ಸಾರಾಂಶ
ಕಲಬುರಗಿ: ಕಲಬುರಗಿಯಲ್ಲಿ ಈಗಿರುವ ಹೈಲಿನ ಡೈರಿಗೆ ಕಾಯಕಲ್ಪ ನೀಡಲಾಗುವುದು. ತಮ್ಮ ಈ ಉದ್ದೇಶ, ಗುರಿ ಸಾಧನೆಗೆ ಕೆಕೆಆರ್‌ಡಿಬಿ ಮೊರೆ ಹೋಗಲು ಮುಂದಾಗುತ್ತೇನೆ. ಜೊತೆಗೆ ಜಿಲ್ಲೆಯ ಎಲ್ಲಾ ಶಾಸಕರ ಸಹಕಾರ ಬೇಕಾಗಿದೆ ಎಂದು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಹಾಲು ಒಕ್ಕೂಟಕ್ಕೆ 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಚಂದ್ರ ಪಾಟೀಲ್ ತಿಳಿಸಿದ್ದಾರೆ.
ಹಾಲು ಒಕ್ಕೂಟಕ್ಕೆ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ಕನ್ನಡಪ್ರಭ ಜೊತೆ ಮಾತನಾಡುತ್ತ, ಈ ಅವಧಿಯಲ್ಲಿ ಹಾಲು ಉತ್ಪಾದಕರ ಸಂಘಗಳ ಹೆಚ್ಚಳಕ್ಕೆ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಜಿಲ್ಲೆಯ ರೈತರು ಹಾಲು ಉತ್ಪಾದನೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ಜೊತೆಗೆ ಕಲಬುರಗಿಯಲ್ಲಿ ಈಗಿರುವ ಹಳೆಯದಾದಂತಹ ಹಾಲಿನ ಡೈರಿಗೆ ಹೊಸ ಯಂತ್ರೋಪಕರಣ ಹಾಗೂ ನವೀಕರಣಕ್ಕೂ ಯೋಜನೆ ರೂಪಿಸಿದ್ದಾಗಿ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಸದ್ಯ 12 ಸಾವಿರದಷ್ಟು ರೈತರು ಹಾಲಿನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಖ್ಯೆ ದ್ವಿಗುಣವಾಗಬೇಕು ಎಂಬುದು ನನ್ನ ಸಂಕಲ್ಪ. ಬರುವ 2 ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚು ರೈತರು ಹಾಲಿನ ಉತ್ಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡೋದಾಗಿ ಹೇಳಿದರು.
ರೈತರಿಗೆ ಎಮ್ಮೆ, ಆಕಳು ಖರೀದಿಗೆ ಸಾಲ ನೀಡಲಾಗುತ್ತಿದೆ. ಡೈರಿಯಿಂದ ಆಕಳು ಹಾಗೂ ಎಮ್ಮೆ ಎರಡೂ ಹಾಲನ್ನು ಹೆಚ್ಚು ಬೆಲೆಗೆ ಖರೀದಿಸಲಾಗುತ್ತಿದೆ. ಹೀಗಾಗಿ ರೈತರು ಹೈನುಗಾರಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.ಡೈರಿ ನವೀಕರಣ- ಹೊಸ ಯಂತ್ರೋಪಕರಣ: ಕಲಬುರಗಿ ಡೈರಿ ತುಂಬ ಹಳೆಯದಾಗಿದೆ. ಈಗಲೂ ಹಳೆಯ ತಂತ್ರಜ್ಞಾನದಿಂದಲೇ ಕೆಲಸ ಮಾಡುವ ಯಂತ್ರೋಪಕರಣಗಳಿವೆ. ಹೊಸ ಬಗೆಯ, ಇಂದಿನ ಅಗತ್ಯ, ಬೇಡಿಕೆಗೆ ತಕ್ಕಂತಹ ತಂತ್ರಜ್ಞಾನದಲ್ಲಿ ಕೆಲಸ ಮಾಡುವ ಯಂತ್ರೋಪಕರಣಗಳು ಇಲ್ಲಿ ಅಗತ್ಯವಿದೆ. ಡೈರಿ ನವೀಕರಣ ಯೋಜನೆ ಸಿದ್ಧಪಡಿಸಲಾಗಿದೆ. 150 ಕೋಟಿ ಮೊತ್ತದಲ್ಲಿ ಇಡೀ ಡೈರಿ ನವೀನ ಯಂತ್ರೋಪಕರಣಗಳೊಂದಿಗೆ ಹೊಸದಾಗಿ ಕಟ್ಟಲು ಸಾಧ್ಯವಿದೆ. ಈ ಹಣಕಾಸನ್ನು ಕೆಕೆಆರ್‌ಡಿಬಿಯಿಂದ ಪಡೆಯಲು ಮುಂದಾಗಿದ್ದೇವೆ. ಇದಕ್ಕಾಗಿ ಸ್ಥಳೀಯ ಎಲ್ಲಾ ಶಾಸಕರ ನೆರವು ಪಡೆಯುತ್ತೇವೆ ಎಂದರು.
ಕಲಬುರಗಿ ಡೈರಿಯ ಪೇಡೆ, ತುಪ್ಪ, ಪನೀರ್, ಗಿಣ್ಣು (ಚೀಸ್), ಮೊಸರು, ಮಜ್ಜಿಗೆ ಸೇರಿದಂತೆ ಅನೇಕ ಉತ್ಪನ್ನಗಳಿಗೆ ತುಂಬಾ ಬೇಡಿಕೆ ಇದೆ. ಈ ಬೇಡಿಕೆಯನ್ನು ಇನ್ನೂ ಹೆಚ್ಚಿಗೆ ಪೂರೈಸಲು ನಮಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಹೊಸ ಯಂತ್ರೋಪಕರಣಗಲಿದ್ದಲ್ಲಿ ಬೇಡಿಕೆಯನ್ನು ಬೇಗ ಈಡೇರಿಸಲು ಸಾಧ್ಯವೆಂದು ರಾಮಚಂದ್ರ ಪಾಟೀಲ್ ಹೇಳಿದ್ದಾರೆ.ಆಳಂದದಲ್ಲಿ ಶೀತಲೀಕರಣ ಘಟಕಕಲಬುರಗಿ ಹಾಲು ಒಕ್ಕೂಟದವರು ಶೀಘ್ರವೇ ಆಳಂದದಲ್ಲಿ 50 ಸಾವಿರ ಲೀ. ಸಾಮರ್ಥ್ಯದ ಶೀಥಲೀಕರಣ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿದ್ದಾರೆ. ಈ ಬಾಗದಲ್ಲಿನ ಹಾಲು ಉತ್ಪಾದನೆಗೆ ಇದು ಸಹಕಾರಿಯಾಗಲಿದೆ. ಶೇಖರಣೆಗೊಂಡ ಹಾಲನ್ನು ಆಳಂದದಲ್ಲೇ ಶೀತಲೀಕರಣ ಘಟಕದಲ್ಲಿ ಶೇಖರಿಸಿ, ಅದನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡಲಾಗುವುದು. ಇದಲ್ಲದೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಾಲು ಶೇಖರಮೆ ಹೆಚ್ಚಾಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.