ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕವಾಗಿ ತಡೆ

| Published : Jul 18 2024, 01:31 AM IST / Updated: Jul 18 2024, 05:32 AM IST

Vidhansudha
ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕವಾಗಿ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪರಿಣಾಮ ಗುರುವಾರ ವಿಧೇಯಕ ಮಂಡನೆ ನಡೆಸಲು ಸಜ್ಜಾಗಿದ್ದ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.

 ಬೆಂಗಳೂರು :   ರಾಜ್ಯದಲ್ಲಿನ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಉದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪರಿಣಾಮ ಗುರುವಾರ ವಿಧೇಯಕ ಮಂಡನೆ ನಡೆಸಲು ಸಜ್ಜಾಗಿದ್ದ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.

ರಾಜ್ಯದಲ್ಲಿನ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಈ ಬಗ್ಗೆ ಮಂಗಳವಾರವೇ ‘ಕನ್ನಡಪ್ರಭ’ ವರದಿ ಪ್ರಕಟ ಮಾಡಿತ್ತು.

ಅಲ್ಲದೆ, ಗುರುವಾರ ಉಭಯ ಸದನಗಳಲ್ಲಿ ‘ಕರ್ನಾಟಕ ರಾಜ್ಯದ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಉದ್ದಿಮೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ವಿಧೇಯಕ-2024’ ಮಂಡನೆ ಮಾಡಲು ಸರ್ಕಾರ ಸಜ್ಜಾಗಿತ್ತು.

ಇದರ ಬೆನ್ನಲ್ಲೇ ರಾಜ್ಯದ ಪ್ರಮುಖ ಉದ್ಯಮಿಗಳಾದ ಕಿರಣ್‌ ಮಜುಂದಾರ್ ಶಾ, ಮೋಹನ್​ ದಾಸ್ ಪೈ ಹಾಗೂ ಎಫ್‌ಕೆಸಿಸಿಐ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿದ್ದವು. ಇನ್ನು ಕನ್ನಡಿಗರು ಈ ವಿಧೇಯಕವನ್ನು ಸ್ವಾಗತಿಸಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪರ-ವಿರೋಧ ಚರ್ಚೆಗಳು ವ್ಯಕ್ತವಾದವು.

ಬೆನ್ನಲ್ಲೇ ಬುಧವಾರ ಸಂಜೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿಧೇಯಕವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ವಿಧೇಯಕ?:

ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದ ‘ಕರ್ನಾಟಕ ರಾಜ್ಯದ ಕೈಗಾರಿಕೆ, ಕಾರ್ಖಾನೆ ಮತ್ತು ಇತರೆ ಉದ್ದಿಮೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ವಿಧೇಯಕ-2024’ ಕರಡು ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಗಿತ್ತು.

ಇದರಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳಲ್ಲಿ ಶೇ.100ರಷ್ಟು ಸ್ಥಳೀಯರಿಗೆ ಮೀಸಲು ಕಲ್ಪಿಸಬೇಕು. ಇದನ್ನು ನಿರ್ವಹಣೆ ಮಾಡಲು ನೋಡಲ್‌ ಏಜೆನ್ಸಿ ಸ್ಥಾಪಿಸಬೇಕು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿದ್ದವು.

ಮಂಗಳವಾರ ಬಹಿರಂಗಗೊಂಡ ಕರಡು ವಿಧೇಯಕ ಪ್ರತಿಯಲ್ಲಿ ಸೂಪರ್‌ವೈಸರ್‌, ವ್ಯವಸ್ಥಾಪಕ, ಟೆಕ್ನಿಕಲ್‌, ಆಡಳಿತ ಸೇರಿ ಆಡಳಿತಾತ್ಮಕ (ಮ್ಯಾನೇಜ್‌ಮೆಂಟ್‌) ಹುದ್ದೆಗಳಲ್ಲಿ ಶೇ.50 ಹಾಗೂ ಕ್ಲರ್ಕ್‌, ಕೌಶಲ್ಯ, ಕೌಶಲ್ಯರಹಿತ, ಅರೆಕೌಶಲ್ಯ, ಗುತ್ತಿಗೆ ನೌಕರರಂತಹ ಆಡಳಿತಾತ್ಮಕವಲ್ಲದ (ನಾನ್‌ ಮ್ಯಾನೇಜ್‌ಮೆಂಟ್‌) ಹುದ್ದೆಗಳಲ್ಲಿ ಶೇ.75ರಷ್ಟನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಹೇಳಲಾಗಿತ್ತು.

