದ್ದು ಸಹ ₹400ಗೆ ಕಿಲೋ ಮಾರಾಟವಾಗುತ್ತಿದೆ. ಹೀಗಾಗಿ ದ್ರಾಕ್ಷಿ ಖರೀದಿಗೆ ಬಂದವರೆಲ್ಲ ದರ ಕೇಳಿಯೇ ಇಷ್ಟೇಕೆ ದರ ಹೆಚ್ಚಳವಾಯ್ತು, ಇದಕ್ಕಿಂತ ಕಡಿಮೆ ಗುಣಮಟ್ಟದ ದ್ರಾಕ್ಷಿಯ ದರ ಹೇಗಿದೆ? ಹಿಂಗಾದರೆ ಗ್ರಾಹಕರು ಕೊಳ್ಳುವುದಾದರೂ ಹೇಗೆ? ಎಂದೆಲ್ಲಾ ಪ್ರಶ್ನೆಗಳನ್ನು ವ್ಯಾಪಾರಸ್ಥರಿಗೆ ಕೇಳುತ್ತಿದ್ದಾರೆ.

ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಮಹಾರಾಷ್ಟ್ರದ ಸಾಂಗಲಿ ಸೇರಿ ವಿವಿಧ ಭಾಗಗಳು ಹಾಗೂ ವಿಜಯಪುರದಿಂದ ದ್ರಾಕ್ಷಿ ಮಾರಾಟಕ್ಕೆ ಬರುತ್ತದೆ.

ಹೊಸ ವರ್ಷಕ್ಕೆ ಹಂಗಾಮು ಶುರು:

ಜನವರಿಯಿಂದ ಏಪ್ರಿಲ್‌ವರೆಗೆ ದ್ರಾಕ್ಷಿ ಕಟಾವಿಗೆ ಬರುತ್ತದೆ. ಈ ನಾಲ್ಕು ತಿಂಗಳಲ್ಲಿ ಹಸಿ ದ್ರಾಕ್ಷಿ ಎಲ್ಲ ಮಾರುಕಟ್ಟೆಗಳಲ್ಲಿ ಕಿಲೋಗೆ ₹100 ವರೆಗೆ ಸಿಗುತ್ತದೆ. ತೋಟಗಾರರು ಶೇ. 20ರಷ್ಟು ಮಾತ್ರ ಹಸಿ ದಾಕ್ಷಿಯನ್ನು ಮಾರಾಟ ಮಾಡುತ್ತಾರೆ. ಉಳಿದ 80ರಷ್ಟು ಭಾಗವನ್ನು ಪಕ್ಕದ ಖಾಲಿ ಹೊಲಗಳಲ್ಲಿ ಟೆಂಟ್‌ಗಳನ್ನು ಹಾಕಿ ಒಣದ್ರಾಕ್ಷಿಯನ್ನು ಸಿದ್ಧ ಮಾಡಿ ಶೀತಲಗೃಹಗಳಲ್ಲಿ ಇಟ್ಟುಕೊಂಡು ವರ್ಷದುದ್ದಕ್ಕೂ ದರ ಹೆಚ್ಚಳವಾದಾಗ ಮಾರಾಟ ಮಾಡುತ್ತಾರೆ. ಈಗ ದರವೂ ಹೆಚ್ಚಳವಾಗಿದ್ದು, ಸಗಟು ಮಾರುಕಟ್ಟೆಯಲ್ಲೇ ಬೆಳೆಗಾರರಿಗೆ ಕ್ವಿಂಟಲ್‌ಗೆ ₹35 ಸಾವಿರದಿಂದ ₹40 ಸಾವಿರ ವರೆಗೆ ದರ ಸಿಗುತ್ತಿದ್ದು, ಬೆಳೆಗಾರರು ಝಣ ಝಣ ಕಾಂಚಾಣ ಎಣಿಸುತ್ತಿದ್ದಾರೆ. ಅರಬ್‌ ರಾಷ್ಟ್ರಗಳು, ಶ್ರೀಲಂಕಾ ಸೇರಿ ವಿವಿಧ ದೇಶಗಳಿಗೂ ಗುಣಮಟ್ಟದ ಒಣ ದ್ರಾಕ್ಷಿ ರಫ್ತಾಗುತ್ತಿದ್ದು, ದ್ರಾಕ್ಷಿ ಬೇಸಾಯದಲ್ಲಿ ವಿಜಯಪುರ ಜಿಲ್ಲೆಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದೆ.

ವಿಜಯಪುರ ನಂಬರ್‌ ಒನ್‌: ದ್ರಾಕ್ಷಿ ಬೇಸಾಯದಲ್ಲಿ ಮಹಾರಾಷ್ಟ್ರ ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನದಲ್ಲಿದೆ. ರಾಜ್ಯದಲ್ಲಿ ವಿಜಯಪುರ ಜಿಲ್ಲೆ ನಂಬರ್‌ ಸ್ಥಾನದಲ್ಲಿದ್ದು, 30 ಸಾವಿರ ಹೆಕ್ಟೇರ್‌ನಲ್ಲಿ ರೈತರು ದ್ರಾಕ್ಷಿ ಬೆಳೆಯುತ್ತಾರೆ. ವಿಜಯಪುರ, ತಿಕೋಟಾ ಭಾಗದಲ್ಲಿ (11 ಸಾವಿರ ಹೆಕ್ಟೇರ್‌) ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದು, ಚಡಚಣ, ಬಾಗೇವಾಡಿ, ಸಿಂದಗಿ ತಾಲೂಕಿನಲ್ಲಿಯೂ ದ್ರಾಕ್ಷಿ ಬೆಳೆಯುತ್ತಾರೆ.

