ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ್‌ ಅವರಿಂದ ಮಹದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ

| N/A | Published : Apr 17 2025, 12:56 AM IST / Updated: Apr 17 2025, 08:44 AM IST

ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ್‌ ಅವರಿಂದ ಮಹದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರ ತಾಯಿ ಮಹದೇವಮ್ಮ ಸುಂದರಂ ಅವರ ಆಸೆಯಂತೆ ಅವರ ಮನೆ ದೇವರಾದ ದೂರ ಗ್ರಾಮ ಸಮೀಪದ ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಬುಧವಾರ ಲೋಕಾರ್ಪಣೆಗೊಳಿಸಿದರು.

ನಂಜನಗೂಡು : ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರ ತಾಯಿ ಮಹದೇವಮ್ಮ ಸುಂದರಂ ಅವರ ಆಸೆಯಂತೆ ಅವರ ಮನೆ ದೇವರಾದ ದೂರ ಗ್ರಾಮ ಸಮೀಪದ ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಬುಧವಾರ ಲೋಕಾರ್ಪಣೆಗೊಳಿಸಿದರು.

ಸುಮಾರು ಸಾವಿರಾರು ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ದೇವಾಲಯವು ಶಿಥಿಲಗೊಂಡಿತ್ತು. ಈಗ ಅದನ್ನು ಸುಮಾರು 25 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ.

ಮಂಗಳವಾರವೇ ಗ್ರಾಮಕ್ಕೆ ಆಗಮಿಸಿದ್ದ ನಟ ಪ್ರಭುದೇವ, ಅವರ ಪತ್ನಿ ಹಿಮಾನಿ ಸಿಂಗ್, ಪುತ್ರಿ ಸೀಯಾ ಪ್ರಭುದೇವ, ತಂದೆ ಮೂಗೂರು ಸುಂದರಂ, ತಾಯಿ ಮಹದೇವಮ್ಮ, ತಮ್ಮ ಎಸ್. ನಾಗೇಂದ್ರ ಪ್ರಸಾದ್ ದೇವಸ್ಥಾನದಲ್ಲಿ ನಡೆದ ವಿವಿಧ ಪೂಜೆಗಳಲ್ಲಿ ಭಾಗವಹಿಸಿ ಬುಧವಾರ ಮಧ್ಯಾಹ್ನ ಪೂರ್ಣಾಹುತಿ ಸಲ್ಲಿಸುವವರೆಗೂ ಕುಟುಂಬ ಸಮೇತ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಪೂಜಾ ನೇತೃತ್ವವನ್ನು ಸಂಗಮ ಕಾರ್ಯಸ್ವಾಮಿ ಮಠಾಧ್ಯಕ್ಷರಾದ ಶ್ರೀ ಮಹೇಶ್ವರ ಸ್ವಾಮಿಗಳು ವಹಿಸಿದ್ದರು.

ಪೂಜೆಯ ನಂತರ ದೂರ, ಕೆಂಬಾಲು, ಬಿದರಗೂಡು ಗ್ರಾಮದ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೂರ ಹಾಗೂ ಕೆಂಬಾಲು ಗ್ರಾಮಸ್ಥರಿಂದ ತಮ್ಮ ನೆಚ್ಚಿನ ನಟ ಪ್ರಭುದೇವ, ಮೂಗೂರು ಸುಂದರಂ ಹಾಗೂ ಮಹದೇವಮ್ಮ ಅವರಿಗೆ ಹಾರ ಪೇಟ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ವೇಳೆ ಸಂಪೂರ್ಣ ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ದೂರ ಗ್ರಾಪಂ ಮಾಜಿ ಸದಸ್ಯ ಎಂ. ಕುಮಾರ್ ಅವರ ಬಗ್ಗೆ ನಟ ಪ್ರಭುದೇವ ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರಿಗೆ ಬಟ್ಟೆ ವಿತರಿಸಿದರು.

ಈ ವೇಳೆ ಪ್ರಭುದೇವ ಅವರ ಮಾವ ದೂರ ಗ್ರಾಮದ ನಾಗಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ನಾಗರಾಜು, ಜಿಪಂ ಮಾಜಿ ಸದಸ್ಯೆ ರೂಪಾ ಲೋಕೇಶ್, ಸ್ವಾಮಿ, ಬೋಗನಂಜಪ್ಪ, ಅಂಗಡಿ ಪಾಪು, ಡಿ.ಎಸ್. ಮಂಜು, ಕೆಂಬಾಲು ಮಹದೇವಸ್ವಾಮಿ, ದೂರ, ಕೆಂಬಾಲು ಹಾಗೂ ಬಿದರಗೂಡು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.