ಸದಾ ಹಸಿರಾಗಿರುವ ಮೇವಿನ ತಳಿ ಸಂಶೋಧನೆಯಾಗಲಿ: ಡಾ. ಯಾದವ

| Published : Apr 28 2025, 12:47 AM IST

ಸದಾ ಹಸಿರಾಗಿರುವ ಮೇವಿನ ತಳಿ ಸಂಶೋಧನೆಯಾಗಲಿ: ಡಾ. ಯಾದವ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ 42 ಮೇವು ಬೆಳೆಗಳ ಮೇಲೆ ಸಂಶೋಧನೆ ನಡೆಯುತ್ತಿದೆ. ಇದನ್ನು ಹೊರತುಪಡಿಸಿ ಮೇವು ಸಂಶೋಧನೆಯಿಂದ 375 ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವುಗಳ ಪೈಕಿ 125 ತಳಿಗಳು ಬೀಜೋತ್ಪಾದನೆಯ ಹಂತದಲ್ಲಿವೆ. ಈ ಬೆಳೆಗಳಿಂದ ರೈತ ಸಮುದಾಯಕ್ಕೆ ಜೀವನೋಪಾಯ ಕಲ್ಪಿಸಿದಂತಾಗಿದೆ.

ಧಾರವಾಡ: ಹವಾಮಾನ ವೈರೀತ್ಯಕ್ಕೆ ಹೊಂದಿಕೊಳ್ಳುವ ಸದಾ ಹಸಿರಾಗಿರುವ ಮೇವಿನ ತಳಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕು ಎಂದು ಐಸಿಎಆರ್‌ ಉಪ ಮಹಾನಿರ್ದೇಶಕ ಡಾ. ಡಿ.ಕೆ. ಯಾದವ ಹೇಳಿದರು.

ಇಲ್ಲಿಯ ಕೃಷಿ ವಿವಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್), ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ ಜಂಟಿಯಾಗಿ ದೇಶಾದ್ಯಂತದ 50ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ತಜ್ಞರು ಭಾಗವಹಿಸಿದ್ದ ಮೇವು ಬೆಳೆಯ ಸಭೆಯಲ್ಲಿ ಅವರು ಮಾತನಾಡಿದರು.

ಭಾರತದ 42 ಮೇವು ಬೆಳೆಗಳ ಮೇಲೆ ಸಂಶೋಧನೆ ನಡೆಯುತ್ತಿದೆ. ಇದನ್ನು ಹೊರತುಪಡಿಸಿ ಮೇವು ಸಂಶೋಧನೆಯಿಂದ 375 ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವುಗಳ ಪೈಕಿ 125 ತಳಿಗಳು ಬೀಜೋತ್ಪಾದನೆಯ ಹಂತದಲ್ಲಿವೆ. ಈ ಬೆಳೆಗಳಿಂದ ರೈತ ಸಮುದಾಯಕ್ಕೆ ಜೀವನೋಪಾಯ ಕಲ್ಪಿಸಿದಂತಾಗಿದೆ ಎಂದರು.

ಈ ತಂತ್ರಜ್ಞಾನಗಳ ವಾಣಿಜ್ಯೀಕರಣ ಹಾಗೂ ತಳಿ ಸಂರಕ್ಷಣೆಗಾಗಿ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತರ ಹಕ್ಕುಗಳ ಪ್ರಾಧಿಕಾರಕ್ಕೆ ಹೆಸರು ನೋಂದಾಯಿಸಲು ಪ್ರಯತ್ನಗಳು ನಡೆಯಬೇಕಿವೆ ಎಂದ ಅವರು, ಗೋಶಾಲೆಗಳ ಸಂರಕ್ಷಣೆಯು ಮೇವಿನ ಉತ್ಪಾದನೆಯಲ್ಲಿ ಸುಸ್ಥಿರತೆ ತರುವ ಮುಖಾಂತರ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಅಭಿವೃದ್ಧಿ ಪಡಿಸಿದ ಮೇವು ಉತ್ಪಾದನಾ ತಂತ್ರಜ್ಞಾನಗಳನ್ನು ಸುಧಾರಿತ ಮೇವು ಬೆಳೆಗಳ ಸಾಗುವಳಿ ಕ್ರಮಗಳ ಕೈಪಿಡಿಯ ಮುಖಾಂತರ ಹೆಚ್ಚು ರೈತರಿಗೆ ಹೆಚ್ಚು ತಲುಪಲು ಸಾಧ್ಯ ಎಂದರು.

ಕೃಷಿ ವಿಜ್ಞಾನಿ ಡಾ. ಎಸ್.ಕೆ. ಪ್ರಧಾನ್, ಪ್ರಾದೇಶಿಕ ಮತ್ತು ಹಂಗಾಮಿಗೆ ಸೂಕ್ತ ಮೇವಿನ ಲಭ್ಯತೆಯ್ಲಲಿರುವ ಸವಾಲುಗಳನ್ನು ಹೇಗೆ ನಿಭಾಯಿಸಬೇಕೆಂದು ಹೇಳಿದರು. ಡಾ. ಪಂಕಜ್ ಕೌಶಲ್, ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಹಂಗಾಮಿಗೆ ಹಾಗೂ ಕೃಷಿ ಪರಿಸ್ಥಿತಿಗೆ ಸೂಕ್ತ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದರು.

ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ, ಸಾಂಪ್ರದಾಯಿಕವಲ್ಲದ ಮೇವಿನ ಬೆಳೆಗಳಾದ ಮುಳ್ಳುರಹಿತ ಕಳ್ಳಿ ಮತ್ತು ಮೇವಿನ ಸುಗರ ಬೀಟ್ ಬೆಳೆಗಳನ್ನು ಉತ್ತೇಜಿಸಲು ಸಲಹೆ ನೀಡಿದರು. ಡಾ. ನವೀನ್ ಕುಮಾರ್, ಡಾ. ಕೆ. ಶ್ರೀಧರ್ ಸೇರಿದಂತೆ ಹಲವರಿದ್ದರು.