ಅವಿಶ್ವಾಸ ನಿರ್ಣಯದ ನೋಟಿಸ್ ಅನ್ನು ನಾನು ನೋಡಿದ ಒಂದು ಸೆಕೆಂಡ್‌ನಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ. ನನ್ನ ಗೌರವಕ್ಕಿಂತ ಇದು ದೊಡ್ಡದಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರದಿಂದ ನುಡಿದರು.
ವಿಜಯಪುರ : ಅವಿಶ್ವಾಸ ನಿರ್ಣಯದ ನೋಟಿಸ್ ಅನ್ನು ನಾನು ನೋಡಿದ ಒಂದು ಸೆಕೆಂಡ್‌ನಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ. ನನ್ನ ಗೌರವಕ್ಕಿಂತ ಇದು ದೊಡ್ಡದಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರದಿಂದ ನುಡಿದರು.
ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಸಿಎಂ ಒತ್ತಡ, ಅವಿಶ್ವಾಸ ಮಂಡಿಸುವ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಸ್ಥಾನಮಾನವನ್ನು ನಾನು ಹೊಂದಿದ್ದೇನೆ. ಮಂತ್ರಿಯಾಗಿದ್ದೇನೆ. ಮೂರು ಬಾರಿ ಸಭಾಪತಿಯಾಗಿದ್ದೇನೆ. 8 ಬಾರಿ ಶಾಸಕನಾಗಿದ್ದೇನೆ. ಗೌರವಕ್ಕಿಂತ ಇದು ದೊಡ್ಡದಲ್ಲ. ಗೌರವದ ಸ್ಥಾನದಲ್ಲಿದ್ದಂತವರನ್ನು ಅಗೌರವ ಮಾಡುವ ಪದ್ಧತಿ ಒಳ್ಳೆಯದಲ್ಲ. ನಾನು ಅಗೌರವ ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ. ಮತ್ತೆ ನನ್ನ ವ್ಯಕ್ತಿತ್ವವನ್ನು ನಾನು ಎಂದಿಗೂ ಬಿಡುವುದಿಲ್ಲ ಎಂದು ಖಡಕ್ಕಾಗಿಯೇ ನುಡಿದರು.
ಅವಿಶ್ವಾಸ ನಿರ್ಣಯ ಸರಿಯಲ್ಲ:
ಸಭಾಪತಿ ಸ್ಥಾನಕ್ಕೆ ರಾಜಿನಾಮೆ ಕೊಡಿ ಎಂದು ಒತ್ತಡ ಹಾಕುವುದು ಸರಿಯಲ್ಲ ಎಂದ ಅವರು, ಸಂವಿಧಾನ ಪೀಠದಲ್ಲಿದ್ದವರನ್ನು ತೆಗೆಯುವ ಅಥವಾ ಅವಿಶ್ವಾಸ ನಿರ್ಣಯ ಮಾಡುವುದು ಸರಿಯಲ್ಲ. ಅವಿಶ್ವಾಸ ನಿರ್ಣಯ ಏತಕ್ಕೆ ಮಂಡಿಸುತ್ತೀರಿ? ಕಾರಣ ಬೇಕಲ್ಲವೇ. ಒಂದು ಭ್ರಷ್ಟಾಚಾರ ಮಾಡಿರಬೇಕು, ಪಕ್ಷಪಾತ ಮಾಡಿರಬೇಕು, ಏನಾದರೂ ಆಗಿರಬೇಕು. ಸೂಕ್ತ ಕಾರಣ ಬೇಕು. ನಿಮ್ಮ ಮೇಲೆ ನಮಗೆ ವಿಶ್ವಾಸ ಇಲ್ಲ, ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಅನ್ನಬಹುದು. ಆದರೆ ಏನಂತ ಅವಿಶ್ವಾಸ ಮಾಡುತ್ತಿರಿ ನನ್ನ ಮೇಲೆ? ನಾ ಏನೇನು ಮಾಡಿಲ್ಲ. ಇವತ್ತಿನವರೆಗೂ, ಏನು ಮಾಡುತ್ತಾರೋ ನೋಡೋಣ. ಪರಿಸ್ಥಿತಿ ಹೇಗೆ ಬರುತ್ತದೆ, ಅದರ ಪ್ರಕಾರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಶೇ.90ರಷ್ಟು ವಿಪ ಸದಸ್ಯರು ನನ್ನ ಪರವಾಗಿದ್ದಾರೆ.
