ಸಾರಾಂಶ
೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಹುಟ್ಟೂರಿಗೆ ಆಗಮಿಸಿದ ಯೋಧ ಶಿವಕುಮಾರ್‌ಗೆ ಹುಟ್ಟೂರ ಗೌರವದ ಮೂಲಕ ಸ್ವಾಗತ ಕೋರಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇಂದು ಸೈನ್ಯದಲ್ಲಿ ಉತ್ತಮ ಸೌಲಭ್ಯಗಳಿದ್ದು ಯುವ ಸಮುದಾಯ ದೇಶ ಸೇವೆಮಾಡಲು ಸೈನ್ಯಕ್ಕೆ ಸೇರುವ ಸಂಕಲ್ಪ ಮಾಡಬೇಕು. ಎಲ್ಲರಿಗೂ ಸೇನೆಯಲ್ಲಿ ಅವಕಾಶ ಸಿಗದಿರಬಹುದು. ಆದರೆ ನಾವು ಮಾಡುವ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ಅದು ಕೂಡ ದೇಶಸೇವೆಗೆ ಸಮ ಎಂದು ನಿವೃತ್ತ ಯೋಧ ಸುಬೇದಾರ್ ಮೇಜರ್ ಶಿವಕುಮಾರ್ ಹೇಳಿದರು.28 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಹುಟ್ಟೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆದ ಹುಟ್ಟೂರ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಸೈನ್ಯಕ್ಕೆ ಸೇರಿದ ಕೆಲವೇ ಸಮಯದಲ್ಲಿ ಯುದ್ಧಗಳಲ್ಲಿ ಹೋರಾಡಲು ಅವಕಾಶಗಳು ಸಿಕ್ಕಿದವು. ಬಳಿಕ ಬೇರೆ ಕಠಿಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಇಂದು ಹುಟ್ಟೂರಲ್ಲಿ ನಿವೃತ್ತ ಯೋಧರಿಗೆ ಕೊಡುವ ಗೌರವ ನೋಡಿದಾಗ ಪ್ರತಿಯೊಬ್ಬರಲ್ಲೂ ದೇಶ ಪ್ರೇಮ ಎಷ್ಟಿದೆ ಎಂದು ಕಾಣಬಹುದು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿದರು. ಶಾಸಕ ಹರೀಶ್ ಪೂಂಜಾ, ನಿವೃತ್ತ ಸೈನಿಕರ ಸಂಘದ ಸ್ಥಾಪಕಾದ್ಯಕ್ಷ ಸುನಿಲ್ ಶೆಣೈ, ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫೀಕ್, ಶಿವಕುಮಾರ್ ಅವರ ತಾಯಿ ಸುಂದರಿ, ಪತ್ನಿ ಜಯಶ್ರಿ, ಸಹೋದರ ಹರೀಶ್, ಲಾಯಿಲ ಗ್ರಾ.ಪಂ. ಸದಸ್ಯರಾದ ಅರವಿಂದ, ಪ್ರಾಸಾದ್ ಶೆಟ್ಟಿ ಮತ್ತು ರಿಕ್ಷಾ ಚಾಲಕರು, ಉದ್ಯಮಿಗಳು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರುಕ್ಮಯ್ಯ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು.