ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಕಳೆದ 9 ವರ್ಷಗಳ ಹಿಂದೆ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಮೂವರಿಗೆ ಐದು ವರ್ಷ ಸಜೆಯಾಗಿರುವುದರಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ದುಃಖ ಮಡುಗಟ್ಟಿದ್ದು, ಯಾರ ಮುಖದಲ್ಲಿಯೂ ಕಳೆ ಇಲ್ಲ.ಗ್ರಾಮದಲ್ಲಿ ಯಾರೂ ಸಹ ಯಾರೊಂದಿಗೆ ಮಾತನಾಡಲು ಭಯಪಡುತ್ತಿದ್ದಾರೆ. ಇದೇನು ಬಂತು ನಮ್ಮೂರಿಗೆ ಎಂದು ಹಳಹಳಿಸುತ್ತಾರೆ. ಆದರೆ, ಕೇರಿಯಲ್ಲಿ ದೌರ್ಜನ್ಯಕ್ಕೆ ಒಳಗಾದವರ ಕುಟುಂಬದವರು, ತಮಗೆ ಆಗ ಆದ ಅನ್ಯಾಯಕ್ಕೆ ಕೊನೆಗೂ ಜಯ ಸಿಕ್ಕಿತು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಈಗ ನಾವು ಚಂದದಿಂದಲೇ ಇದ್ದೇವೆ, ಎಲ್ಲರೂ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ ಎನ್ನುತ್ತಿದ್ದಾರೆ.
ಗ್ರಾಮದಲ್ಲಿ 101 ಜನರು ಬಂಧನ ಮಾಡಿದ್ದು, ಅದರಲ್ಲೂ ಒಬ್ಬರು ಮೃತಪಟ್ಟಿರುವುದು ಊರಿನವರಿಗೆ ಆಘಾತ ಉಂಟುಮಾಡಿದೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುವ ಗ್ರಾಮಸ್ಥರು, ಘಟನೆಯಲ್ಲಿ ಎಲ್ಲರೂ ಪಾಲ್ಗೊಂಡಿರಲಿಲ್ಲ. ಆದರೂ ಎಲ್ಲರಿಗೂ ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.ಮನೆಗೆ ಆಸರೆಯಾದವರೇ ಜೈಲುಪಾಲಾಗಿರುವುದರಿಂದ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡು ಬಂದಿತು.
ಹಾಸಿಗೆ ಹಿಡಿದ ಮಲ್ಲಮ್ಮ: ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಂಬಣ್ಣ ಬಿಪಿ ಕಡಿಮೆಯಾಗಿ 2017ರಲ್ಲಿ ಅಸು ನೀಗಿದ್ದನು. ಈಗ ಆತನ ಸಹೋದರ ಶಾಮಣ್ಣನೇ ಮನೆಗೆ ಆಸರೆಯಾಗಿದ್ದಾನೆ. ಮಗಳ ಮದುವೆಯೂ ನಿಶ್ಚಯವಾಗಿದೆ. ಆದರೆ, ಈಗ ಜೈಲು ಸೇರಿದ್ದರಿಂದ ಆತನ ತಾಯಿ ಮಲ್ಲಮ್ಮ ಮಡ್ಡೇರ ಹಾಸಿಗೆ ಹಿಡಿದಿದ್ದಾಳೆ. ನನ್ನ ಮಗ ತಪ್ಪೇ ಮಾಡಿಲ್ಲ ಎಂದು ಬಿಕ್ಕಳಿಸುತ್ತಾಳೆ.ಚಲಪತಿ ಮಡಿವಾಳರ ಎನ್ನುವಾತನ ಬಂಧನವಾಗಿದ್ದು, ಆತನಿಗೆ ಇರುವ ಎರಡು ವರ್ಷದ ಮಗು ಸಹ ಪದೇ ಪದೇ ಅಪ್ಪ ಎಲ್ಲಿ ಎಂದು ಕೇಳುತ್ತಿದೆ ಎಂದು ಆತನ ಪತ್ನಿ ನೇತ್ರಾವತಿ ಕಣ್ಣೀರು ಹಾಕುತ್ತಿದ್ದಾರೆ.
ಹೀಗೆ, ಗ್ರಾಮದಲ್ಲಿ ಸುತ್ತಾಡಿದರೆ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿರುವವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಯಾರ ಮುಖದಲ್ಲಿಯೂ ಕಳೆ ಇಲ್ಲ ಮತ್ತು ಗ್ರಾಮದಲ್ಲಿ ಪಶ್ಚಾತ್ತಾಪ ಎದ್ದು ಕಾಣುತ್ತಿದೆ.ಜಯ ದೊರೆತಿದೆ: ಆದರೆ, ಕೇರಿಯಲ್ಲಿ ಮಾತ್ರ ನಿಟ್ಟುಸಿರು ಬಿಡುತ್ತಿದ್ದಾರೆ. ತಮ್ಮ ಮೇಲೆ ಆಗಿದ್ದ ದೌರ್ಜನ್ಯಕ್ಕೆ ಶಿಕ್ಷೆಯಾಗಿದ್ದು, ನಮಗೆ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ಗ್ರಾಮದ ದುರಗಪ್ಪ ಹರಿಜನ.
