ಸುಳ್ಳಿನ ಅರಮನೆ ಕಟ್ಟುವ ಮೋದಿ ತಿರಸ್ಕರಿಸಿ: ಸಿದ್ದರಾಮಯ್ಯ

| Published : May 01 2024, 01:16 AM IST

ಸುಳ್ಳಿನ ಅರಮನೆ ಕಟ್ಟುವ ಮೋದಿ ತಿರಸ್ಕರಿಸಿ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಸುಳ್ಳು ಹೇಳಿದ್ದನ್ನೇ ಹೇಳಿ, ಸತ್ಯ ಮಾಡುವ ಯತ್ನ ಮಾಡುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಸುಳ್ಳು ಹೇಳಿದ್ದನ್ನೇ ಹೇಳಿ, ಸತ್ಯ ಮಾಡುವ ಯತ್ನ ಮಾಡುತ್ತಾರೆ. ಅವರು ಸುಳ್ಳಿನ ಅರಮನೆಯನ್ನೇ ಕಟ್ಟುವುದರಲ್ಲಿ ನಿಸ್ಸೀಮರು, ಅಂಥವರನ್ನು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಿರಸ್ಕಾರ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರವಾಗಿ ನಡೆದ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸತ್ಯ ಗೊತ್ತಿಲ್ಲ. ಅವರು ಸುಳ್ಳನ್ನೇ ಸತ್ಯ ಮಾಡುವ ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲದ ವಿಷಯಗಳನ್ನು ಹೇಳುತ್ತಿದ್ದಾರೆ. ಇಂಥವರಿಗೆ ಪಾಠ ಕಲಿಸುವಂತೆ ಕರೆ ನೀಡಿದರು.

ದೇಶದ ಯಾವೊಬ್ಬ ಪ್ರಧಾನಿಯಾದವರು ಸಹ ಇಷ್ಟೊಂದು ಸುಳ್ಳು ಹೇಳಿರಲಿಲ್ಲ. ಈ ಬಾರಿ ಸೋಲಿನ ಹತಾಶೆಯಿಂದ ಮತ್ತಷ್ಟು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ರೆಡ್ಡಿ ವಿರುದ್ಧ ಆಕ್ರೋಶ:

ಗಣಿ ಅಕ್ರಮ ಮಾಡುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ನಾನು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ, ಆಗ ನಮ್ಮೆಲ್ಲ ಕಾಂಗ್ರೆಸ್ ನಾಯಕರು ದೊಡ್ಡ ಹೋರಾಟವನ್ನೇ ಮಾಡಿದ್ದರು. ಆತನಿಗೆ ಶಿಕ್ಷೆಯಾಗಬೇಕು ಎಂದು ಎಲ್ಲರೂ ಸೇರಿ ಪಾದಯಾತ್ರೆ ಮಾಡಿದ್ದೆವು. ಅಂಥ ವ್ಯಕ್ತಿಯನ್ನು ಗಂಗಾವತಿ ಮತದಾರರು ಗೆಲ್ಲಿಸಿದ್ದು ತಪ್ಪು. ಇಂಥ ತಪ್ಪು ಗಂಗಾವತಿಯಿಂದ ನಿರೀಕ್ಷೆ ಮಾಡಿರಲಿಲ್ಲ ಎಂದರು. ರೆಡ್ಡಿ ಹೇಗಿದ್ದಾನೆ ಎಂದರೆ, ಅಂಜನಾದ್ರಿಗೆ ₹100 ಕೋಟಿ ರುಪಾಯಿ ಕೊಡಿ ಎಂದು ಕೇಳಿದ್ದರು. ಸನ್ಮಾನವನ್ನು ಮಾಡಿದ್ದರು. ಸಚಿವ ಶಿವರಾಜ ತಂಗಡಗಿ ಅವರೇ ಕರೆದುಕೊಂಡು ಬಂದಿದ್ದರು. ನಮಗೆ ಬೆಂಬಲ ನೀಡಿದ್ದರು. ಅದಾದ ಮೇಲೆ ಅವರು ನಮ್ಮಿಂದ ದೂರವಾಗಿ, ಈಗ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಗಂಗಾವತಿ ಮತದಾರರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಈ ಹಿಂದೆ ಆಗಿರುವ ತಪ್ಪು ಮತ್ತೆ ಆಗಬಾರದು. ವಿಧಾನಸಭಾ ಚುನಾವಣೆಯಲ್ಲಿ ಮಾಡಿರುವ ತಪ್ಪು ಈ ಬಾರಿ ಯಾವುದೇ ಕಾರಣಕ್ಕೂ ಮಾಡದೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡಿದರು.

ಅನ್ಸಾರಿಗೆ ಶಕ್ತಿ ತುಂಬಿ:

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೋಲಬಾರದಿತ್ತು. ಅದ್ಯಾಕೆ ಸೋತರು ನನಗೆ ಗೊತ್ತಿಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ನೀಡುವ ಮೂಲಕ ಅನ್ಸಾರಿಗೆ ಶಕ್ತಿ ತುಂಬಿ. ಆತನಿಗೆ ಮುಂದೆ ಭವಿಷ್ಯ ಇದೆ ಎಂದರು.

ಭಿನ್ನಾಭಿಪ್ರಾಯ ಬಿಡಿ:

ನಿಮ್ಮಲ್ಲಿ ಇರುವ ಭಿನ್ನಾಭಿಪ್ರಾಯ ಬಿಡಿ, ನೀವು ಯಾವುದೇ ಕಾರಣಕ್ಕೂ ವೇದಿಕೆಯಲ್ಲಿ ಈ ರೀತಿ ಮಾಡಬೇಡಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶ್ರೀನಾಥ ಹಾಗೂ ಮಲ್ಲಿಕಾರ್ಜುನ್ ನಾಗಪ್ಪ ಅವರಿಗೆ ಪಾಠ ಮಾಡಿದರು. ನೀವು ಒಂದಾಗಿ ಚುನಾವಣೆ ಎದುರಿಸಿ, ಭಿನ್ನಾಭಿಪ್ರಾಯ ಇದ್ದರೆ ಬಗೆಹರಿಸೋಣ ಎಂದರು. ಇದಕ್ಕೂ ಮೊದಲು ವೇದಿಕೆಯಲ್ಲಿ ಇಬ್ಬರನ್ನು ಪಕ್ಕದಲ್ಲಿಯೇ ಕೂಡಿಸಿಕೊಂಡು ಬುದ್ದಿ ಹೇಳಿದರು. ನಿಮ್ಮಲ್ಲಿನ ಭಿನ್ನಾಭಿಪ್ರಾಯದಿಂದ ಇಲ್ಲಿ ಯಾರೋ ಗೆಲ್ಲುವಂತೆ ಆಗಿದೆ. ಅದಕ್ಕೆ ಅವಕಾಶ ನೀಡಬಾರದು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿ, ಅದೆಲ್ಲ ಬಿಟ್ಟಾಕಿ ಎಂದು ತಿಳಿಹೇಳಿದರು.

ಸಚಿವರಾದ ಭೈರತಿ ಸುರೇಶ, ಶಿವರಾಜ ತಂಗಡಗಿ, ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಬಸನಗೌಡ ಬಾದರ್ಲಿ, ಶ್ರೀನಾಥ, ಮಲ್ಲಿಕಾರ್ಜುನ್ ನಾಗಪ್ಪ, ಹಸನಸಾಬ ದೋಟಿಹಾಳ, ಲಲಿತಾರಾಣಿ ಸೇರಿದಂತೆ ಅನೇಕರು ಇದ್ದರು.