ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಸಾಕಷ್ಟು ಜಾಗೃತಿ ಮತ್ತು ನಿಯಂತ್ರಣ ಕ್ರಮವನ್ನು ಕೈಗೊಂಡ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ 9,454 ಎಚ್‌ಐವಿ ಸೋಂಕಿತರಿದ್ದಾರೆ.2002ರಿಂದ 2022ರ ವರೆಗೆ ಜಿಲ್ಲೆಯಲ್ಲಿ 8,01,661 ಸಾಮಾನ್ಯ ಜನರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 9,454 ಎಚ್‌ಐವಿ ಸೋಂಕಿತರಿದ್ದಾರೆ. 6,01,016 ಗರ್ಭಿಣಿಯರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 681 ಎಚ್‌ಐವಿ ಸೋಂಕಿತರಾಗಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯ ಎಆರ್‌ಟಿ ಕೇಂದ್ರದಲ್ಲಿ ಪ್ರಸ್ತುತ ಎಚ್‌ಐವಿ ಸೋಂಕಿತ ನೋಂದಣಿಯಾದವರ ಸಂಖ್ಯೆ 8,737 ಇದ್ದು, 7,464 ಸೋಂಕಿತರಿಗೆ ಎಆರ್‌ಟಿ ಮಾತ್ರೆಯನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ 4,323 ಎಚ್‌ಐವಿ ಸೋಂಕಿತರು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಏಡ್ಸ್ ಒಬ್ಬ ವ್ಯಕ್ತಿಯ ಸಮಸ್ಯೆಯಾಗದೇ ಸಮಾಜದ ಆರೋಗ್ಯ ಮ್ತತು ಸಾಮಾಜಿಕ ಅಭಿವೃದ್ಧಿಗೆ ಸವಾಲಾಗಿದೆ. ಜನ ಸಾಮಾನ್ಯರ ಮನದಲ್ಲಿ ಎಚ್‌ಐವಿ ಸೋಂಕು ಮತ್ತು ಸೋಂಕಿನೊಂದಿಗೆ ಬದುಕುತ್ತಿರುವವರ ಬಗ್ಗೆ ಕಳಂಕ ಮತ್ತು ತಾರತಮ್ಯದ ಭಾವನೆಗಳು ಗ್ರಹಣ ಹಿಡಿಸಿದೆ. ಹೀಗಾಗಿ ಅವರು ಎಲ್ಲರಂತೆ ಬದುಕುವ ಹಕ್ಕು, ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗಬೇಕಾದ ಸಾಮಾಜಿಕ ಸವಲತ್ತುಗಳಿಂದ ವಂಚಿತರನ್ನಾಗಿಸಿದೆ. ಆದ್ದರಿಂದ ಏಡ್ಸ್ ಇಂದಿನ ಸಮಾಜದಲ್ಲಿ ದೊಡ್ಡ ಸವಾಲಾಗಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು ದೇಶದಲ್ಲಿ ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ 2024ನೇ ಸಾಲಿನಲ್ಲಿ ‘ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ ನನ್ನ ಆರೋಗ್ಯ-ನನ್ನ ಹಕ್ಕು’ ಎಂಬ ಧ್ಯೇಯವಾಕ್ಯದೊಂದಿಗೆ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸುತ್ತಿದೆ. ಪ್ರಸ್ತುತ ಏಡ್ಸ್ ಎಂಬ ಸವಾಲನ್ನು ಎದುರಿಸಲು ಮತ್ತು ನಿರ್ಮೂಲನೆಗೊಳಿಸಲು ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕವು ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಸೇವಾ ಸೌಲಭ್ಯ, ಆಪ್ತಸಮಾಲೋಚನೆ, ಚಿಕಿತ್ಸೆ, ಜನಜಾಗೃತಿ ಅಭಿಯಾನ ಮತ್ತು ಜಾಥಾದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ.