ಬೌದ್ಧಿಕ ವಿಕಾಸಕ್ಕೆ ಸಂಶೋಧನೆ ಅಗತ್ಯ: ಡಾ.ರಾಮೇಗೌಡ

| Published : Jun 11 2024, 01:36 AM IST

ಸಾರಾಂಶ

ಸಾಹಿತ್ಯವನ್ನು ಓದಿ ಪ್ರಾಮಾಣಿಕವಾಗಿ, ನಿಷ್ಪಕ್ಷವಾಗಿ ಆಶ್ವಾದಿಸಿ, ದೋಷಗಳನ್ನು ವಿಮರ್ಶಿಸಿ ವಿಶ್ಲೇಷಿಸುವುದನ್ನು ಸಂಶೋಧನಾ ವಿದ್ಯಾರ್ಥಿಗಳು ಕಲಿಯಬೇಕು ಎಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾಹಿತ್ಯವನ್ನು ಓದಿ ಪ್ರಾಮಾಣಿಕವಾಗಿ, ನಿಷ್ಪಕ್ಷವಾಗಿ ಆಶ್ವಾದಿಸಿ, ದೋಷಗಳನ್ನು ವಿಮರ್ಶಿಸಿ ವಿಶ್ಲೇಷಿಸುವುದನ್ನು ಸಂಶೋಧನಾ ವಿದ್ಯಾರ್ಥಿಗಳು ಕಲಿಯಬೇಕು ಎಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗ, ಕರ್ನಾಟಕ ಸಾಹಿತ್ಯ ಸಂಘ , ಕನ್ನಡ ಸ್ನಾತಕೋತ್ತರ ವಿಭಾಗ ಹಾಗೂ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಂಶೋಧನೆ, ವಿಮರ್ಶೆ ಹಾಗೂ ನಡುಗನ್ನಡ ಕಾವ್ಯ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸೃಜನಶೀಲತೆ, ವಿಮರ್ಶನಾತ್ಮಕ ಸಂಶೋಧನಾ ಕುತೂಹಲದಿಂದ ಕೂಡಿದವರು ಮಾತ್ರ ಒಬ್ಬ ಸಂಶೋಧನಾ ವಿದ್ಯಾರ್ಥಿಯಾಗಲು ಸಾಧ್ಯ. ವಿಧ್ಯಾರ್ಥಿಗಳ ವಿವೇಚನಾ ಶಕ್ತಿಯನ್ನು ವ್ಯವಸ್ಥೆಗೆ ತಕ್ಕಂತೆ ಹೊಂದಿಸಿಕೊಳ್ಳಬೇಕು. ಕನ್ನಡ ಸಂಶೋಧನೆ ಮತ್ತು ವಿಮರ್ಶೆಗೆ ದೊಡ್ಡ ಇತಿಹಾಸವಿದೆ ಎಂದರು.

