ನಾನ್ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ಶೀಘ್ರ: ಜಿಲ್ಲಾಧಿಕಾರಿ
KannadaprabhaNewsNetwork | Published : Oct 31 2023, 01:16 AM IST
ನಾನ್ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ಶೀಘ್ರ: ಜಿಲ್ಲಾಧಿಕಾರಿ
ಸಾರಾಂಶ
ಸಿಆರ್‌ಝಡ್ ವ್ಯಾಪ್ತಿಯ ಮರಳು ಯಾವಾಗ ಲಭ್ಯವಾಗಬಹುದು ಎನ್ನುವುದು ಜಿಲ್ಲಾಡಳಿತದ ಕೈಯಲ್ಲಿಲ್ಲ. ಆದರೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಶೀಘ್ರದಲ್ಲಿ ಮರಳು ಸಿಗುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಜಿಲ್ಲೆಯ ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳೆತ್ತುವ ಕಾರ್ಯ ಆರಂಭಿಸುವ ನಿಟ್ಟಿನಲ್ಲಿ ಸೂಕ್ತ ಪ್ರಕ್ರಿಯೆಗಳು ನಡೆಯುತ್ತಿವೆ. ಸಿಆರ್‌ಝಡ್ ವ್ಯಾಪ್ತಿಯ ಮರಳು ಯಾವಾಗ ಲಭ್ಯವಾಗಬಹುದು ಎನ್ನುವುದು ಜಿಲ್ಲಾಡಳಿತದ ಕೈಯಲ್ಲಿಲ್ಲ. ಆದರೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಶೀಘ್ರದಲ್ಲಿ ಮರಳು ಸಿಗುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭರವಸೆ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಝಡ್ ವ್ಯಾಪ್ತಿಯಲ್ಲಿ ಬೋಟ್‌ಗಳಿಗೆ ಅಡ್ಡಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಜಿಲ್ಲಾಡಳಿತವು ಎನ್‌ಐಟಿಕೆ ಸುರತ್ಕಲ್ ಸಹಾಯದಿಂದ ಬ್ಯಾಥಮೆಟ್ರಿ ಸರ್ವೇಯನ್ನು ಈಗಾಗಲೇ ನಡೆಸಿದ್ದು, ಪರಿಸರ ಅನುಮತಿಗಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಜ್ಯ ಸಿಆರ್‌ಝಡ್ ಪ್ರಾಧಿಕಾರದಿಂದ ಕ್ಲಿಯರೆನ್ಸ್ ಬರಬೇಕಿದೆ. 2019ರ ಸಿಆರ್‌ಝಡ್ ಅಧಿಸೂಚನೆ ಅನ್ವಯ ಹೊಸ ನಿಯಮಾವಳಿ ಅನುಮೋದನೆಯಾಗಬೇಕಾದ ಕಾರಣ ವಿಳಂಬವಾಗುತ್ತಿದೆ ಎಂದು ಹೇಳಿದರು. ವೇಯ್ ಬ್ರಿಜ್ ಸ್ಥಾಪನೆಗೆ ತಿಂಗಳ ಗಡುವು: ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳೆತ್ತಲು ಈಗಾಗಲೇ 25 ಟೆಂಡರ್‌ದಾರರನ್ನು ಗುರುತಿಸಲಾಗಿದ್ದು, ಕಾನೂನು ಪ್ರಕಾರ ಅವರೆಲ್ಲರೂ ಸ್ಟಾಕ್‌ಯಾರ್ಡ್‌ನಲ್ಲಿ ವೇಯ್ ಬ್ರಿಡ್ಜ್ ಸ್ಥಾಪಿಸಲು ಅ.15ರ ಗಡುವು ನೀಡಲಾಗಿತ್ತು. ಆದರೆ ಅದನ್ನು ಅಳವಡಿಸುವಲ್ಲಿ ಅವರು ವಿಫಲರಾಗಿದ್ದು, ಇನ್ನೂ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲಾಗಿದೆ. ವೇಯ್ ಬ್ರಿಡ್ಜ್ ಅಳವಡಿಸಿದ ಕೂಡಲೆ ಮರಳೆತ್ತಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ಜೂನ್‌ನಿಂದ ಅಕ್ಟೋಬರ್ 15ರವರೆಗೆ ನಾನ್ ಸಿಆರ್‌ಝಡ್‌ನಲ್ಲಿ ಮರಳೆತ್ತಲು ಅವಕಾಶವಿಲ್ಲ. ಹಾಗಾಗಿ ಅ.15ರೊಳಗೆ ವೇಯ್ ಬ್ರಿಜ್ ಸ್ಥಾಪನೆ ಮಾಡುವಂತೆ ಸೂಚಿಸಲಾಗಿತ್ತು. ಈಗ ವಿಸ್ತರಣೆ ಮಾಡಿದ ಗಡುವಿನೊಳಗೆ ಅಳವಡಿಸಿದರೆ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ನೀಗಲಿದೆ ಎಂದರು. ಅಗತ್ಯ ಬಿದ್ದರೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಹೆಚ್ಚಿನ ಬ್ಲಾಕ್‌ಗಳನ್ನು ಗುರುತಿಸಲು ಜಿಲ್ಲಾಡಳಿತ ಚಿಂತನೆ ನಡೆಸಲಿದೆ. ಆದರೆ, ಈಗಾಗಲೇ ಗುರುತಿಸಲಾದ 25 ಬ್ಲಾಕ್‌ಗಳಲ್ಲಿ ಟೆಂಡರ್‌ದಾರರು ಅನುಮತಿ ನೀಡಿದಷ್ಟು ಪ್ರಮಾಣದಲ್ಲಿ ಮರಳನ್ನು ತೆಗೆದಿಲ್ಲ. ಹೀಗಾಗಿ ಹೆಚ್ಚಿನ ಬ್ಲಾಕ್‌ಗಳ ಅಗತ್ಯ ಕಾಣುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. ಅಕ್ರಮಕ್ಕೆ ಕಡಿವಾಣ: ಅಕ್ರಮ ಮರಳು ದಂಧೆ ಕುರಿತು ಪ್ರತಿಕ್ರಿಯಿಸಿದ ಅವರು, ಅಕ್ರಮ ತಡೆಯಲು ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪಂಚಾಯತ್ ರಾಜ್ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ನಿರಂತರವಾಗಿ ಈ ತಂಡಗಳು ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳನ್ನು ಗುರುತಿಸಿ ದಾಳಿ ನಡೆಸುತ್ತಿವೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಇದ್ದರು. ಕೇಂದ್ರ ಅಧಿಸೂಚನೆ ಬರೋವರೆಗೆ ಸಿಆರ್‌ಝಡ್ ಮರಳು ತೆಗೆಯಲಾಗದು! ಈ ಬಾರಿ ಸಿಆರ್‌ಝಡ್ ಹೊಸ ಅಧಿಸೂಚನೆ (2019) ಕಾರ್ಯರೂಪಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳೆತ್ತಲು ಕೇಂದ್ರದಿಂದ ಅಂತಿಮ ಮಾರ್ಗಸೂಚಿ ಬರುವವರೆಗೂ ಮರಳು ತೆಗೆಯುವುದು ಅಸಾಧ್ಯವಾಗಲಿದೆ. ಹೊಸ ಅಧಿಸೂಚನೆಯಂತೆ ಹೊಸ ಮಾರ್ಗಸೂಚಿಗಳ ಆಧಾರದಲ್ಲಿಯೇ ಇನ್ಮುಂದೆ ಮುಂದೆ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆಯಲು ಅವಕಾಶ ನೀಡಬೇಕಾಗುತ್ತದೆ. ಆದರೆ ಇದುವರೆಗೆ ಅಂತಿಮ ಮಾರ್ಗಸೂಚಿ ಬಂದಿಲ್ಲ. ಅದು ಬಾರದೆ ರಾಜ್ಯ ಸಿಆರ್‌ಝಡ್ ಪ್ರಾಧಿಕಾರ ಮರಳೆತ್ತಲು ಅನುಮತಿ ನೀಡುವಂತಿಲ್ಲ. ಸಿಆರ್‌ಝಡ್ ಪ್ರದೇಶದಲ್ಲಿ ಮರಳು ತೆಗೆಯುವ ಕಾರ್ಯ ಸ್ಥಗಿತಗೊಂಡು ನಾಲ್ಕು ತಿಂಗಳು ಕಳೆದಿವೆ. ಮರಳಿನ ಅಭಾವದ ಈಗಾಗಲೇ ಈ ಬಗ್ಗೆ ನಿರ್ಮಾಣ ಕ್ಷೇತ್ರದ ಉದ್ಯಮಿಗಳು ಗಮನ ಸೆಳೆದಿದ್ದಾರೆ.