ಸಾರಾಂಶ
ಶ್ರೀವಿದ್ಯಾ ಸಕಲೇಶಪುರಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣ ಅದೆಷ್ಟೋ ಕ್ರೀಡಾಪಟುಗಳ ಪಾಲಿಗೆ ಭವಿಷ್ಯದ ದಾರಿ ತೋರಬೇಕಾದ ಅಂಗಳವಾಗಬೇಕಿತ್ತು. ಆದರೆ, ಅಲ್ಲಿನ ಅವ್ಯವಸ್ಥೆಯ ಕಾರಣದಿಂದಾಗಿ ಕ್ರೀಡಾಪಟುಗಳ ಭವಿಷ್ಯವನ್ನೇ ಮಂಕಾಗಿಸುವಷ್ಟರಮಟ್ಟಿಗೆ ಹದಗೆಟ್ಟಿದ್ದು, ಕ್ರೀಡಾಂಗಣದ ಅಭಿವೃದ್ಧಿ ಮಾಡಬೇಕೆಂದು ತಾಲೂಕಿನ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ.ಆಗಸ್ಟ್ ೨೩ರಿಂದ ತಾಲೂಕು ಕ್ರೀಡಾಂಗಣದಲ್ಲಿ ಆರಂಭವಾಗಿರುವ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಮಳೆ ಶಾಪವಾಗಿ ಕಾಡುತ್ತಿದ್ದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳನ್ನು ದೇವರೆ ರಕ್ಷಿಸಬೇಕಿದೆ.
ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಮುಕ್ತಾಯಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಳೆಯನ್ನು ಲೆಕ್ಕಿಸದೆ ಕ್ರೀಡಾಕೂಟ ನಡೆಸುತ್ತಿರುವ ತಾಲೂಕು ಆಡಳಿತಕ್ಕೆ ವಿದ್ಯಾರ್ಥಿಗಳ ಕಷ್ಟ ಅರಿವಾಗದಾಗಿದೆ. ಈಗಾಗಲೇ ಹದಗೆಟ್ಟಿರುವ ತಾಲೂಕು ಕ್ರೀಡಾಂಗಣದಲ್ಲಿ ಹೆಜ್ಜೆ ಇಟ್ಟಲೆಲ್ಲ ಇರುವೆ ಹುತ್ತಗಳಿದ್ದು ಮುಚ್ಚುವ ಯತ್ನವನ್ನು ತಾಲೂಕು ಆಡಳಿತ ನಡೆಸುತ್ತಿಲ್ಲ. ಪರಿಣಾಮ ಇರುವೆ ಹುತ್ತಕ್ಕೆ ಕಾಲು ಹಾಕಿ ಸಾಕಷ್ಟು ವಿದ್ಯಾರ್ಥಿಗಳು ಕಾಲಿಗೆ ಕಚ್ಚಿಸಿಕೊಂಡಿದ್ದರೆ, ಕ್ರೀಡಾಂಗಣದ ಸುತ್ತ ಇರುವ ಗಿಡಗಂಟಿಗಳು ವಿದ್ಯಾರ್ಥಿಗಳನ್ನು ಭಯಪಡಿಸುವಂತಿದೆ. ಇದಲ್ಲದೆ ಕ್ರಿಡಾಂಗಣದಲ್ಲಿ ಅಡಿಗಳಷ್ಟು ನೀರಿದ್ದು ನೀರು ಕೆಸರಿನಲ್ಲೆ ವಿದ್ಯಾರ್ಥಿಗಳು ಆಟ ಆಡಬೇಕಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿರುವ ತಮ್ಮ ನೈಜ ಕೌಶಲ್ಯವನ್ನು ತೋರ್ಪಡಿಸಲು ಸಾಧ್ಯವಿಲ್ಲದಾಗಿದೆ. ಮಳೆ ಬಂದರೆ ಹಾಕಿರುವ ಒಂದೆರಡು ಶಾಮಿಯಾನಗಳು ಸೋರುವುದರಿಂದ ಮಳೆಯಿಂದ ರಕ್ಷಣೆ ಪಡೆಯಲು ಕ್ರೀಡಾಳುಗಳು ಹಾಗೂ ಪ್ರೇಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ರೀಡಾಂಗಣದಲ್ಲಿ ಶೌಚಗೃಹವಿದ್ದರೂ ನೀರಿನ ಸೌಲಭ್ಯವಿಲ್ಲದ ಕಾರಣ ದೇಹಬಾಧೆ ತೀರಿಸಿಕೊಳ್ಳಲು ವಿದ್ಯಾರ್ಥಿಗಳು ಗಿಡಗಂಟಿಗಳ ಮೊರೆ ಹೋಗಬೇಕಿದೆ.ಪುಂಡರ ಹಾವಳಿ: ಮಳೆಯಿಂದಾಗಿ ಕೆಸರುಮಯವಾಗಿರುವ ಕ್ರೀಡಾಂಗಣಕ್ಕೆ ಬರುವ ಪುಂಡರ ಗುಂಪು ಬೈಕ್‌ನಲ್ಲಿ ಮನಬಂದಂತೆ ಸಂಚರಿಸುವುದರಿಂದ ಮೈದಾನವೆಲ್ಲ ಭತ್ತದಗದ್ದೆಗಳಂತೆ ಭಾಸವಾಗುತ್ತಿದ್ದು ಜನರು ನಡೆದಾಡುವುದು ಕಷ್ಟ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಕ್ರೀಡಾಕೂಟ ನಡೆಯುವ ವೇಳೆ ಕ್ರೀಡಾಂಗಣದ ಒಳ ಬರುವ ಬೈಕ್ ಹಾಗೂ ವಾಹನಗಳನ್ನು ತಡೆಗಟ್ಟುವಂತೆ ತಾಲೂಕು ಆಡಳಿತಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಿಲ್ಲದಾಗಿದೆ. ಕ್ರೀಡಾಕೂಟ ಮುಂದೂಡಿ: ಆಗಸ್ಟ್ ತಿಂಗಳಿನಲ್ಲಿ ಧಾರಕಾರ ಮಳೆ ಸುರಿಯುವುದು ತಾಲೂಕಿನಲ್ಲಿ ಸಾಮಾನ್ಯವಾಗಿರುವುದರಿಂದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಮಳೆಗಾಲ ನಿಂತ ನಂತರ ನಡೆಸುವಂತೆ ಹಲವು ವರ್ಷಗಳಿಂದ ಪೋಷಕರು ಆಗ್ರಹಿಸುತ್ತಿದ್ದರೂ ತಾಲೂಕು ಆಡಳಿತ ಕಿವಿಗೊಡದಾಗಿದೆ. ಮಳೆ ಹಾಗೂ ಕೆಸರು ಮಿಶ್ರಿತ ವಾತಾವರಣದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಜ್ವರಸಂಬಂಧಿತ ರೋಗಕ್ಕೆ ತುತ್ತಾಗುತ್ತಿದ್ದು ಇದು ವ್ಯಾಸಂಗದ ಮೇಲೂ ಪರಿಣಾಮ ಬೀರುತ್ತಿದೆ. ನೆಪಮಾತ್ರಕ್ಕೆ ನಡೆಸುವ ಕ್ರೀಡೆ ಯಾವ ಪುರುಷಾರ್ಥಕ್ಕೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಹೆಕ್ಕಿ ತೆಗೆಯುವ ಉದ್ದೇಶದಿಂದ ಕ್ರೀಡೆ ಆಯೋಜನೆ ನಡೆಸಬೇಕು, ಆದರೆ ಇಲ್ಲಿ ಕ್ರೀಡೆ ನಡೆಸಲು ಸೂಕ್ತ ವಾತಾವರಣ ಇಲ್ಲದಿದ್ದರೂ ಜಿಲ್ಲಾಡಳಿತದ ಸೂಚನೆಗೆ ಬೆದರಿ ಕ್ರೀಡೆ ನೆಡಸುವುದರಿಂದ ಏನು ಸಾಧಿಸಿದಂತಾಗುತ್ತದೆ ಎಂಬುದು ವಿದ್ಯಾರ್ಥಿ ಪೋಷಕರ ಅಸಮಾಧಾನವಾಗಿದೆ.ಭ್ರಷ್ಟಾಚಾರ: ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ೨೦೨೨ರಲ್ಲಿ ಯುವಜನ ಸಬಲೀಕರಣ ಇಲಾಖೆಯಿಂದ ೩೦ ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಆದರೆ, ಕಿಡಿಗೇಡಿಗಳ ಕಲ್ಲೆಸತಕ್ಕೆ ಸಿಲುಕಿ ಹಾಳಾಗಿರುವ ಸ್ಟೇಡಿಯಂ ಮೇಲ್ಛಾವಣಿ ದುರಸ್ತಿಯನ್ನು ಮಾಡದೆ ಸ್ಟೇಡಿಯಂಗೆ ಸುಣ್ಣ ಬಣ್ಣ ಬಳಿದಿರುವುದು ಹಾಗೂ ಮುಖ್ಯದ್ವಾರದಿಂದ ಸ್ಟೇಡಿಯಂವರಗೆ ಸಿಮೆಂಟ್ ರಸ್ತೆ ಮಾಡಲು ೩೦ ಲಕ್ಷ ವೆಚ್ಚ ಮಾಡಲಾಗಿದೆ. ಈ ಬಗ್ಗೆ ಅಂದಿನ ಶಾಸಕ ಎಚ್.