ಒಂದೊಮ್ಮೆ ಕನ್ನಡಿಗ ಉದ್ಯೋಗಿಗಳ ಅಲಭ್ಯತೆ ಇದ್ದರೆ ನೋಡಲ್‌ ಏಜೆನ್ಸಿಯಿಂದ ಕನ್ನಡೇತರರನ್ನು ನೇಮಿಸಿಕೊಳ್ಳಲು ಸಂಸ್ಥೆಗಳು ಅನುಮತಿ ಪಡೆಯಬೇಕು ಎಂದೂ ತಿಳಿಸಲಾಗಿತ್ತು.ಸ್ಥಳೀಯರು ಎಂದರೆ ಯಾರು?:

ಕರ್ನಾಟಕದಲ್ಲಿಯೇ ಹುಟ್ಟಿದವರು ಕನ್ನಡಿಗರು. ಅಥವಾ ರಾಜ್ಯದಲ್ಲಿ 15 ವರ್ಷಗಳಿಂದ ವಾಸಿಸುತ್ತಿದ್ದು, ಕನ್ನಡ ಓದಲು, ಬರೆಯಲು ಮಾತನಾಡಲು ಬರುತ್ತಿರಬೇಕು. ಶಿಕ್ಷಣದಲ್ಲಿ ಕನ್ನಡ ಕಲಿಕೆ ಇಲ್ಲದವರು ನೋಡಲ್‌ ಏಜೆನ್ಸಿ ನಡೆಸುವ ಕನ್ನಡ ಕುರಿತ ಪರೀಕ್ಷೆ ಪಾಸಾಗಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಉದ್ಯಮಿಗಳಿಂದ ತೀವ್ರ ವಿರೋಧ:

ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾಪಕ್ಕೆ ಉದ್ಯಮಿಗಳಾದ ಮೋಹನ್‌ದಾಸ್‌ ಪೈ, ಕಿರಣ್‌ ಮಜುಂದಾರ್‌ ಶಾ, ಆರ್‌.ಕೆ.ಮಿಶ್ರಾ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ ಟಿ.ವಿ.ಮೋಹನ್‌ದಾಸ್‌ ಪೈ, ‘ಉದ್ಯೋಗಕ್ಕಾಗಿ ಕನ್ನಡಿಗರನ್ನು ಉತ್ತೇಜಿಸಲು ಬಯಸಿದರೆ ತರಬೇತಿ ನೀಡಿ, ಕೌಶಲ್ಯ ಅಭಿವೃದ್ಧಿ ಮಾಡಿ. ಮೀಸಲಾತಿ ತರುವ ಮೂಲಕ ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಉದ್ಯಮಿ ಕಿರಣ್‌ ಮಜುಂದಾರ್‌ ಶಾ, ‘ಟೆಕ್‌ ಹಬ್‌ನಲ್ಲಿ ನುರಿತ ಪ್ರತಿಭೆಗಳ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗ ಒದಗಿಸಬೇಕೆಂಬ ಗುರಿಯು ತಂತ್ರಜ್ಞಾನದ ಮೇಲೆ ಪರಿಣಾಮ ಬೀರಬಾರದು’ ಎಂದು ಆಕ್ಷೇಪಿಸಿದ್ದರು.

25% ಮೀಸಲಾತಿ ನೀಡಿ- ಎಫ್‌ಕೆಸಿಸಿಐ:

ಇನ್ನು ಈ ವಿಧೇಯಕವನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದ ಎಫ್‌ಕೆಸಿಸಿಐ, ‘ಗ್ರೂಪ್‌ ಸಿ ಮತ್ತು ಡಿ ಗಾಗಿ ಶೇ.100 ಮೀಸಲಾತಿಯು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವಂತಾಗುತ್ತದೆ. ಆದ್ದರಿಂದ ಕನ್ನಡಿಗರಿಗೆ ವಿಶೇಷ ನಿರ್ವಹಣೆ ವರ್ಗದಲ್ಲಿ ಉದ್ಯೋಗ ಕೋಟಾದ ಮಸೂದೆಯ ಸುಮಾರು ಶೇ.25 ಮೀಸಲಾತಿ ನೀಡಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ತಾತ್ಕಾಲಿಕವಾಗಿ ತಡೆ- ಸಿಎಂ:

ಈ ಎಲ್ಲಾ ಪರ-ವಿರೋಧ ಚರ್ಚೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟದಲ್ಲಿ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.