22ರಂದು ಗ್ರಾಮೀಣ ಕ್ರೀಡೋತ್ಸವ

| Published : Dec 19 2024, 12:33 AM IST

ಸಾರಾಂಶ

22ರಂದು ನಗರದ ಗಾಂಧಿ ಮೈದಾನದಲ್ಲಿ ಗ್ರಾಮೀಣ ಕ್ರೀಡೋತ್ಸವ ನಡೆಯಲಿದೆ ಎಂದು ಹರೀಶ್‌ ಜಿ. ಆಚಾರ್ಯ ತಿಳಿಸಿದರು. ಬೆಳಗ್ಗೆ 9. 30ಕ್ಕೆ ಆರಂಭಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮೀಣ ಕ್ರೀಡಾ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹ್ಯೂಮನ್ ರೈಟ್ಸ್ ಇಂಟ‌ರ್‌ನ್ಯಾಷನಲ್ ಫೆಡರೇಷನ್ ವತಿಯಿಂದ ವೀರನಾಡು ರಕ್ಷಣಾ ವೇದಿಕೆ ಸಹಯೋಗದಲ್ಲಿ ಡಿ.22ರಂದು ನಗರದ ಗಾಂಧಿ ಮೈದಾನದಲ್ಲಿ ‘ಗ್ರಾಮೀಣ ಕ್ರೀಡೋತ್ಸವ’ ನಡೆಯಲಿದೆ ಎಂದು ಫೆಡರೇಷನ್ ರಾಜ್ಯಾಧ್ಯಕ್ಷ ಹರೀಶ್ ಜಿ. ಆಚಾರ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳುವ ಕ್ರೀಡೋತ್ಸವದಲ್ಲಿ ವಯೋಮಿತಿಯ ಭೇದವಿಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಬೇಕೆಂದು ಮನವಿ ಮಾಡಿದರು.

ಕ್ರೀಡೋತ್ಸವದಲ್ಲಿ ಗೋಲಿ, ಬುಗುರಿ, ಲಗೋರಿ, ಚಕ್ರಗಾಡಿ ತಳ್ಳುವುದು, ಕ್ಯಾಟರ್‌ಬಿಲ್ಲಿನಿಂದ ಕಲ್ಲು ಹೊಡೆಯುವುದು, ಕುಂಟ ಬಿಲ್ಲೆ ಮೊದಲಾದ ಗ್ರಾಮೀಣ ಆಟಗಳು ಸಂಜೆ 5 ಗಂಟೆ ವರೆಗೆ ನಡೆಯಲಿದೆ. ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು ಸೇರಿದಂತೆ ಕೆಲ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಅತ್ಯಂತ ಸಣ್ಣ ಮೊತ್ತದ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ:

ಕ್ರೀಡೋತ್ಸವದ ನಂತರ ಸಂಜೆ 7 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಪೌರಕಾರ್ಮಿಕರು, ಶ್ರಮಿಕ ಬಂಧುಗಳು, ಸವಿತಾ ಸಮಾಜದವರು, ಕೃಷಿಕರು, ಮಾಜಿ ಸೈನಿಕರು, ಹಿರಿಯ ಆಟೋ, ಟ್ಯಾಕ್ಸಿ ಚಾಲಕರು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದೆಂದು ಫೆಡರೇಷನ್ ರಾಜ್ಯಾಧ್ಯಕ್ಷ ಹರೀಶ್‌ ಆಚಾರ್ಯ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಕನ್ನಡಕ್ಕೆ ಸಂಬಂಧಪಟ್ಟ ಕನ್ನಡದ ಹಾಡುಗಳು, ನೃತ್ಯಗಳನ್ನು ಪ್ರದರ್ಶಿಸಬೇಕು. ಆಟೋಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 7338547897, 9164857163, 8088569430, 8861075777, 9449413699, 9632611469 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್‌ ಫೆಡರೇಷನ್ ಉಪಾಧ್ಯಕ್ಷ ಪಳಂಗಂಡ ಈಶ್ವರ್, ಕಾರ್ಯದರ್ಶಿ ಆರ್. ಲಕ್ಷ್ಮಣ್, ಸದಸ್ಯರಾದ ಎ.ಯು.ಪೂಣಚ್ಚ ಹಾಗೂ ಎ.ಎ.ಪೆಮ್ಮಯ್ಯ ಸುದ್ದಿಗೋಷ್ಠಿಯಲ್ಲಿದ್ದರು.