ಕೆ ಕುಮಾರಸ್ವಾಮಿ ಗಮನಕ್ಕೆ ತಂದರೂ ಗುತ್ತಿಗೆದಾರರ ಪರವಾಗಿಯೇ ಶಾಸಕರು ವರ್ತಿಸುವ ಮೂಲಕ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದರು ಎಂಬುದು ಕ್ರೀಡಾಪಟುಗಳ ಆರೋಪವಾಗಿದೆ. ಇದರಿಂದಾಗಿ ಇಂದು ಕ್ರೀಡಾಂಗಣ ಕಾಲಿಡದಷ್ಟು ಅಧ್ವಾನವಾಗಿದ್ದು ಸಮಗ್ರ ಅಭಿವೃದ್ಧಿಗಾಗಿ ಕಾದಿದೆ. ಒಳಕ್ರೀಡಾಂಗಣಕ್ಕೆ ಆಗ್ರಹ: ಹೆಚ್ಚು ಮಳೆ ಬೀಳುವ ತಾಲೂಕಿನಲ್ಲಿ ಒಳ ಕ್ರೀಡಾಂಗಣ ನಿರ್ಮಿಸುವಂತೆ ಕ್ರೀಡಾಪಟುಗಳು ಹಲವು ದಶಕಗಳಿಂದ ಬೇಡಿಕೆ ಇಟ್ಟಿದ್ದಾರೆ. ಆದರೆ, ಕಡಿಮೆ ಮಳೆ ಬೀಳುವ ಹೊಳೆನರಸೀಪುರ ಹಾಗೂ ಹಾಸನದಲ್ಲಿ ಒಳ ಕ್ರೀಡಾಂಗಣಗಳು ನಿರ್ಮಾಣವಾದರೂ ಇಲ್ಲಿ ಇದರ ಭಾಗ್ಯ ಇಲ್ಲದಾಗಿದೆ. ತಾಲೂಕಿನಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು ವಾಲಿಬಾಲ್, ಫುಟ್‌ಬಾಲ್, ಕ್ರಿಕೆಟ್, ಷಟಲ್ ಆಡುವ ಹಲವು ಕ್ಲಬ್‌ಗಳಿದ್ದು, ತಾಲೂಕು ಕ್ರೀಡಾಂಗಣದಲ್ಲಿ ನೂರಾರು ಸಂಖ್ಯೆಯಲ್ಲಿ ಮುಂಜಾನೆ, ಸಂಜೆ ಕ್ರೀಡೆ ಅಭ್ಯಾಸ ಮಾಡಲಾಗುತ್ತದೆ. ಆದರೆ, ಮಳೆಗಾಲದ ಅವಧಿಯ ನಾಲ್ಕರಿಂದ ಆರು ತಿಂಗಳು ಈ ಎಲ್ಲ ಕ್ರೀಡಾಪಟುಗಳು ಅನಿವಾರ್ಯವಾಗಿ ತಮ್ಮ ಅಭ್ಯಾಸವನ್ನು ನಿಲ್ಲಿಸುವಂತ ಪರಿಸ್ಥಿತಿ ಇದೆ.* ಹೇಳಿಕೆ 1 :
ಮಳೆಯಲ್ಲಿ ಅನಿವಾರ್ಯವಾಗಿ ಕ್ರೀಡೆ ನಡೆಸಲಾಗುತ್ತಿದೆ. ಕ್ರೀಡಾಕೂಟವನ್ನು ಸೆಪ್ಟಂಬರ್ ತಿಂಗಳಿನಲ್ಲಿ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯ ಪೋಷಕರ ವಲಯದಿಂದ ಕೇಳಿ ಬರುತ್ತಿದ್ದು ಈ ಮನವಿಯನ್ನು ಶಾಸಕರ ಗಮನಕ್ಕೂ ತರಲಾಗಿದೆ.ಪುಷ್ಪಲತಾ, ಕ್ಷೇತ್ರ ಶಿಕ್ಷಣಾಧಿಕಾರಿ, ಸಕಲೇಶಪುರ.* ಹೇಳಿಕೆ 2
ಮಳೆಗಾಲ ಮುಗಿದ ನಂತರ ಕ್ರೀಡಾಕೂಟ ಆಯೋಜಿಸಲು ಅನುವು ಮಾಡಿಕೊಡುವಂತೆ ಕ್ರೀಡೆ ಮತ್ತು ಯುವಜನ ಸಚಿವರಲ್ಲಿ ಮನವಿ ಮಾಡಲಾಗುವುದು ಹಾಗೂ ಈ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪ ಮಾಡಲಾಗುವುದು.- ಸಿಮೆಂಟ್ ಮಂಜು, ಶಾಸಕ * ಹೇಳಿಕೆ 3:
ಕ್ರೀಡೆಯ ಬಗ್ಗೆ ನಮ್ಮ ಮಕ್ಕಳಿಗೆ ಒಲವಿದೆ. ಆದರೆ ಕ್ರೀಡಾಂಗಣದ ಪರಿಸ್ಥಿತಿ ನೋಡಿ ನಾನು ಕ್ರೀಡಾಕೂಟಕ್ಕೆ ನಮ್ಮ ಮಕ್ಕಳನ್ನು ಕಳುಹಿಸದಿರಲು ನಿರ್ದರಿಸಿದ್ದೇನೆ.-ಮಹಮ್ಮದ್ ನಿಜಾರ್, ಪೋಷಕ