ನಾವು ಈಗ ಸಹೋದರರಂತೆ ಬದುಕುತ್ತಿದ್ದೇವೆ, ಆದರೆ, ಅಂದು ನಮ್ಮ ಮೇಲೆ ದೌರ್ಜನ್ಯವಾದಾಗ ನಾವು ಅಷ್ಟಿಷ್ಟು ಕಷ್ಟ ಅನುಭವಿಸಿಲ್ಲ, ಬದುಕು ಕಟ್ಟಿಕೊಳ್ಳಲು ಊರನ್ನೇ ತೊರೆದಿದ್ದೆವು. ಈಗ ಅವರಿಗೆ ನೋವು ಆಗಿರಬಹುದು. ಆದರೆ, ಆಗ ನಮಗೆ ಆಗಿರುವ ನೋವು ಅಷ್ಟಿಷ್ಟಲ್ಲ ಎನ್ನುತ್ತಾರೆ. ಈಗ ನಮ್ಮಲ್ಲಿ ದ್ವೇಷ ಇಲ್ಲ. ನಾವು ಒಂದಾಗಿದ್ದೇವೆ, ಅನ್ಯೋನ್ಯವಾಗಿದ್ದೇವೆ. ಸಹೋದರರಂತೆ ಇದ್ದೇವೆ, ಈಗ ಯಾವ ಸಮಸ್ಯೆ ಇಲ್ಲ. ಆದರೆ, ಆಗ ಆಗಿರುವ ಘಟನೆಗೆ ಈಗ ಜಯ ದೊರೆತಿದೆ ಎನ್ನುತ್ತಾರೆ.ನನ್ನ ಮಗನನ್ನು ಬಂಧಿಸಿ, ಕರೆದುಕೊಂಡು ಹೋಗಿದ್ದಾರೆ. ನಮ್ಮ ಮನೆಯನ್ನು ಯಾರು ಮುನ್ನಡೆಸಬೇಕು? ಆತ ಗ್ರಾಮೀಣ ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದ. ಅದರಿಂದಲೇ ನಮ್ಮ ಬದುಕು ಸಾಗಿಸುತ್ತಿತ್ತು. ಆಗ ಆತನೇ ಜೈಲಿಗೆ ಹೋಗಿದ್ದರಿಂದ ಹೇಗೆ ಜೀವನ ಮಾಡುವುದು ಎನ್ನುತ್ತಾರೆ ವಿರೂಪಣ್ಣ ಮಡಿವಾಳರ.
ಮಕ್ಕಳು ಗೈರು: ಗ್ರಾಮದಲ್ಲಿರುವ ಶಾಲೆಗೆ ಮಕ್ಕಳು ಸಹ ಗೈರು ಹಾಜರಾಗಿರುವುದು ಕಂಡು ಬಂದಿತು. ಶಾಲೆಯಲ್ಲಿ 145 ಮಕ್ಕಳು ಇದ್ದರೂ ಶಾಲೆಗೆ ಬಂದಿದ್ದು 80-90 ಮಕ್ಕಳು ಮಾತ್ರ. ಗ್ರಾಮದವರಿಗೆ ಶಿಕ್ಷೆಯಾಗಿರುವುದರಿಂದ ಬಹುತೇಕ ಮನೆಯಲ್ಲಿ ದುಃಖ ಮಡುಗಟ್ಟಿರುವುದರಿಂದ ಅವರ ಮನೆಯ ಮಕ್ಕಳು ಶಾಲೆ ಬಂದಿರಲಿಲ್ಲ.ದೂರದಾರ ನಿಧನ: ಪ್ರಕರಣದಲ್ಲಿ ದೂರುದಾರನಾಗಿರುವ ಭೀಮೇಶ ಸಹ 8 ತಿಂಗಳ ಹಿಂದೆ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಕೋರ್ಟಿನಲ್ಲಿ ಜಯವಾಗಿರುವುದನ್ನು ಕೇಳುವುದಕ್ಕೂ ದೂರದಾರ ಇಲ್ಲವಾಗಿದ್ದಾನೆ.ಹೀಗೆ, ಇಡೀ ಪ್ರಕರಣದಲ್ಲಿ ಆರೋಪಿಗಳ ಪೈಕಿ 11 ಜನರು ಮತ್ತು ಸಂತ್ರಸ್ತರ ಪೈಕಿ ಇಬ್ಬರು ಈಗಾಗಲೇ ಮರಣ ಹೊಂದಿದ್ದಾರೆ.ಸಹ ಭೋಜನ: ಗ್ರಾಮದಲ್ಲಿ ಆರು ತಿಂಗಳ ಹಿಂದೆ ನಡೆದ ಜಾತ್ರೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಸಹಭೋಜನ ಮಾಡಿದ್ದಾರೆ. ತಮ್ಮಲ್ಲಿನ ದ್ವೇಷ ಮರೆತು ಪರಸ್ಪರ ಒಂದಾಗಿ ಬಾಳುತ್ತಿದ್ದಾರೆ. ಗ್ರಾಮದ ದುರ್ಗಾದೇವಿ ಜಾತ್ರೆಯನ್ನು ಒಗ್ಗಟ್ಟಾಗಿಯೇ ಮಾಡಿದ್ದಾರೆ. ಪರಸ್ಪರ ಒಗ್ಗೂಡಿ ಸಹಭೋಜನ ಮಾಡಿದ್ದಾರೆ. ಈಗ ಗ್ರಾಮದಲ್ಲಿ ಅಸ್ಪೃಶ್ಯತೆಗೆ ಜಾಗ ಇಲ್ಲದಂತೆ ಪರಸ್ಪರರು ಸಹೋದರರಂತೆ ಬದುಕುತ್ತಿದ್ದಾರೆ. ಈಗಾಗಲೇ ನಡೆದಿರುವ ಘಟನೆಯ ಬಗ್ಗೆ ವಿಷಾದವೂ ಇದೆ.