ಕಾವ್ಯಗಳ ಮೆಚ್ಚುಗೆ ಗುಣದೋಷಗಳ ಬಗ್ಗೆ ಚರ್ಚಿಸದಿದ್ದರೆ ಆ ಕಾವ್ಯ ಸೃಷ್ಟಿಸಿಯು ಉಪಯೋಗವಿಲ್ಲ. ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡವರು ನಿರ್ದಿಷ್ಟ ಗುರಿ ಹೊಂದಿರಬೇಕು. ಕವಿಗಳು ತಮ್ಮ ಕವನ ವಾಚನ ಮಾಡುವಾಗ ಎದುರಿಗೆ ಇರುವವರು ಸಹೃದಯಿಯಾಗಿದ್ದರೆ ಆ ಕವನಕ್ಕೆ ಒಂದು ತೂಕ. ಮಕ್ಕಳಲ್ಲಿ ಇರುವ ವಿಶಿಷ್ಟ ಗುಣಗಳನ್ನು ಪಾಲಕರು, ಗುರುಗಳು ಗುರುತಿಸಿದಾಗ ಆ ವ್ಯಕ್ತಿಯಲ್ಲಿ ಹೊಸ ಚೈತನ್ಯ ಮೂಡುತ್ತದೆ. ಪ್ರತಿಯೊಬ್ಬರಲ್ಲೂ ವಿಮರ್ಶಕ ಹುದುಗಿರುತ್ತಾನೆ. ಅದನ್ನು ಕಂಡುಕೊಳ್ಳುವುದನ್ನು ಕಲಿಯಬೇಕು. ಹೊಸತನದ ಅನುಭವಗಳೊಂದಿಗೆ ಹೆಜ್ಜೆ ಹಾಕಬೇಕು. ವಿಮರ್ಶೆ ಎನ್ನುವುದು ಸಾಹಿತ್ಯ ಬದುಕಿನ ಪ್ರತಿಬಿಂಬ ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಡಾ. ವಿಜಯಕುಮಾರ್ ಕಟಗಿಹಳ್ಳಿಮಠ ಅವರು, ಸಂಶೋಧನೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಒಂದು ವಿಷಯದಲ್ಲಿಯ ಸೌಂದರ್ಯ, ಅದರಲ್ಲಿರುವ ಸಂಗತಿಗಳನ್ನು ಹುಡುಕಿ ವಿಶ್ಲೇಷಣೆ ಮಾಡುವುದೇ ವಿಮರ್ಶೆ. ನಾವು ಬೌದ್ಧಿಕವಾಗಿ ವಿಕಾಸವಾದರೆ ಜಗತ್ತು ಸುಂದರವಾಗಿ, ಭಿನ್ನವಾಗಿ ಕಾಣಿಸುತ್ತದೆ. ಕಾವ್ಯದ ವಿಮರ್ಶೆಯನ್ನು ಕಲಾತ್ಮಕವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಓದು ಬರವಣಿಗೆ ಮೂಲಕ ಆಲೋಚನೆಗಳ ಅರಿವು ವಿಸ್ತರಿಸುತ್ತದೆ. ಅಂಕಗಳಿಗಿಂತ ಇಂದಿನ ದಿನಮಾನಗಳಲ್ಲಿ ಜ್ಞಾನ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿ ಬೌದ್ಧಿಕವಾಗಿ ವಿಕಾಸಗೊಳ್ಳಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್ . ಆರ್. ಮೂಗನೂರಮಠ ಮಾತನಾಡಿ. ಆಸಕ್ತಿ, ಕುತೂಹಲ ಸಂಶೋಧನೆಯ ಮೂಲ ದ್ರವ್ಯ. ನಡುಗನ್ನಡ ಸಂದರ್ಭದಲ್ಲಿ ಜನರ ಹತ್ತಿರಕ್ಕೆ ಹೆಚ್ಚು ಕಾವ್ಯಗಳು ಬಂದವು. ಕನ್ನಡದ ಮಜಲುಗಳನ್ನು ತಿಳಿದಿಕೊಳ್ಳಲು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಸದುಪಯೋಗವಾಗಿದೆ. ಸಂಶೋಧನೆ ಎಂದರೆ ಕೇವಲ ಹುಡುಕಾಟವಲ್ಲ ಪುನರ್ ಹುಡುಕಾಟವಾಗಿದೆ. ಬದಲಾವಣೆ ಜೀವಂತಿಕೆಯ ಪುನರಾವರ್ತನೆಯಾಗಿದೆ ಎಂದರು.

ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಸಂಶೋಧನೆ ವಿಷಯ ಕುರಿತು ಡಾ. ಶಾಂತರಾಜು ಮತ್ತು ನಡುಗನ್ನಡ ಕಾವ್ಯ ಕುರಿತು ಪ್ರೊ.ಚಂದ್ರಶೇಖರ ನಾದೂರ ಹಾಗೂ ವಿಮರ್ಶೆ ಬಗ್ಗೆ ಡಾ. ಬೈರಮಂಗಲ ರಾಮೇಗೌಡ ಉಪನ್ಯಾಸ ಮಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ನಾಗರಾಜು, ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರು ಡಾ. ವೀಣಾ ಕಲ್ಮಠ, ಐಕ್ಯೂಎಸಿ ಘಟಕದ ಸಂಯೋಜಕರು ಡಾ.ಎ.ಯು. ರಾಠೋಡ, ಡಾ.ಎಸ್.ಡಿ. ಕೆಂಗಲಗುತ್ತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.