ಸಾರಾಂಶ
ಶಿರಹಟ್ಟಿ: ಶಿಕ್ಷಣದಿಂದ ವಂಚಿತರಾಗಿದ್ದ ಸಮುದಾಯದ ಜನರಲ್ಲಿ ಅಕ್ಷರದ ಕ್ರಾಂತಿಯ ಬೀಜ ಬಿತ್ತಿ ಅಕ್ಷರವೇ ಸರ್ವ ರೋಗಕ್ಕೂ ಮದ್ದು, ಮನುಜರೆಲ್ಲರೂ ಸಮಾನರೆಂಬ ವಾಣಿಯನ್ನು ವಿಶ್ವಕ್ಕೆ ಸಾರಿದ ಧೀರ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರು ಹಾಲೇಶ ಎಸ್. ಜಕ್ಕಲಿ ಹೇಳಿದರು.
ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ೧೯೪ನೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ದಣಿವರಿಯದ ಸತ್ಯಶೋಧಕಿ,ಸಾಮಾಜಿಕ ಹೋರಾಟಗಾರ್ತಿ,ದಿಟ್ಟ ವ್ಯಕ್ತಿತ್ವ ತೋರಿದ ಅಕ್ಷರದವ್ವ ಭಾರತೀಯ ಸಮಾಜದ ನಿಜವಾದ ಮಾತೆ ಎಂದು ಹೇಳಿದರು.
ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಶಿಕ್ಷಣದ ಅವಕಾಶವಿಲ್ಲದ ಸಂದರ್ಭದಲ್ಲಿ ಸಮಾಜದ ಎಲ್ಲ ನಿಂದನೆ ಸಹಿಸಿ ಮೆಟ್ಟಿನಿಂತ ಧೀರ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಅವರದು.ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಸತಿ- ಸಹಗಮನ ಪದ್ಧತಿ, ಕೇಶಮುಂಡನೆ ವಿರುದ್ಧ ಹೋರಾಡಿ ಜಾತಿ ವ್ಯವಸ್ಥೆ ಲಿಂಗ ಅಸಮಾನತೆ ಸಂಪ್ರದಾಯವಾದಿಗಳ ಕಟ್ಟುನಿಟ್ಟಾದ ವ್ಯವಸ್ಥೆಯಲ್ಲಿಯೂ ಸಹಿತ ಜ್ಞಾನದಿಂದ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬ ನಿಲುವನ್ನು ಹೊಂದಿದ್ದರು ಎಂದರು.ಸಾವಿತ್ರಿಬಾಯಿ ಫುಲೆ ಅಕ್ಷರ ದಾಸೋಹಿಯಾಗಿದ್ದರು.ಅಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಕರ್ತವ್ಯಕ್ಕೆ ಹೊರಗೆ ಹೋಗಬಾರದು ಎನ್ನುವ ಕಟ್ಟಪ್ಪಣೆ ಇದ್ದರೂ ಲೋಕಕ್ಕೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಮನಗಂಡು ಅಸಂಖ್ಯಾತ ಜನರಿಗೆ ಅಕ್ಷರ ಜ್ಞಾನ ನೀಡಿದ್ದರು. ಭಾರತೀಯ ಸಮಾಜದ ಸಂಪ್ರದಾಯಿಕ ಕಟ್ಟುಪಾಡು ಮೀರಿ ಬೆಳೆದ ಮಹಿಳೆ ಎಂದು ತಿಳಿಸಿದರು.
ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಪುಲೆ ಅವರು ಜ್ಯೋತಿರಾವ್ ಪುಲೆಯವರನ್ನು ಮದುವೆಯಾದರು. ಅಂದು ಬಾಲ್ಯ ವಿವಾಹ ರೂಢಿಯಲ್ಲಿದ್ದ ಆ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು.ಅವರ ಪತಿಯಾದ ಜ್ಯೋತಿರಾವ್ ಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ,ಪತಿಯೇ ಗುರುಗಳು. ೧೮೪೭ ರಲ್ಲಿ ಸಾವಿತ್ರಿಬಾಯಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ ೧೭ ವರ್ಷ ವಯಸ್ಸಾಗಿತ್ತು. ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು.ಆ ಕಾಲದಲ್ಲಿ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಅವರನ್ನು ಪಾಠಶಾಲೆಗೆ ಹೊರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲು ತೂರುತ್ತಿದ್ದರು. ಇದಕ್ಕೆಲ್ಲ ಅಂಜದೆ ಜ್ಞಾನ ನೀಡುತ್ತಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ನೇಮೇಶ ಯರಗುಪ್ಪಿ, ಹುಸೇನಬಿ ನದಾಫ ಹಾಗೂ ಶಾಲೆಯ ಮಕ್ಕಳು ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.