ಸಾರಾಂಶ
ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಲು ಸಂಸದ ಜಿ.ಎಂ.ಸಿದ್ದೇಶ್ವರರೇ ಕಾರಣವಾಗಿದ್ದು, ಮೂವರು ಶಾಸಕರ ಕೊರತೆ ಇದ್ದ ಸ್ಥಿತಿಯಲ್ಲಿ ಇಬ್ಬರು ಪಕ್ಷೇತರರನ್ನು ಬಿಜೆಪಿ ಕರೆ ತಂದು ಕೊಟ್ಟವರು ಸಿದ್ದೇಶಣ್ಣ ಎಂಬುದನ್ನು ಯಾರೂ ಮರೆಯಬಾರದು ಎಂದು ಆರ್.ಅಶೋಕ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಲು ಸಂಸದ ಜಿ.ಎಂ.ಸಿದ್ದೇಶ್ವರರೇ ಕಾರಣವಾಗಿದ್ದು, ಮೂವರು ಶಾಸಕರ ಕೊರತೆ ಇದ್ದ ಸ್ಥಿತಿಯಲ್ಲಿ ಇಬ್ಬರು ಪಕ್ಷೇತರರನ್ನು ಬಿಜೆಪಿ ಕರೆ ತಂದು ಕೊಟ್ಟವರು ಸಿದ್ದೇಶಣ್ಣ ಎಂಬುದನ್ನು ಯಾರೂ ಮರೆಯಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ ಈಗ ಸಿದ್ದೇಶ್ವರರ ವಿರೋಧಿಸುತ್ತಿರುವವರಿಗೆ ಕಿವಿಮಾತು ಹೇಳಿದ್ದಾರೆ.
ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಹಳೆ ವಾಣಿ ಹೊಂಡಾ ಶೋ ರೂಂನಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರ ಪ್ರಚಾರ ಕಾರ್ಯಾಲರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ದಾವಣಗೆರೆ ಕ್ಷೇತ್ರದಿಂದ ಸಂಸದ ಸಿದ್ದೇಶ್ವರರ ಪತ್ನಿ ಗಾಯತ್ರಿ ಅಕ್ಕನವರು ಗೆಲ್ಲಬೇಕು. ಇಲ್ಲಿ ಗಾಯತ್ರಿ ಅಕ್ಕನವರು ಗೆದ್ದರೆ ಅಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದರು.
ತಕ್ಷಣವೇ ನಾನು ಸಂಸದ ಸಿದ್ದೇಶ್ವರರಿಗೆ ಕರೆ ಮಾಡಿದೆ. ಇಬ್ಬರು ಪಕ್ಷೇತರರನ್ನು ಕರೆ ತಂದಿದ್ದೇ ಸಿದ್ದೇಶಣ್ಣ, ಅಂದು ಬಿಜೆಪಿ ಸರ್ಕಾರ ರಚನೆಯಾಗಲು, ಯಡಿಯೂರಪ್ಪನವರು ಸಿಎಂ ಆಗಲು, ನಮ್ಮ ಮುಖಂಡರು ಸಚಿವರಾಗಿದ್ದೇ ಸಿದ್ದೇಶಣ್ಣನ ಪ್ರಯತ್ನದಿಂದ ಸಿದ್ದೇಶ್ವರವರು ಅವತ್ತು ಇಲ್ಲದೇ ಇದ್ದಿದ್ದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಸಿದ್ದೇಶಣ್ಣನ ದೊಡ್ಡ ಪರಿಶ್ರಮ ಇದೆ. ಸಿದ್ದೇಶಣ್ಣ ಏನು ತಪ್ಪು ಮಾಡಿ ದ್ದಾರೆ? ಬಿಜೆಪಿ ಬಾವುಟವನ್ನು ಕಟ್ಟಿ, ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ನಮ್ಮ ಜವಾಬ್ದಾರಿ ಅರಿತು, ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದು ಅತೃಪ್ತರಿಗೆ ಮಾತಿನಲ್ಲೇ ಚಾಟಿ ಬೀಸುವ ಮೂಲಕ ನೀವು ಸಚಿವರಾಗಲೂ ಸಿದ್ದೇಶ್ವರ ಪ್ರಯತ್ನ ಕಾರಣವೆಂಬ ಸಂದೇಶವನ್ನೂ ಸೂಚ್ಯವಾಗಿ ರವಾನಿಸಿದರು.
ಗೊಂದಲ ವಾರದಲ್ಲೇ ಶಮನ, ಶೀಘ್ರ ಸಭೆ ರೇಣುಕಾಚಾರ್ಯ, ರವೀಂದ್ರನಾಥ ಜೊತೆ ಮಾತಾಡ್ತೀನಿ: ಅಶೋಕ್
ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆ ನಂತರ ವಿರೋಧ, ಗೊಂದಲ ಸಹಜ. ದಾವಣಗೆರೆ ಕ್ಷೇತ್ರದಲ್ಲೂ ಯಾವುದೇ ಗೊಂದಲ ಇದ್ದರೂ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಕ್ಷೇತ್ರದಲ್ಲಿ ಸಂಸದ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಟಿಕೆಟ್ ನೀಡಿದ್ದು, ಏನೇ ಗೊಂದಲ ಇದ್ದರೂ ನಮ್ಮ ಗುರಿ ಮಾತ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಮಾಡುವುದಾಗಿದೆ.
