ಸಾರಾಂಶ
ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಇರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ
ಕನ್ನಡಪ್ರಭ ವಾರ್ತೆ ಮೈಸೂರು
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಸಂರಕ್ಷಣೆ ವೇಳೆ ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾದವರಿಗೆ ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಗುರುವಾರ ಶ್ರದ್ದಾಂಜಲಿ ಅರ್ಪಿಸಲಾಯಿತು.ಈ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಇರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ವೇಳೆ ಕರ್ತವ್ಯದಲ್ಲಿದ್ದಾಗಲೇ ಇದುವರೆಗೆ 62 ಮಂದಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮುಂದಿನ ಪೀಳಿಗೆಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಿಸಿ ಕೊಡುಗೆ ನೀಡಲು ಅರಣ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಕರ್ತವ್ಯದ ವೇಳೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣ ಮೈಮರೆಯಬಾರದು ಎಂದು ತಿಳಿಸಿದರು.
ಇದೆ ವೇಳೆ ಕರ್ತವ್ಯದ ವೇಳೆ ವನ್ಯಜೀವಿ ದಾಳಿ, ಕಾಡುಗಳ್ಳರ ದಾಳಿ ಸೇರಿದಂತೆ ವಿವಿಧ ಕಾರಣಗಳಿಂದ ಹುತಾತ್ಮರಾದ 62 ಹುತಾತ್ಮರ ಹೆಸರನ್ನು ಡಿಸಿಎಫ್ ಕೆ. ಪರಮೇಶ್ ವಾಚಿಸಿದರು. ಬಳಿಕ ಸಿಎಆರ್ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಿದರು. ನಂತರ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹುತಾತ್ಮರ ಸ್ಮಾರಕಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.ಮೈಸೂರು ವೃತ್ತದ ಸಿಎಫ್ ಡಾ.ಎಸ್.ಎಸ್. ರವಿಶಂಕರ್, ಡಿಸಿಪಿ ಕೆ.ಎಸ್. ಸುಂದರರಾಜ್, ಡಿಸಿಎಫ್ ಲಿಂಗರಾಜು, ಆರ್‌ಎಫ್‌ಓ ಸಂತೋಷ್ ಹೂಗಾರ್ ಮೊದಲಾದವರು ಇದ್ದರು.