ಶೇ.90ರಷ್ಟು ವಿಪ ಸದಸ್ಯರು ನನ್ನ ಪರವಾಗಿದ್ದಾರೆ. ಅವರು ಸದನ ಸರಿಯಾಗಿ ನಡೆಸುತ್ತಾರೆ ಎಂದು ಸಾರ್ವಜನಿಕರು ಹೇಳುತ್ತಾರೆ, ಮಾಧ್ಯಮದವರು ಹೇಳುತ್ತಾರೆ. ಅಷ್ಟೇ ಏಕೆ ಅವರದೇ (ಕಾಂಗ್ರೆಸ್‌ನ) ಸೀನಿಯರ್ ಮಂದಿ ಹೇಳುತ್ತಾರೆ. ಅವರದ್ದು ಏನೇನು ನಡೆಯುತ್ತಿದೆ ನೋಡೋಣ. ನನಗೇನಿಲ್ಲ, ನನಗೆ ಅಂತ ವಿಷಯ ಬಂದರೆ ನಾನು ಒಂದು ನಿಮಿಷ ಅಲ್ಲಿ ಕೂಡುವುದಿಲ್ಲ ಎಂದು ಹೇಳುವ ಮೂಲಕ ಸಭಾಪತಿ ಸ್ಥಾನ ಬಿಡುವ ಬೇಸರ ಹೊರಹಾಕಿದರು.
1956 ರಿಂದ ಇಲ್ಲಿಯವರೆಗೆ ಒಬ್ಬ ಸಭಾಪತಿಯ ಮೇಲೆಯೂ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ. ಸಭಾಪತಿಗಳು ತಮ್ಮ ಪೂರ್ಣಾವಧಿ ಮುಗಿಸಿದ್ದಾರೆ. ಇವರೇನೋ ಹೊಸದನ್ನು ತೆಗೆದಿದ್ದಾರೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಎಲ್ಲ ಸಭಾಪತಿಗಳು ತಮ್ಮ ತಮ್ಮ ಅವಧಿಯನ್ನು ಮುಗಿಸಿದ್ದಾರೆ. ಅದು ಸಂವಿಧಾನದ ಹುದ್ದೆ. ಅಲ್ಲಿ ಹೋಗಿ ಕುಳಿತುಕೊಂಡವರು ಯಾವುದೇ ಪಕ್ಷದವರಾಗಲಿ. ಆ ಪಕ್ಷದವರು ಇದ್ದು ಸಹಿತ ಅಲ್ಲಿ ಸಂವಿಧಾನದ ಪ್ರಕಾರ ನಡೆಯಬೇಕಾಗುತ್ತದೆ. ನಾನು ಇಡೀ ದೇಶದಲ್ಲಿಯೇ ಅತ್ಯಂತ ಹಿರಿಯ. 48 ವರ್ಷ ಸುದೀರ್ಘವಾದ ರಾಜಕಾರಣ ಮಾಡಿದ್ದೇನೆ. ನನ್ನವರು ಬದಲಾವಣೆ ಮಾಡುತ್ತಾರೆ ಅಂದರೆ, ಬಹುಮತವಿದೆ ಅಂತ ಅಂದರೆ ಏನು ಮಾಡುತ್ತಾರೋ ಮಾಡಲಿ. ನಾನು ಅದರ ಬಗ್ಗೆ ವಿಚಾರ ಮಾಡುವುದಿಲ್ಲ. ಪರಿಸ್ಥಿತಿ ಮೇಲೆ ನಾನು ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
