ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕೈಗೆತ್ತಿಗೊಂಡಿದ್ದ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಮಾಡಿದ ಕಾಮಗಾರಿಗಳ ಬಗ್ಗೆ ಸ್ಮಾರ್ಟ್‌ಸಿಟಿ ಮತ್ತು ಮಹಾನಗರ ಪಾಲಿಕೆಯ ತಿಕ್ಕಾಟ ಶುರುವಾಗಿದೆ. ಸಮಸ್ಯೆ ಉದ್ಭವಿಸಿರುವ ಕಾಮಗಾರಿಗಳ ದುರಸ್ತಿಯನ್ನು ಸ್ಮಾರ್ಟ್‌ಸಿಟಿಯವರೇ ಮಾಡಿಕೊಡುವಂತೆ ಪಾಲಿಕೆ ಹೇಳಿದರೆ, ಅದಕ್ಕು ನಮಗೂ ಸಂಬಂಧವಿಲ್ಲ. ಆದ್ದರಿಂದ ಪಾಲಿಕೆಯವರೇ ಕಾಮಗಾರಿಗಳನ್ನು ದುರಸ್ತಿ ಮಾಡಿಕೊಳ್ಳಬೇಕು ಎಂದು ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕ ಸೋಮಲಿಂಗ ಗೆಣ್ಣೂರು ಸ್ಪಷ್ಟಪಡಿಸಿದರು.ನಗರದಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅವುಗಳನ್ನು ಪೂರ್ಣಗೊಳಿಸಲಾಗಿದೆ. ಮಹಾನಗರ ಪಾಲಿಕೆಗೂ ಹಸ್ತಾಂತರಿಸಲಾಗಿದೆ. ಆದ್ದರಿಂದ, ಸ್ಮಾರ್ಟ್‌ಸಿಟಿ ಯೋಜನೆ ಪೂರ್ಣಗೊಂಡಿರುವ ಕಾಮಗಾರಿಗಳ ದುರಸ್ತಿ ಮಾಡಲು ನಮ್ಮಲ್ಲಿ ಅವಕಾಶ ಇಲ್ಲ. ಆದ್ದರಿಂದ ಮಹಾನಗರ ಪಾಲಿಕೆಯಿಂದಲೇ ಅವುಗಳನ್ನು ದುರಸ್ತಿ ಮಾಡಿಕೊಳ್ಳಬೇಕು ಎಂದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳ ನಿರ್ವಹಣೆಗೆ ಪ್ರತಿ ಪ್ಯಾಕೇಜ್‌ಗೆ ₹25 ರಿಂದ ₹30 ಲಕ್ಷದಂತೆ ಸುಮಾರು ₹ 5 ಕೋಟಿವರೆಗೆ ಮೀಸಲಿಟ್ಟಿರುವ ಹಣವನ್ನು ನೀಡಲು ಅವಕಾಶವಿದೆ. ಆದರೆ, ದುರಸ್ತಿ ಕಾಮಗಾರಿ ನೀವೇ ಕೈಗೊಳ್ಳಬೇಕು. ಜುಲೈ 30ಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮುಕ್ತಾಯವಾಗಲಿದೆ. ಆದ್ದರಿಂದ ಹೊಸದಾಗಿ ಕಾಮಗಾರಿ ಕೈಗೊಳ್ಳಲು, ದುರಸ್ತಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಈ ಯೋಜನೆಯಲ್ಲಿ ಯಾವುದೇ ಅವಕಾಶ ಇಲ್ಲ ಎಂದು ತಿಳಿಸಿದರು.ಸ್ಮಾರ್ಟ್‌ಸಿಟಿ ಯೋಜನೆಯಡಿ ಚರಂಡಿಗಳನ್ನು ಚಿಕ್ಕದಾಗಿ ನಿರ್ಮಿಸಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕೆಲವು ಕಡೆ ನೀರು ಅಲ್ಲಲ್ಲಿ ನಿಲ್ಲುತ್ತಿದೆ. ಹಳೆ ಪಿಬಿ ರಸ್ತೆಯಲ್ಲಿ ನಾಲಾಗಳು ಬಂದ ಆಗಿ ಮಳೆ ನೀರು ನದಿಯಂತೆ ಹರಿಯುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವುದು ಹೇಗೆ? ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳೇ ಸಮಸ್ಯೆ ಪರಿಹರಿಸಬೇಕು ಎಂದು ಖಡಕ ಸೂಚನೆ ನೀಡಿದರು.
