ರಮೇಶ್‌ ಕುಮಾರ್ ವಿವಾದಿತ ಭೂಮಿ ಸರ್ವೇಗೆ ನ.೬ ಮುಹೂರ್ತ ನಿಗದಿ

| Published : Oct 31 2024, 12:50 AM IST

ರಮೇಶ್‌ ಕುಮಾರ್ ವಿವಾದಿತ ಭೂಮಿ ಸರ್ವೇಗೆ ನ.೬ ಮುಹೂರ್ತ ನಿಗದಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ತಿಂಗಳ ಒಳಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಉಪಸ್ಥಿತಿಯಲ್ಲಿ ಕಂದಾಯ, ಸರ್ವೇ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಬೇಕು ಮತ್ತು ಅರಣ್ಯ ಅತಿಕ್ರಮಣ ಸರ್ವೇ ಸಮಯದಲ್ಲಿ ಗುರುತಿಸಲಾದ ಯಾವುದಾದರೂ ಅಸ್ಥಿತ್ವದಲ್ಲಿರುವ ಕಾನೂನು ಪ್ರಕಾರ ಹೊರಹಾಕಲ್ಪಟ್ಟಿದ್ದರೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು ಎಂಬುದು ಗಮನಾರ್ಹ.

ಕನ್ನಡಪ್ರಭ ವಾರ್ತೆ ಕೋಲಾರ

ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಅವರಿಗೆ ಸೇರಿದ ವಿವಾದಿತ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಸಮೀಪದ ಜಿಂಗಾಲಕುಂಟೆ ಅರಣ್ಯದ ೬೧.೩೯ ಎಕರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ.೬ರಂದು ಬೆಳಗ್ಗೆ ೧೧ ಗಂಟೆಗೆ ಜಂಟಿ ಭೂ ಸಮೀಕ್ಷೆ ನಡೆಸಲು ಜಿಲ್ಲಾಡಳಿತವು ದಿನಾಂಕ ನಿಗದಿಪಡಿಸಿದೆ.

ಈ ಕುರಿತು ಅ.೨೮ರಂದು ಕೋಲಾರ ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀನಿವಾಸಪುರ ತಹಸೀಲ್ದಾರ್ ಮತ್ತು ರಮೇಶ್‌ಕುಮಾರ್ ಅವರಿಗೆ ಪತ್ರ ಬರೆದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಮೇಲೆ ಜಂಟಿ ಅಳತೆ ಕಾರ್ಯ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ನ.೬ರಂದು ಬೆಳಗ್ಗೆ ೧೧ ಗಂಟೆಗೆ ಜಂಟಿ ಸರ್ವೇ ನಡೆಸಲಿದ್ದು, ತಮ್ಮ ಬಳಿಯ ದಾಖಲೆಗಳ ಸಮೇತ ಹಾಜರಿರಬೇಕು ಎಂದು ತಿಳಿಸಿದ್ದಾರೆ.

ಎರಡು ತಿಂಗಳ ಒಳಗೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಉಪಸ್ಥಿತಿಯಲ್ಲಿ ಕಂದಾಯ, ಸರ್ವೇ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಬೇಕು ಮತ್ತು ಅರಣ್ಯ ಅತಿಕ್ರಮಣ ಸರ್ವೇ ಸಮಯದಲ್ಲಿ ಗುರುತಿಸಲಾದ ಯಾವುದಾದರೂ ಅಸ್ಥಿತ್ವದಲ್ಲಿರುವ ಕಾನೂನು ಪ್ರಕಾರ ಹೊರಹಾಕಲ್ಪಟ್ಟಿದ್ದರೆ

ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು ಎಂಬುದು ಗಮನಾರ್ಹ.

ಅರಣ್ಯ ಇಲಾಖೆಯು ಒತ್ತುವರಿ ಆಗಿದೆ ಎಂದು ನೀಡಿದ್ದ ನೋಟೀಸಿನ ವಿರುದ್ಧ ೨೦೧೩ರಲ್ಲಿ ರಮೇಶ್‌ಕುಮಾರ್ ಹೈಕೋರ್ಟ್‌ನಲ್ಲಿ ತಕರಾರು ಸಲ್ಲಿಸಿದ್ದರು. ತಾವು ಬೇರೆಯವರ ಬಳಿ ಈ ಭೂಮಿ ಖರೀದಿಸಿದ್ದು ತಮ್ಮದು ಐದನೇ ಕೈಯಾಗಿದೆ. ಅದಕ್ಕೂ ಮುನ್ನ ನಡೆದಿರುವ ಮಾರಾಟ ಪ್ರಕ್ರಿಯೆಗಳು ಮತ್ತು ಮಾರಾಟಗಾರರ ಬಳಿ ಇದ್ದ ದಾಖಲೆಗಳನ್ನು ಆಧರಿಸಿ ತಾವು ಖರೀದಿಸಿದ್ದು, ಅರಣ್ಯ ಭೂಮಿ ಒತ್ತುವರಿ ಆಗಿಲ್ಲ ಎಂದು ವಾದಿಸಿದ್ದರು.

ಇದರ ಆಧಾರದ ಮೇಲೆ ಕರ್ನಾಟಕ ಹೈಕೋರ್ಟ್ ಅರ್ಜಿದಾರರ ಸಮಕ್ಷಮದಲ್ಲಿ ತ್ರಿಪಕ್ಷೀಯ ಜಂಟಿ ಸರ್ವೇ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

ಹೈಕೋರ್ಟ್ ಸೂಚನೆಯನ್ನು ಇದುವರೆಗೂ ಪಾಲಿಸಿಲ್ಲ ಎಂದು ವಕೀಲ ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ ಮತ್ತು ಬೆಂಗಳೂರು ಗಾಂಧಿನಗರ ಭಾಸ್ಕರರೆಡ್ಡಿ ಎಂಬುವರು ಸಲ್ಲಿಸಿದ್ದ ದೂರಿನ ಮೇಲೆ ಅಕ್ಟೋಬರ್ ೮ರಂದು ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ವೈಫರಿತ್ಯ ಮಂತ್ರಾಲಯವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕರ್ನಾಟಕ ಹೈಕೋರ್ಟ್ ಆದೇಶದ ಪ್ರಕಾರ ವಿವಾದಿತ ಭೂಮಿ ಕುರಿತು ಜಂಟಿ ಸರ್ವೇ ಮಾಡಬೇಕು. ಈ ಭೂಮಿಯಲ್ಲಿ ಅರಣ್ಯ ಒತ್ತುವರಿ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಎರಡು ತಿಂಗಳ ಒಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು.