ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬಿಜೆಪಿ ಭದ್ರಕೋಟೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿನ ಆಂತರಿಕ ಸಮೀಕ್ಷೆ ವರದಿ ವರಿಷ್ಠರ ಕೈಸೇರಿದ್ದು, ಸೋಲಿಗೆ ಯಾರು ಕಾರಣವೆಂಬುದೂ ಕೇಂದ್ರ ನಾಯಕ ಅಮಿತ್ ಶಾ ಗಮನಕ್ಕೂ ಬಂದಿದ್ದು, ಎಂ.ಪಿ.ರೇಣುಕಾಚಾರ್ಯಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವಂತೆ ಬಿಜೆಪಿ ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಾಳಿಯ ಶಾಂತರಾಜ ಪಾಟೀಲ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಾಕಷ್ಟು ದಾಖಲೆಗಳನ್ನು ರಾಷ್ಟ್ರೀಯ ನಾಯಕರಿಗೆ ನೀಡಿದ್ದೇವೆ. ಇಡಿ ಜಿಲ್ಲೆಯ ಬಿಜೆಪಿ ಸಂಘಟನಾತ್ಮಕ ವ್ಯವಸ್ಥೆಯನ್ನೇ ಹಾಳು ಮಾಡಿದ ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್ಸಿನ ಕೆಲವು ಜನಪ್ರತಿನಿಧಿಗಳು, ನಾಯಕರ ನೈಜ ಹೇಳಿಕೆಗಳನ್ನು ಅವಲೋಕಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಬೇಕು ಎಂದರು.
ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಲೋಕಸಭೆ ಚುನಾವಣೆಯಲ್ಲಿ ರೇಣುಕಾಚಾರ್ಯ ಕುರಿತ ಹೇಳಿಕೆ ಬಗ್ಗೆ ನಮ್ಮ ವರಿಷ್ಠರು ಗಂಭೀರವಾಗಿ ಪರಿಗಣಿಸಲಿ. ಕಾಂಗ್ರೆಸ್ ಗೆಲುವಿಗೆ ರೇಣುಕಾಚಾರ್ಯ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆಂಬ ಹೆಗ್ಗಳಿಕೆ ಮಾತನ್ನೂ ಶಿವಗಂಗಾ ಆಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಅನುಕೂಲ ಮಾಡಲು ಯಾವ ಜಾಗದಲ್ಲಿ, ಯಾರ ಸಮಕ್ಷಮ ರೇಣುಕಾಚಾರ್ಯ ಹಣ ಪಡೆದಿದ್ದಾರೆಂಬ ಹೇಳಿಕೆ ನೀಡಿರುವುದು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಆಘಾತವನ್ನುಂಟು ಮಾಡಿದೆ ಎಂದರು.ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಜೊತೆ ರಾಜಕೀಯ ಒಪ್ಪಂದ ಮುಂದುವರಿಸಿರುವ ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯನ್ನೇ ಅಡ ಇಡಲು ಹೊರಟಿದ್ದಾರೆ. ದಾವಣಗೆರೆ ಬಿಜೆಪಿ ಭದ್ರಕೋಟೆ. ಈ ಕ್ಷೇತ್ರದಲ್ಲಿ ಪಕ್ಷದೊಳಗಿದ್ದುಕೊಂಡೇ ವ್ಯವಸ್ಥಿತ ಪಿತೂರಿ ಮಾಡುವ ಮೂಲಕ ಕಾಂಗ್ರೆಸ್ಸಿಗೆ ಅನುಕೂಲ ಮಾಡಿಕೊಟ್ಟವರು ಯಾರೆಂಬುದನ್ನೂ ವರಿಷ್ಠರು ಅರ್ಥ ಮಾಡಿಕೊಂಡಿದ್ದಾರೆ. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹೊನ್ನಾಳಿ ಕ್ಷೇತ್ರದ ಕಾಮಗಾರಿ ಬಗ್ಗೆ ರೇಣುಕಾಚಾರ್ಯ ಚಕಾರ ಎತ್ತುವುದಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಹಾಳು ಮಾಡಲು ಹೊರಟ, ಪಕ್ಷದ ತತ್ವ, ಸಿದ್ಧಾಂತವಿಲ್ಲದ ರೇಣುಕಾಚಾರ್ಯಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಬೇಕು. ಬಿಜೆಪಿಯನ್ನು ಒಡೆದ ಮನೆ ಮಾಡಬೇಡಿ. ಎಸ್ಸೆಸ್ಸೆಂ ಹೇಳಿದರೆಂಬ ಕಾರಣಕ್ಕೆ ಬಿಜೆಪಿ ಕೈಯಲ್ಲಿದ್ದ ಹೊನ್ನಾಳಿ ಸ್ಥಳೀಯ ಸಂಸ್ಥೆಯನ್ನೇ ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟವರು ರೇಣುಕಾಚಾರ್ಯ. ಲೋಕಸಭೆ ಚುನಾವಣೆ ಮುನ್ನ ಹೊನ್ನಾಳಿಯ ಹೊಸ ಮನೆಯಲ್ಲಿ ಮಧ್ಯರಾತ್ರಿ ಕಾಂಗ್ರೆಸ್ ಸಚಿವ, ಶಾಸಕರು ಭೇಟಿ ಮಾಡಿ, ಏನು ಚರ್ಚಿಸಿದರು? ಇದೆಲ್ಲದರ ಬಗ್ಗೆಯೂ ವರಿಷ್ಠರು ಗಮನ ಹರಿಸಲಿ ಎಂದು ಒತ್ತಾಯಿಸಿದರು.ರೇಣುಕಾಚಾರ್ಯ ಅವರು ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ಭದ್ರಾ ಡ್ಯಾಂನಿಂದ ನೀರು ಕೊಡುವುದರ ವಿರುದ್ಧ ಈಗ ಹೋರಾಟ ನಡೆಸಿದ್ದಾರೆ. ಇದರ ಬದಲಿಗೆ ಹಿಂದೆ ಶಾಸಕರಿದ್ದಾಗಲೇ ಭದ್ರಾ ಕಾಡಾ ಸಭೆಗೆ ಹೋಗಿ, ಯಾಕೆ ಧ್ವನಿ ಎತ್ತಲಿಲ್ಲ? ನಾವೂ ಸಹ 2-3 ಸಾವಿರ ಜನ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ ನೇತೃತ್ವದಲ್ಲಿ ಸಭೆಗೆ ಹೋಗಿ, ಸಚಿವ ಸುಧಾಕರ ಬಳಿಗೆ ಯೋಜನೆ ಕಾಮಗಾರಿ ಕೈಬಿಡುವಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಭದ್ರಾ ಬಲದಂಡೆ ನಾಲೆ ಸೀಳಿ ನೀರು ಕೊಡುವ ಯೋಜನೆಗೆ ತಾಂತ್ರಿಕ ಅನುಮೋದನೆ, ನೀಲನಕ್ಷೆಗೆ ಹಿಂದೆ ಶಾಸಕರಿದ್ದಾಗಲೇ ಆಕ್ಷೇಪಿಸಬೇಕಿತ್ತಲ್ಲವೇ? ಬಂದ್ ಹೆಸರಿನಲ್ಲಿ ಕೆಲವರು ಬಸ್ಸಿನಲ್ಲಿದ್ದ ಮಹಿಳೆಯರನ್ನು ಕೆಳಗಿಳಿಸಿ, ಚಾಲಕರು, ಅಂಗಡಿಯವರಿಗೆ ಕಲ್ಲು ತೋರಿಸಿ ಬೆದರಿಸುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಒಳಗಿದ್ದು ಹೋರಾಟ ಮಾಡಬೇಕಾಗಿತ್ತು. ಆದರೆ, ಕೈಗೆ ಬಟ್ಟೆ ಕಟ್ಟಿಕೊಂಡು, ಆಸ್ಪತ್ರೆ ಒಳ ರೋಗಿ ಬಟ್ಟೆ ಧರಿಸಿ, ಮಾರನೆಯ ದಿನವೇ ಹೋರಾಟಕ್ಕೆ ಧುಮುಕುವ ದೊಂಬರಾಟ ಯಾಕೆ? ಭದ್ರಾ ನಾಲೆ ಸೀಳಿ ಕೈಗೊಂಡ ಕಾಮಗಾರಿ ವಿರುದ್ಧದ ಹೋರಾಟದ ಹಿಂದೆ ಬೇರೆ ಏನೋ ಇದೆ? ಇನ್ನೂ ಎಷ್ಟು ದಿನ ಹೀಗೆಯೇ ಮೋಸ ಮಾಡುತ್ತೀರಿ ಎಂದು ಶಾಂತರಾಜ ಪಾಟೀಲ ರೇಣುಕಾಚಾರ್ಯಗೆ ಪ್ರಶ್ನಿಸಿದರು.ಪಕ್ಷದ ಮುಖಂಡರಾದ ಎ.ಬಿ.ಹನುಮಂತಪ್ಪ ಅರಕೆರೆ, ಎಂ.ಆರ್.ಮಹೇಶ, ಕೆ.ವಿ.ಚನ್ನಪ್ಪ, ಮಾಸಡಿ ಸಿದ್ದೇಶ, ಯಕ್ಕನಹಳ್ಳಿ ಜಗದೀಶ, ತರಗನಹಳ್ಳಿ ರಾಜಣ್ಣ, ಅವಿನಾಶ ಮತ್ತಿತರರಿದ್ದರು.