ಒಳಮೀಸಲಾತಿ ಜಾರಿಗೊಳಿಸುವಂತೆ ಸಿಎಂ, ರಾಜ್ಯಪಾಲರಿಗೆ ಮನವಿ

| Published : Oct 17 2024, 12:07 AM IST

ಒಳಮೀಸಲಾತಿ ಜಾರಿಗೊಳಿಸುವಂತೆ ಸಿಎಂ, ರಾಜ್ಯಪಾಲರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಸರ್ವೋಚ್ಛ ನ್ಯಾಯಾಲಯದ ಪೂರ್ಣ ಪೀಠವು ಆ.1ರಂದು ಎಸ್ಸಿ ಮೀಸಲಾತಿಯಲ್ಲಿ ಉಪವರ್ಗಿಕರಿಸಲು ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಂವಿಧಾನ 341 ರ ಪರಿಚ್ಚೆದದ ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಒಳಮೀಸಲಾತಿ ಜಾರಿಗೊಳಿಸಲು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಸಿಸಿದಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಸುಪ್ರೀಂ ಕೋರ್ಟ್ ತೀರ್ಪುನ್ನು ಅವಕಾಶ ವಂಚಿತ ನಾಡಿನ ಶೋಷಿತ ಸಮುದಾಯವು ಸ್ವಾಗತಿಸುತ್ತದೆ.

ಕರ್ನಾಟಕ ಸರ್ಕಾರ ಪ್ರಸ್ತುತ ತನ್ನ 2023ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಷಿಸಿಕೊಂಡಂತೆ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ. ಕರ್ನಾಟಕದಲ್ಲಿ ಎಸ್ಸಿ ಮೀಸಲಾತಿಯಲ್ಲಿ ವರ್ಗಿಕರಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಮೂರು ದಶಕಗಳಿಂದ ಹೋರಾಟಗಳು ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರವು ಎಸ್ಸಿ ಮೀಸಲಾತಿಯ ಎಲ್ಲ ಫಲಾನುಭವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಸುತ್ತಿನ ಮಾತುಕತೆ ನಡೆಸಿ ಜನಸಂಖ್ಯೆಗೆ ಅನುಗುಣವಾಗಿಯೇ ವೈಜ್ಞಾನಿಕವಾದ ಒಳಮೀಸಲಾತಿಯ ಸೂತ್ರವನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ.

ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ರಾಜ್ಯ ಸರ್ಕಾರ ಒಳಮೀಸಲಾತಿ ನ್ಯಾಯಮೂರ್ತಿ ಸದಾಶಿವ ಆಯೋಗದ ಮೂಲ ಆಶಯವನ್ನು ಉಳಿಸಿಕೊಂಡು 2011 ರ ಜನಗಣತಿಯ ಸಂಖ್ಯಾಧಾರಗಳು ಮತ್ತು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯಂತೆ ವಿಸ್ತರಿಸಲಾದ 17% ರ ಮೀಸಲಾತಿ ಬಳಸಿಕೊಂಡು ಉಪವರ್ಗಿಕರಣದ ಸೂತ್ರ ರೂಪಿಸಲಾಗಿದೆ. 2011 ಜನಗಣತಿಯ ವರದಿಯಂತೆ ಕರ್ನಾಟಕದಲ್ಲಿ ಎಸ್ಸಿ ಜನಸಂಖ್ಯೆ 1,04,74,992. ಈಗಿರುವ ಶೇ 17% ರ ಮೀಸಲಾತಿಯನ್ನು ವರ್ಗಿಕರಿಸಿದರೆ ತಲಾ 6 ಲಕ್ಷ ಜನಸಂಖ್ಯೆಗೆ ಶೇ 1% ರಷ್ಟು ಮೀಸಲಾತಿ ದೊರಕುತ್ತದೆ. ಶೇ 17% ರ ಮೀಸಲಾತಿಯ ವರ್ಗಿಕರಣದಲ್ಲಿ ಗುಂಪು 1: ಶೇ 6% ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳು 29 ಇದ್ದು ಒಟ್ಟು ಜನಸಂಖ್ಯೆ 32,60,23, ಗುಂಪು :2 ಶೇ 5.5% ಹೊಲೆಯ ಮತ್ತು ಸಂಬಂಧಿತ ಉಪಜಾತಿಗಳು 26 ಒಟ್ಟು ಜನಸಂಖ್ಯೆ 32,59,482., ಗುಂಪು :3 ಶೇ4.5% ಬೋವಿ, ಬಂಜಾರ, ಕೊರಮ, ಕೊರಚ, ಜಾತಿ ಉಪಜಾತಿಗಳು ಒಟ್ಟು ಜನಸಂಖ್ಯೆ 26,51,067, ಗುಂಪು 4 ಶೇ 1% ಅಸ್ಪೃಶ್ಯ ಜಾತಿಯ ಮಾದಿಗ ಮತ್ತು ಹೊಲೆಯ ಸಂಬಂಧಿತ ಸಣ್ಣ ಸಣ್ಣ ಜಾತಿಗಳು ಮತ್ತು ಅಲೆಮಾರಿ ಜಾತಿಗಳು 83 ಒಟ್ಟು 5,85,57.ಕರ್ನಾಟಕದಲ್ಲಿ ಎಸ್ ಸಿ / ಎಸ್ ಟಿ ಮೀಸಲಾತಿಯನ್ನು ಏರಿಕೆ ಮಾಡಿದ್ದೂ ಜನಸಂಖ್ಯೆಗೆ ಅನುಗುಣವಾಗಿ, ಹಾಗೆಯೇ ಉಪವರ್ಗಿಕರಣವನ್ನು ಜನಸಂಖ್ಯೆ ಅನುಗುಣವಾಗಿಯೇ ಬೊಮ್ಮಾಯಿ ಸರ್ಕಾರವು ಶಿಫಾರಸ್ಸು ಮಾಡಲಾಗಿದೆ. ಇವೆಲ್ಲದರ ಮಾಹಿತಿಯು ಸರ್ಕಾರದಲ್ಲಿದೆ.