ಎಲ್ಲಾ ಕಡೆ ಗೊಂದಲ ಇರುವಂತೆ ಇಲ್ಲಿಯೂ ಇದ್ದೇ ಇದೆ. ಇನ್ನೊಂದು ವಾರ ಕಳೆದ ನಂತರ ಎಲ್ಲವೂ ಸುಧಾರಣೆಯಾಗಲಿದೆ.ಯಾರೂ ಬಂಡಾಯವಾಗಿ ನಿಲ್ಲುವ ಪರಿಸ್ಥಿತಿ ಇಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹಿರಿಯರಾದ ಎಸ್.ಎ.ರವೀಂದ್ರನಾಥ್ ರ ಜೊತೆಗೆ ಚರ್ಚಿಸುತ್ತೇನೆ. ಎಲ್ಲರನ್ನೂ ಕರೆಸಿ ಮಾತನಾಡುತ್ತೇವೆ. ರೇಣುಕಾಚಾರ್ಯ ಸಹ ಸಿದ್ದೇಶ್ವರರ ಶಿಷ್ಯ, ಕಳೆದ ವಿಧಾನಸಭೆ ಚುನಾವಣೆ ನಂತರ ಗೊಂದಲದಿಂದಾಗಿ ಹೀಗೆಲ್ಲಾ ಆಗಿದೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.
ಲೋಕಸಭೆ ನಿಲ್ಲಲೊಪ್ಪದ ಕಾಂಗ್ರೆಸ್ ಸಚಿವರು ಬಿಜೆಪಿ ಸಂಸದರ ಹಿಂದೆ ಬಿದ್ದ ಕಾಂಗ್ರೆಸ್-ಆರ್.ಅಶೋಕ
ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಇರುವವರನ್ನು ಲೋಕಸಭೆ ಚುನಾವಣೆ ನಿಲ್ಲುವಂತೆ ಆ ಪಕ್ಷದ ನಾಯಕರೇ ಹೇಳಿದರೂ, ಯಾರೊಬ್ಬರೂ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಸಿನ ಸಚಿವರ ಪೈಕಿ ಯಾರೊಬ್ಬರೂ ಸ್ಪರ್ಧೆಗೆ ಉತ್ಸಾಹವನ್ನಾಗಲೀ, ಆಸಕ್ತಿಯನ್ನಾಗಲೀ ತೋರಿಸುತ್ತಿಲ್ಲ. ಬದಲಾಗಿ ಬಿಜೆಪಿ ಸಂಸದರ ಹಿಂದೆ ಬಿದ್ದಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವಂತೆ ಭಿಕ್ಷೆ ಬೇಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಗತಿಗೆಟ್ಟ ಪಕ್ಷವಾಗಿ ಕಾಂಗ್ರೆಸ್ ಈಗ ಮಾರ್ಪಟ್ಟಿದೆ ಎಂದರು. ಬೆಂಗಳೂರು ಗ್ರಾಮಾಂತರಕ್ಕೆ ಗೆಲ್ಲುವಂತಹ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲಲಿದೆ ಎಂದು ತಿಳಿಸಿದರು.
ಪಾಕ್ ಪರ ಘೋಷಣೆ, ಕಾಂಗ್ರೆಸ್ ಮೌನ ಏಕೆ: ಆರ್.ಅಶೋಕ
ವಿಧಾನಸೌಧದಲ್ಲೇ ಪಾಕಿಸ್ಥಾನ ಜಿಂದಾಬಾದ್ ಅಂತಾ ಕೂಗಿದ್ದರೂ, ಹಾಗೆಲ್ಲಾ ಕೂಗಿಲ್ಲವೆಂದಿದ್ದ ಕಾಂಗ್ರೆಸ್ಸಿನ ನಾಯಕರು ಈಗ ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂಬ ವರದಿ ಕೈಸೇರುತ್ತಿದ್ದಂತೆ ಯಾರೊಬ್ಬರು ಮಾತನಾಡುತ್ತಿಲ್ಲ ಏಕೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಪರ ಘೋಷಣೆಯನ್ನೇ ಕೂಗಿಲ್ಲ. ಇದೆಲ್ಲಾ ಮಾಧ್ಯಮಗಳು, ವಿಪಕ್ಷಗಳ ಪ್ರಚಾರ ಅಂತೆಲ್ಲಾ ಪೈಪೋಟಿಯಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ಸಿನ ಯಾರೊಬ್ಬರೂ ವರದಿ ಕೈಸೇರಿದ ನಂತರ ಮೌನಕ್ಕೆ ಶರಣಾಗಿದ್ದಾರೆ ಎಂದರು.