ಸಾರಾಂಶ
ಕಾವೇರಿ ನದಿಗೆ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯ ಗಡಿಯ ಭಾಗದ ಸತ್ತೇಗಾಲ ಸೇತುವೆ, ಬೆಳಕವಾಡಿ, ಬಿಳಿಜಗಲೆ ಮೊಳೆಯ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ಭಾಗವಾಗಿರುವ ಪಂಪ್ ಹೌಸ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿಕೊಟ್ಟು ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೆಆರ್‌ಎಸ್ ಮತ್ತು ಕಬಿನಿಯಿಂದ ಅಧಿಕ ನೀರನ್ನು ಕಾವೇರಿ ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಗ್ರಾಮಗಳು ಹಾಗೂ ಮಂಡ್ಯ- ಚಾಮರಾಜನಗರ ಸಂಪರ್ಕ ಕಲ್ಪಿಸುವ ಸತ್ತೇಗಾಲ ಸೇತುವೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ತಹಸೀಲ್ದಾರ್ ಕೆ.ಎನ್.ಲೋಕೇಶ್ ಪರಿಶೀಲನೆ ನಡೆಸಿದರು.ಕಾವೇರಿ ನದಿಗೆ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯ ಗಡಿಯ ಭಾಗದ ಸತ್ತೇಗಾಲ ಸೇತುವೆ, ಬೆಳಕವಾಡಿ, ಬಿಳಿಜಗಲೆ ಮೊಳೆಯ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ಭಾಗವಾಗಿರುವ ಪಂಪ್ ಹೌಸ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿಕೊಟ್ಟು ಪ್ರವಾಹ ಪರಿಸ್ಥಿತಿ ಅವಲೋಕಿಸಿದರು.
ನಂತರ ಸಂಬಂಧಪಟ್ಟ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸೂಚನೆ ನೀಡಿದರು.ಕಾವೇರಿ ನದಿ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದಿಂದ ಕೆಲವು ಕೃಷಿ ಜಮೀನುಗಳು ಜಲಾವೃತವಾಗಿವೆ. ಬೆಳೆ ನಷ್ಟ ಅನುಭವಿಸುವ ರೈತರಿಗೆ ಪರಿಹಾರ ನೀಡುವ ಬಗ್ಗೆ ಕೂಡಲೇ ವರದಿ ಸಿದ್ಧಪಡಿಸಿ ಕಳುಹಿಸಿ ಕೊಡುವಂತೆ ತಹಸೀಲ್ದಾರ್‌ಗೆ ತಿಳಿಸಿದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಗೆ ಅಧಿಕ ನೀರು ಕಾವೇರಿ ನದಿಯಲ್ಲಿ ಹರಿದು ಬರುತ್ತಿದೆ. ಇದರಿಂದ ಕೃಷಿ ಜಮೀನು ಹಾಗೂ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸತ್ತೇಗಾಲ, ಪೂರಿಗಾಲಿ, ಮುತ್ತತ್ತಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಈಗಾಗಲೇ ಬೆಳೆನಷ್ಟದ ಬಗ್ಗೆ ತಂಡ ರಚನೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.ಈ ವೇಳೆ ಡಿವೈಎಸ್ಪಿ ವಿ.ಕೃಷ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ದೀಪಕ್, ಕಂದಾಯ ನಿರೀಕ್ಷಕ ಯೋಗೇಶ್, ಕೃಷಿ ಅಧಿಕಾರಿ ರಾಜೇಶ್, ಸಬ್ ಇನ್ಸ್ ಪೆಕ್ಟರ್ ವಿ.ಸಿ.ಅಶೋಕ್ ಸೇರಿದಂತೆ ಇತರರು ಇದ್ದರು.ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿಇಂದಿನ ಮಟ್ಟ – 122.60 ಅಡಿ
ಒಳ ಹರಿವು – 1,12,451 ಕ್ಯುಸೆಕ್
ಹೊರ ಹರಿವು – 99,501 ಕ್ಯುಸೆಕ್
ನೀರಿನ ಸಂಗ್ರಹ – 46.434 ಟಿಎಂಸಿ