ನಂತರ ಮೇಯರ್ ಸವಿತಾ ಕಾಂಬಳೆ ಮಾತನಾಡಿ, ಸ್ಮಾರ್ಟ್ ಸಿಟಿ, ಪಾಲಿಕೆ ಎಂಜಿನಿಯರ್‌ಗಳು ಒಟ್ಟಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ. ಬಳಿಕ ಯಾರು ತಪ್ಪು ಮಾಡಿದ್ದಾರೆ ಅವರು ಸರಿಪಡಿಸುವ ಕೆಲಸ ಮಾಡಿ. ನಿಮ್ಮ ನಿರ್ಲಕ್ಷ್ಯದಿಂದಾಗಿ ನಗರದ ಜನರು ಸಮಸ್ಯೆ ಎದುರಿಸಬೇಕಾಗಿದೆ. ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳು ತಮ್ಮ ಕಾಮಗಾರಿಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಎಂದು ಸಭೆಯಲ್ಲಿ ಸೂಚಿಸಿದರು.ಈ ಸಭೆಯಲ್ಲಿ ಉಪಮೇಯರ ಆನಂದ ಚೌಹಾಣ, ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರವಿ ಧೋತ್ರೆ, ಸಂತೋಷ ಪೇಡನೇಕರ, ಶಂಕರ ಪಾಟೀಲ, ರಾಜು ಬಾತಕಾಂಡೆ, ಗಿರೀಶ ಧೋಂಗಡಿ, ವೀಣಾ ವಿಜಾಪುರ, ರಾಜಶೇಖರ ಡೋಣಿ, ಮಂಗೇಶ ಪವಾರ, ವಾಣಿ ಜೋಶಿ ಇತರರಿದ್ದರು.
--------------ಕೋಟ್
ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಯೋಜನೆ ರೂಪಿಸಿರುವುದರಿಂದ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಹಳೆಪಿಬಿ ರಸ್ತೆ, ಖಾನಾಪೂರ ರಸ್ತೆ ಹಾಗೂ ಜಿಜಾಮಾತಾ ವೃತ್ತದ ಬಳಿ ಚರಂಡಿಗಳು ಸಂಪೂರ್ಣ ಬಂದ್ ಆಗಿವೆ. ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳ ನಿರ್ಲಕ್ಷ್ಯತನದಿಂದ ಸಾಕಷ್ಟು ಸಮಸ್ಯೆಗಳು ಉದ್ಬವಿಸಿವೆ. ನಮ್ಮಿಂದ ತಪ್ಪಾಗಿದೆ ಎನ್ನುವ ಸೌಜನ್ಯತೆ ಕೂಡ ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳಿಗೆ ಇಲ್ಲ.- ಪಿ.ಎನ್.ಲೋಕೇಶ, ಪಾಲಿಕೆ ಆಯುಕ್ತ
-----------------------ಕೋಟ್....ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳ ನಿರ್ವಹಣೆಗೆ ಪ್ರತಿ ಪ್ಯಾಕೇಜ್‌ಗೆ ₹ 25 ರಿಂದ ₹30 ಲಕ್ಷದಂತೆ ಸುಮಾರು ₹ 5 ಕೋಟಿ ವರೆಗೆ ಮೀಸಲಿಟ್ಟಿರುವ ಹಣವನ್ನು ನೀಡಲು ಅವಕಾಶವಿದೆ. ಆದರೆ, ದುರಸ್ತಿ ಕಾಮಗಾರಿ ಪಾಲಿಕೆಯೇ ಕೈಗೊಳ್ಳಬೇಕು. ಜುಲೈ 30ಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮುಕ್ತಾಯವಾಗಲಿದೆ. ಆದ್ದರಿಂದ ಹೊಸದಾಗಿ ಕಾಮಗಾರಿ ಕೈಗೊಳ್ಳಲು, ದುರಸ್ತಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಈ ಯೋಜನೆಯಲ್ಲಿ ಯಾವುದೇ ಅವಕಾಶ ಇಲ್ಲ.
- ಸೋಮಲಿಂಗ ಗೆಣ್ಣೂರು, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ.