ಸಾರಾಂಶ
-ತಹಸೀಲ್ದಾರ್ ಜೆ. ಮಂಜುನಾಥ್ ಅಭಿಮತ------ಕನ್ನಡಪ್ರಭ ವಾರ್ತೆ ಹುಣಸೂರು ಅಸಮಾನತೆ ಇಲ್ಲದ, ಅನ್ಯಾಯಗಳಿಲ್ಲದ, ಜಾತಿ ಭೇದವಿಲ್ಲದ ಸಂತಸದ ರಾಜ್ಯವೇ ರಾಮ ರಾಜ್ಯವಾಗಿದ್ದು, ಈ ಪರಿಕಲ್ಪನೆ ಮಹರ್ಷಿ ವಾಲ್ಮೀಕಿಯ ರಾಮಾಯಣದ ಮೂಲಕ ಪ್ರಚಲಿತವಾಗಿದೆ ಎಂದು ತಹಸೀಲ್ದಾರ್ ಜೆ. ಮಂಜುನಾಥ್ ಅಭಿಪ್ರಾಯಪಟ್ಟರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.ಜಗತ್ತಿನಲ್ಲಿ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ. ಆದರೆ ಈ ರಾಮಾಯಣಗಳೆಲ್ಲ ಆದಿಕವಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಮೇಲೆ ಅವಲಂಭಿತವಾಗಿದೆ. ಕುವೆಂಪು ಬರೆದ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ವಾಲ್ಮೀಕಿ ರಾಮಾಯಣವು ಪ್ರಭು ಶ್ರೀ ರಾಮನ ಉದಾರಚರಿತವನ್ನು ಹಾಗೆಯೇ ರಾಮ ಹೇಗೆ ಮನುಷ್ಯತ್ವದಿಂದ ದೈವತ್ವಕ್ಕೇರಿದ ಎಂಬುದನ್ನು ಹೇಳುತ್ತದೆ. ರಾಮನ ಪ್ರಜಾಸತ್ತಾತ್ಮಕ ಆಡಳಿತವೇ ರಾಮರಾಜ್ಯವೆಂದು ಪ್ರಖ್ಯಾತವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಎಚ್.ಬಿ. ವಿಜಯ್ ಕುಮಾರ್ ಮಾತನಾಡಿ, ವಾಲ್ಮೀಕಿ ತನ್ನ ಮಹಾಕಾವ್ಯ ರಾಮಾಯಣದ ಮೂಲಕ ಹೇಗೆ ವಿಶ್ವವಂದ್ಯನಾಗಿದ್ದಾನೆಂಬುದನ್ನು ವಿವರಿಸಿದರು.ಇಂತಹ ಮಹಾನ್ ಚೇತನಗಳು ದೇಶ, ಕಾಲ, ಜಾತಿ, ಜನಾಂಗದ ಸೀಮಿತ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತವೆ ಎಂದರು. ಹುಣಸೂರಿನ ಜನತೆ ತಮ್ಮ ಜಾತ್ಯತೀತ ಮೌಲ್ಯಗಳಿಗೆ ಹೆಸರಾಗಿದೆ ಎಂದು ಸಂತಸಪಟ್ಟರು.ತಾಲೂಕು ನಾಯಕರ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ, ನಗರಸಭಾ ಸದಸ್ಯ ದೇವರಾಜು ಮಾತನಾಡಿದರು.ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ರೈತ ಸಂಘದ ಜಿಲ್ಲಾಧ್ಯಕ್ಷ ಕುಮಾರ್, ಚಿಕ್ಕಣ್ಣ, ದಲಿತ ಮುಖಂಡರಾದ ನಿಂಗರಾಜ್ ಮಲ್ಲಾಡಿ, ಡಿ. ಕುಮಾರ್, ಶಿವಣ್ಣ, ಚಿಕ್ಕಸ್ವಾಮಿ, ಎಂ. ದೇವರಾಜು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಮುನಿಯಪ್ಪ, ಪೌರಾಯುಕ್ತೆ ಕೆ. ಮಾನಸ, ತಾಪಂ ಇಒ ಕೆ. ಹೊಂಗಯ್ಯ, ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್. ಜಯರಾಂ, ಪಿ.ಆರ್. ರಾಚಪ್ಪ, ಸುಬ್ಬರಾವ್, ಅಧಿಕಾರಿಗಳು ಮತ್ತು ನಾಗರಿಕರು ಇದ್ದರು.