ಹೊಲೆಯ ಮತ್ತು ಮಾದಿಗ ಜನಸಂಖ್ಯೆಯು ಬಹುತೇಕ ಸಮಾನವಾಗಿದೆ. ಆದರೇ ನ್ಯಾಯಮೂರ್ತಿ ಸದಾಶಿವ ಆಯೋಗ ಉಲ್ಲೇಖಿಸುವಂತೆ ಮಾದಿಗ ಉಪಜಾತಿಗಳು ಹೆಚ್ಚು ಸಂತ್ರಸ್ತ ಸಮುದಾಯವೆನಿಸಿದೆ. ದೇವದಾಸಿಯರು, ಜೀತಕ್ಕೆ ಸಿಲುಕಿದವರು. ಅರ್ಧಕ್ಕೆ ಶಾಲೆಯನ್ನು ಬಿಟ್ಟವರು. ಬಾಲಪರಾದಿಗಳು ಇಂತಹ ಪಟ್ಟಿಯ ಅಂಕಿ ಅಂಶಗಳಲ್ಲಿ ಮಾದಿಗ ಉಪಜಾತಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಗುಂಪಿಗೆ 0.5% ರಷ್ಟು ಹೆಚ್ಚು ಮೀಸಲಾತಿ ಕಲ್ಪಿಸಲಾಗಿದೆ ನ್ಯಾ,ಸದಾಶಿವ ಆಯೋಗದ ವರದಿ ಮತ್ತು 2011 ರ ಜನಗಣತಿಯ ಸಂಖ್ಯಾಧಾರಗಳೊಂದಿಗೆ ಪುನರ್ ಪರಿಶೀಲಿಸಿ ವರದಿ ಕೊಡಲು ರಚಿಸಿದ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷ ಜೆಸಿ ಮಾಧುಸ್ವಾಮಿ, ಗೋವಿಂದ ಕಾರಜೋಳ, ಪ್ರಭು ಚವ್ಹಾನ್, ಎಸ್.ಅಂಗಾರ, ಡಾ.ಸುಧಾಕರ್ ಸಮಿತಿಯು ಅತ್ಯಂತ ವೈಜ್ಞಾನಿಕವಾಗಿ ನ್ಯಾಯಬದ್ದವಾಗಿ ಕಾನೂನು ರೀತಿಯಲ್ಲಿ ವರದಿ ಕೊಟ್ಟಿರುವದನ್ನು ಪ್ರಸ್ತುತ ಸರ್ಕಾರವು ಮಾನ್ಯ ಮಾಡಿ ಒಳಮೀಸಲಾತಿ ಜಾರಿಗೊಳಿಸಬೇಕು. 2023ರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿ ಘೋಷಿಸಿದಂತೆ ಪ್ರಸ್ತುತ ಕಾಂಗ್ರೆಸ್ ಸರಕಾರವು ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು, ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ತುಂಬಬಾರದು, ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು. ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರವನ್ನು ಮುಂದುವರಿಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರಕಾರವು ಎದುರಿಸಬೇಕಾಗುತ್ತದೆ ಅರಕಲವಾಡಿ ನಾಗೇಂದ್ರ ಮನವಿಯಲ್ಲಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್, ವಕೀಲ ರಾಜೇಂದ್ರ, ಮೂಡಹಳ್ಳಿ ಮೂರ್ತಿ, ಶಿವು ರಾಮಸಮುದ್ರ, ಪುಟ್ಟಸ್ವಾಮಿ ಅಮಚವಾಡಿ, ಮಳವಳ್ಳಿ ಮಹದೇವಯ್ಯ, ಗುರುಲಿಂಗಯ್ಯ, ಚನ್ನಬಸವಯ್ಯ,ಯ.ಮಹದೇವಯ್ಯ, ಲಿಂಗರಾಜು, ಶಿವಕುಮಾರ್, ಚಿನ್ನಸ್ವಾಮಿ, ದೇವರಾಜು, ಅರಕಲವಾಡಿ ಮಹದೇವಯ್ಯ ಇತರರು ಹಾಜರಿದ್ದರು.