ಬಾಗಲಕೋಟೆ ಹಾಗೂ ಬೆಳೆಗಾವಿ ಜಿಲ್ಲೆಯಲ್ಲಿ 4ರಿಂದ 5 ಸಾವಿರ ಹೆಕ್ಟೇರ್‌, ಕಲಬುರಗಿ, ಬೆಂಗಳೂರು ಸೇರಿ ಇತರ ಕಡೆ ಕಡಿಮೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ ಎಂದು ವಿವರಿಸುತ್ತಾರೆ ತೋಟಗಾರಿಕೆ ಅಧಿಕಾರಿಗಳು.

ಔಷಧೀಯ ಗುಣಗಳ ಆಗರ: ಒಣದ್ರಾಕ್ಷಿ, ಅಂಜೂರ, ಉತ್ತತ್ತಿ ಇವು ಒಣಹಣ್ಣುಗಳಾಗಿದ್ದು, ರಕ್ತಹೀನತೆ ಸಮಸ್ಯೆಯಿಂದ ಬಳಲುವವರಿಗೆ ಇವು ಹೆಚ್ಚು ಉಪಯುಕ್ತವಾಗಿದ್ದು, ರಾತ್ರಿ ನೀರಿನಲ್ಲಿ ಒಣದ್ರಾಕ್ಷಿ ನೆನಸಿಟ್ಟು ಮಾರನೇ ದಿನ ಬೆಳಗ್ಗೆ ಆ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಲು ವೈದ್ಯರು ಹೇಳುತ್ತಾರೆ. ಖನಿಜ ಪದಾರ್ಥಗಳು, ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಒಣದ್ರಾಕ್ಷಿ ಸೇವನೆಯಿಂದ ದೇಹಕ್ಕೆ ಲಭಿಸುತ್ತದೆ. ಚರ್ಮದ ಕಾಂತಿಯು ಇದರಿಂದ ಹೆಚ್ಚಳವಾಗುತ್ತದೆ ಎಂದು ವೈದ್ಯರು ಒಣದಾಕ್ಷಿಯ ಮಹತ್ವ ವಿವರಿಸುತ್ತಾರೆ.

ತೋಟಗಾರರು ಶೇ. 20ರಷ್ಟು ಮಾತ್ರ ಹಸಿ ಇದ್ದಾಗ ಮಾರಾಟ ಮಾಡುತ್ತಾರೆ. ಉಳಿದ 80ರಷ್ಟು ಒಣದ್ರಾಕ್ಷಿ ರೆಡಿ ಮಾಡಿಕೊಳ್ಳುತ್ತಾರೆ.

ಮೂರು ಗುಣಮಟ್ಟದ ದ್ರಾಕ್ಷಿ ಇದ್ದು, ₹350ರಿಂದ ₹400 ವರೆಗೆ ಸಗಟು ಬೆಲೆ ಇದೆ. ವ್ಯಾಪಾರಸ್ಥರು ಶ್ರೀಲಂಕಾ, ಅರಬ್‌ ರಾಷ್ಟ್ರಗಳು, ಬಾಂಗ್ಲಾದೇಶಗಳಿಗೆ ದ್ರಾಕ್ಷಿ ಕಳಿಸುತ್ತಾರೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ ಬಾರಿ ದ್ರಾಕ್ಷಿ ಬೆಳೆ ಸರಾಸರಿ ಮಾತ್ರ ಬಂದಿದ್ದು, ಅಭಾವ ಉಂಟಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ಒಣದ್ರಾಕ್ಷಿಗೆ ಶ್ರೀಲಂಕಾ, ಅರಬ್‌ ಕಂಟ್ರಿಗಳಲ್ಲಿ ಬಹುಬೇಡಿಕೆ ಇದ್ದು, ಅಲ್ಲಿಗೆ ರಫ್ತಾಗುತ್ತಿದೆ. ಹೀಗಾಗಿ ಬೆಲೆ ಹತೋಟಿಗೆ ಬರುತ್ತಿಲ್ಲ ಎಂದು ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್‌ಕುಮಾರ ಬಾವಿದೊಡ್ಡಿ

ಹುಬ್ಬಳ್ಳಿ ಸೇರಿದಂತೆ ರಾಜ್ಯದ ಮಾರುಕಟ್ಟೆಗಳಿಗೆ ವಿಜಯಪುರ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯಿಂದ ಒಣದ್ರಾಕ್ಷಿ ಬರುತ್ತದೆ. ಮಾರುಕಟ್ಟೆಯಲ್ಲಿ ಒಣದ್ರಾಕ್ಷಿಯ ಅಭಾವವಿದ್ದು, ಹೀಗಾಗಿ ದರ ಹತೋಟಿಗೆ ಬರುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರಿದರೆ ಕಿಲೋಗೆ ಒಣದ್ರಾಕ್ಷಿ ರು.800 ವರೆಗೂ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹುಬ್ಬಳ್ಳಿ ಡ್ರೈಫ್ರುಟ್‌ ವ್ಯಾಪಾರಸ್ಥ ವಿನಾಯಕ ತಿಳಿಸಿದ್ದಾರೆ.