ಸಾರಾಂಶ
ಹಾವೇರಿ: ಮಾನವೀಯ ಮೌಲ್ಯಗಳ ತತ್ವದಡಿ, ನೈಸರ್ಗಿಕ ವಿಕೋಪ ಹಾಗೂ ಜನರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುವ ರೆಡ್‌ಕ್ರಾಸ್ ಸಂಸ್ಥೆಯ ಸೇವೆ ಜಿಲ್ಲೆಯ ಜನರಿಗೆ ಇನ್ನೂ ಹೆಚ್ಚು ದೊರೆಯಲಿ ಎಂದು ವಿಧಾನಸಭಾ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಚೇರಿ (ಆರ್‌ಟಿಒ ಕಚೇರಿ ಹತ್ತಿರ) ಬ್ಲಡ್ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ರೆಡ್‌ಕ್ರಾಸ್ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಜನಜಾಗೃತಿ ಮೂಡಿಸುವ ಕೊಡುಗೆ ನೀಡುತ್ತಿದೆ. ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕ್ ಮಾಡಲು ಕಟ್ಟಡದ ಅವಶ್ಯಕತೆ ಇದೆ ಎಂದು ಹೇಳಿದಾಗ ₹೫ ಲಕ್ಷ ಅನುದಾನ ನೀಡಲಾಗಿದೆ. ಉತ್ತಮ ಕೆಲಸಕ್ಕೆ ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆ ಬಿದ್ದರೆ ನೀಡಲು ಬದ್ಧನಾಗಿದ್ದೇನೆ. ಎಲ್ಲರೂ ಸೇರಿಕೊಂಡು ಜನರ ಸೇವೆ ಮಾಡಲು ಮುಂದಾಗೋಣ ಎಂದರು.ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜಿಲ್ಲೆಯ ಜನರಿಗೆ ಬ್ಲಡ್ ಬ್ಯಾಂಕ್ ತುಂಬಾ ಉಪಯೋಗವಾಗಲಿದೆ. ಶೀಘ್ರವಾಗಿ ಕಟ್ಟಡ ನಿರ್ಮಾಣ ಕಾರ್ಯ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ರೆಡ್‌ಕ್ರಾಸ್ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಜಾಗೆಯಲ್ಲಿಯೇ ಕಟ್ಟಡ ಮಾಡುವುದರಿಂದ ಶಾಶ್ವತ ಆಸ್ತಿ ಉಳಿದಂತಾಗುತ್ತದೆ. ಸರ್ಕಾರದ ಮಟ್ಟದಿಂದ ಇನ್ನೂ ಹೆಚ್ಚು ಅನುದಾನ ತರಲು ಪ್ರಯತ್ನ ಮಾಡೋಣ ಎಂದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ನಗರಸಭೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಗೌರವ ಕಾರ್ಯದರ್ಶಿ ಡಾ. ಎಂ.ಎನ್. ನೀಲೇಶ, ಸಹಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಹನುಮಂತಗೌಡ್ರ ಗೊಲ್ಲರ, ಡಾ. ಪ್ರದೀಪ ದೊಡ್ಡಗೌಡ್ರ, ರವಿ ಹಿಂಚಿಗೇರಿ, ವಿಜಯಕುಮಾರ ಚಿನ್ನಿಕಟ್ಟಿ, ನಿರ್ಮಿತಿ ಕೇಂದ್ರದ ಎಂಜಿನಿಯರ್ ವಿಶ್ವನಾಥ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಯೋಜನಾ ಸಹಾಯಕ ಆಕಾಶ ಯಡಹಳ್ಳಿ, ಡಿಡಿಆರ್‌ಸಿ ಸಂಯೋಜಕ ಡಾ. ಅಂಕಿತ ಆನಂದ, ಇರ್ಶಾದ ಅಲಿ ದುಂಡಸಿ ಸೇರಿದಂತೆ ಇತರರು ಇದ್ದರು.