ಎಚ್‌ಐವಿ ಸೋಂಕಿತರಿಗೆ ಸೌಲಭ್ಯಗಳು: ಪ್ರಸ್ತುತ ಜಿಲ್ಲೆಯಲ್ಲಿ 13 ವಿಸಿಟಿಸಿ ಕೇಂದ್ರಗಳು, 11 ಪಿಪಿಪಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ಉಚಿತ ಆಪ್ತಸಮಾಲೋಚನೆ ಮತ್ತು ಉಚಿತ ಎಚ್‌ಐವಿ ರಕ್ತ ತಪಾಸಣೆ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರ ಇದ್ದು, ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 1 ಎಸ್‌ಟಿಡಿ ಕೇಂದ್ರ, 1 ರಕ್ತ ನಿಧಿ ಕೇಂದ್ರ, 7 ರಕ್ತ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬಡತನ ರೇಖೆಗಿಂತ ಕೆಳಗಿರುವ ಸೋಂಕಿತರಿಗೆ ಅನ್ನ ಅಂತ್ಯೋದಯ ಯೋಜನೆ ಸೌಲಭ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಎಚ್‌ಐವಿ ಸೋಂಕಿತ ಮಕ್ಕಳಿಗೆ ಪ್ರತಿ ತಿಂಗಳು ರಕ್ಷಣೆ ಮತ್ತು ಪೋಷಣೆಗೆ 1 ಸಾವಿರ ರು. ದೊರೆಯುತ್ತಿದೆ. ಎಚ್‌ಐವಿ ಬಾಧಿತರಿಗೆ ಮೈತ್ರಿ, ಚೇತನಾ, ಧನಶ್ರೀ ಯೋಜನೆ, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಯೋಜನೆಯಡಿ ಸೌಲಭ್ಯ ಒದಗಿಸಲಾಗುತ್ತಿದೆ.
2024ರಲ್ಲಿ 135 ಸೋಂಕಿತರು ಪತ್ತೆ: ಜಿಲ್ಲೆಯಲ್ಲಿ 2002ರಲ್ಲಿ 39 ಜನ ಸೋಂಕಿತರು, 2003ರಲ್ಲಿ 196, 2004ರಲ್ಲಿ 263, 2005ರಲ್ಲಿ 328, 2006ರಲ್ಲಿ 323, 2007ರಲ್ಲಿ 597, 2008ರಲ್ಲಿ 694, 2009ರಲ್ಲಿ 884, 2010ರಲ್ಲಿ 1035 ಜನ ಸೋಂಕಿತರು ಪತ್ತೆಯಾಗಿದ್ದರು. 2002ರಿಂದ 2010ರ ವರೆಗೆ ಏರುಮುಖವಾಗಿದ್ದ ಏಡ್ಸ್ ಪೀಡಿತರ ಸಂಖ್ಯೆ ನಂತರದ ವರ್ಷಗಳಲ್ಲಿ ಇಳಿಮುಖ ಖಂಡಿದೆ. 2011ರಲ್ಲಿ 866, 2012ರಲ್ಲಿ 652, 2013ರಲ್ಲಿ 549, 2014ರಲ್ಲಿ 494, 2015ರಲ್ಲಿ 372, 2016ರಲ್ಲಿ 390, 2017ರಲ್ಲಿ 294, 2018ರಲ್ಲಿ 280, 2019ರಲ್ಲಿ 257, 2020ರಲ್ಲಿ 190, 2021ರಲ್ಲಿ 190, 2022ರಲ್ಲಿ 99, 2023ರಲ್ಲಿ 242 ಹಾಗೂ ಪ್ರಸ್ತುತ 2024ರಲ್ಲಿ 135 ಜನ ಸೋಂಕಿತರು ಪತ್ತೆಯಾಗಿದ್ದಾರೆ.ಎಚ್‌ಐವಿ ಬಗ್ಗೆ ಜನರ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ನಿಯಂತ್ರಣದಲ್ಲಿದೆ. ಎಆರ್‌ಟಿ ಕೇಂದ್ರದ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ಕ್ರಮಕೈಗೊಂಡಿರುವ ಪರಿಣಾಮ ಸೋಂಕಿನ ಪ್ರಮಾಣ ತಗ್ಗಿದೆ ಎಂದು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ನೀಲೇಶ ಎಂ.ಎನ್. ಹೇಳಿದರು.