ರೈತನ ಪುತ್ರಿ ರೂಪಾ ಪಾಟೀಲ ರಾಜ್ಯಕ್ಕೆ ಪ್ರಥಮ ಸ್ಥಾನ

| N/A | Published : May 03 2025, 01:16 AM IST / Updated: May 03 2025, 06:45 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರೊಬ್ಬರ ಪುತ್ರಿ ರೂಪಾ ಚನಗೌಡ ಪಾಟೀಲ 625ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

 ಬೆಳಗಾವಿ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರೊಬ್ಬರ ಪುತ್ರಿ ರೂಪಾ ಚನಗೌಡ ಪಾಟೀಲ 625ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೂಪಾ ಪಾಟೀಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಬೆಳಗಾವಿ ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ.

ಫಲಿತಾಂಶ ಪ್ರಕಟವಾದಾಗ ತಮ್ಮ ಅಜ್ಜಿಯ ಊರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಬನೂರ ಗ್ರಾಮದಲ್ಲಿದ್ದರು. ಅಜ್ಜಿ ಮನೆಯಲ್ಲೇ ಸಂಭ್ರಮಾಚರಣೆ ಮಾಡಿದರು. ಸಿಹಿ ಸವಿದು ಸಂಭ್ರಮಿಸಿದರು. ರೂಪಾ ತಂದೆ ಚನಗೌಡ ರೈತರಾಗಿದ್ದು, ತಾಯಿ ಲತಾ ಗೃಹಿಣಿ. ತಂದೆ ಐಟಿಐ, ತಾಯಿ ಪಿಯುಸಿ ಓದಿದ್ದಾರೆ. ದಂಪತಿಗೆ ಮೂವರು ಮಕ್ಕಳು. ರೂಪಾ ಅವರ ಅಕ್ಕ ವೈಷ್ಣವಿ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಶೇ.90 ಅಂಕ ಗಳಿಸಿದ್ದರು. ಸಹೋದರ ಸಮರ್ಥಗೌಡ 6ನೇ ತರಗತಿ ಓದುತ್ತಿದ್ದಾನೆ 

.ವಿದ್ಯಾರ್ಥಿನಿಗೆ ₹ 5 ಸಾವಿರ ಬಹುಮಾನ ಘೋಷಿಸಿದ ಅಶೋಕ ಚಂದರಗಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಗಳಿಸಿದ ರಾಜ್ಯದ 22 ವಿದ್ಯಾರ್ಥಿಗಳಲ್ಲಿ ಒಬ್ಬಳಾದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೂಪಾ ಚ.ಪಾಟೀಲ ಅವರಿಗೆ ಅಭಿನಂದನೆಸಲ್ಲಿಸಿರುವ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ₹ 5 ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರೂಪಾ ಪಾಟೀಲ ಅವರನ್ನು ಶೀಘ್ರವೇ ಸನ್ಮಾನಿಸಿ, ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಶಾಲೆಯ ಅವಧಿ‌ ಬಿಟ್ಟು ಪ್ರತಿನಿತ್ಯ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ದಿನಕ್ಕೆ 5-6 ತಾಸು ಓದುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹ ಸಾಕಷ್ಟಿತ್ತು. ಅಪ್ಪ-ಅವ್ವ ನನಗೆ ಓದಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಕಂಠಪಾಠಕ್ಕಿಂತ ಅರ್ಥ ಮಾಡಿಕೊಂಡು ಓದಿದರೇ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. ಮುಂದೆ ವೈದ್ಯೆಯಾಗುವ ಗುರಿ ಇಟ್ಟುಕೊಂಡಿದ್ದೇನೆ. ಅಪ್ಪ-ಅವ್ವ ಸೇರಿ ಅಜ್ಜಿ ಮನೆಯವರಿಗೆಲ್ಲ ತುಂಬಾ ಖುಷಿಯಾಗಿದೆ.

-ರೂಪಾ ಪಾಟೀಲ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಧಕಿ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ರೂಪಾ ಚನಗೌಡ ಪಾಟೀಲ ನಮ್ಮೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್ನುವುದೇ ಹೆಮ್ಮೆ ಹಾಗೂ ಸಂತೋಷದ ವಿಷಯ. ಸರ್ಕಾರಿ ಶಾಲೆಯಲ್ಲಿ ಉತೃಷ್ಠ ಶಿಕ್ಷಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಇರುವುದನ್ನು ಸಾಭಿತು ಪಡಿಸಿದ್ದಾಳೆ. ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡುವ ಸೌಲಭ್ಯಗಳ ಹೊರತಾಗಿ ಸಾರ್ವಜನಿಕರಿಂದ ಸೌಲಭ್ಯ ಸೇರಿದಂತೆ ಪ್ರೋತ್ಸಾಹ ನೀಡಲು ಮುಂದೆ ಬರಬೇಕು. ಕನ್ನಡಪ್ರಭದ ಸಮಸ್ತ ತಂಡಕ್ಕೂ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಕಾರಣ ನಮ್ಮೂರಿನ ಶಾಲಾ ಮಕ್ಕಳಿಗೆ ಮಾರ್ಗದರ್ಶಿಯಾಗಿರುವ ಕನ್ನಡಪ್ರಭದ ಯುವ ಆವೃತ್ತಿಯನ್ನು ನನ್ನ ಕೈಯಿಂದ ಶಾಲೆಗೆ ಹಾಕಿಸುವಂತೆ ಮಾಡುವ ಮೂಲಕ ನಮ್ಮೂರಿನ ಮಕ್ಕಳಿಗೆ ಜ್ಞಾನರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಸರ್ವ ಸದಸ್ಯರಿಗೆ ಅಭಿನಂದನೆಗಳು.

-ಡಾ.ವಿಜಯ ಮರೆಪ್ಪ ಮರೆಪ್ಪನವರ, ದೇವಲಾಪೂರ ನಿವಾಸಿ, ಬೆಂಗಳೂರಿನ ಪ್ರಾಧ್ಯಾಪಕರು.

ನಮ್ಮೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ನನ್ನೂರು ದೇವಲಾಪೂರವನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದ್ದಾಳೆ. ಹಾಗೆಯೇ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ರೂಪಾಳ ಸಾಧನೆ ಇನ್ನು ಮುಂದೆ ನಮ್ಮೂರಿನ ಶಾಲೆಯ ವಿದ್ಯಾರ್ಥಿಗಳಿಗೆ ಸದಾ ಕಾಲ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಶಾಲೆಯ ಶಿಕ್ಷಕ ಬಳಗ ಹಾಗೂ ಎಸ್‌ಡಿಎಂಸಿಯ ಸರ್ವ ಸದಸ್ಯರ ಗೌರವ ಹೆಚ್ಚಿಸಿದೆ. ವಿದ್ಯಾರ್ಥಿನಿಗೆ ಹಾಗೂ ನನ್ನೆಲ್ಲ ಶಿಕ್ಷಕರಿಗೆ, ಎಸ್‌ಡಿಎಂಸಿ ಸರ್ವ ಸದಸ್ಯರಿಗೆ ಹೃತ್ಪೂರಕ ಅಭಿನಂದನೆಗಳು.

-ಉದಯ ಗಂಗಪ್ಪ ಬೆಳಗಾವಿ, ಅಧ್ಯಕ್ಷರು ಕುಲಭೂಷಣ ಕೋ ಆಫ್ ಕ್ರೆಡಿಟ್ ಸೊಸೈಟಿ ದೇವಲಾಪೂರ.