ಸಾರಾಂಶ
ಮೊದಲ ಬಾರಿಗೆ ಧರ್ಮಸ್ಥಳ ಪ್ರವೇಶದ್ವಾರದ ಒಳಭಾಗದಲ್ಲೂ ಉತ್ಖನನ ಕಾರ್ಯ ನಡೆಯಿತು. ದೂರುದಾರನ ಹೇಳಿಕೆಯಂತೆ ರತ್ನಗಿರಿ ಬಾಹುಬಲಿ ಬೆಟ್ಟದ 16 ಹಾಗೂ 16ಎ ಪಾಯಿಂಟ್‌ಗಳಲ್ಲಿ ಶೋಧ ಕಾರ್ಯ ನಡೆಯಿತು. ಆದರೆ, ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ.
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅಸಹಜವಾಗಿ ಮೃತಪಟ್ಟ ನೂರಾರು ಶವಗಳನ್ನು ತಾನು ಹೂತು ಹಾಕಿರುವುದಾಗಿ ಅನಾಮಿಕ ಸಾಕ್ಷಿದಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಧರ್ಮಸ್ಥಳ ಪ್ರವೇಶದ್ವಾರದ ಒಳಭಾಗದಲ್ಲೂ ಉತ್ಖನನ ಕಾರ್ಯ ನಡೆಯಿತು. ದೂರುದಾರನ ಹೇಳಿಕೆಯಂತೆ ರತ್ನಗಿರಿ ಬಾಹುಬಲಿ ಬೆಟ್ಟದ 16 ಹಾಗೂ 16ಎ ಪಾಯಿಂಟ್‌ಗಳಲ್ಲಿ ಶೋಧ ಕಾರ್ಯ ನಡೆಯಿತು. ಆದರೆ, ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ.
ಜು.28ರಂದು ಸ್ಥಳ ಮಹಜರು ಪ್ರಕ್ರಿಯೆ ಬಳಿಕ ಸ್ಥಳ ಸಂಖ್ಯೆ 13ನ್ನು ಹೊರತುಪಡಿಸಿ, ಸ್ಥಳ ಸಂಖ್ಯೆ 15ರ ತನಕ ಶೋಧ ಕಾರ್ಯ ನಡೆದಿತ್ತು. ಉತ್ಖನನ ಕಾರ್ಯಾಚರಣೆಯ 11ನೇ ದಿನವಾದ ಶನಿವಾರ ಅನಾಮಿಕ ದೂರುದಾರನ ಹೇಳಿಕೆಯಂತೆ ಧರ್ಮಸ್ಥಳ ಪ್ರವೇಶದ್ವಾರದ ಒಳಭಾಗದಲ್ಲಿರುವ ಬಾಹುಬಲಿ ಬೆಟ್ಟದ ರಸ್ತೆಯಿಂದ 10 ರಿಂದ 15 ಅಡಿ ದೂರದಲ್ಲಿರುವ ಅರಣ್ಯ ಸ್ಥಳದಲ್ಲಿ ಶೋಧ ಕಾರ್ಯ ನಡೆಯಿತು. ಪಾಯಿಂಟ್ 16ರಲ್ಲಿ ಮಧ್ಯಾಹ್ನ 12.45ರಿಂದ ಆರಂಭವಾದ ಉತ್ಖನನ ಕಾರ್ಯ, ಸಂಜೆ 4.45ರ ತನಕ ನಡೆಯಿತು. ಮೊದಲಿಗೆ ಹಿಟಾಚಿ ಬಳಸಿ ಸ್ಥಳದ ಮೇಲ್ಭಾಗವನ್ನು ಅಗೆಯಲಾಯಿತು. ಬಳಿಕ, ಪೌರಕಾರ್ಮಿಕರು ಅಗೆಯುವ ಕೆಲಸ ಮುಂದುವರಿಸಿದರು. ಸುಮಾರು 10 ಅಡಿ ಆಳ ಗುಂಡಿ ತೆಗೆದರೂ ಯಾವುದೇ ಕುರುಹು ಪತ್ತೆಯಾಗಲಿಲ್ಲ.
ಬಳಿಕ, ಇಲ್ಲಿಂದ ಸುಮಾರು 15 ಅಡಿ ದೂರದಲ್ಲಿ ಪಾಯಿಂಟ್ 16ಎ ಎಂದು ಗುರುತಿಸಿ, ಸುಮಾರು 10 ಅಡಿಯಷ್ಟು ಉತ್ಖನನ ಕಾರ್ಯ ನಡೆಸಲಾಯಿತು. ಸಂಜೆ 7ರ ಸುಮಾರಿಗೆ ಅಗೆತ ಕಾರ್ಯ ಮುಗಿದಿದ್ದು, ಗುಂಡಿ ಮುಚ್ಚಲಾಗಿದೆ. ಆದರೆ, ಇವೆರಡರಲ್ಲೂ ಯಾವುದೇ ಕಳೆಬರಹ ಪತ್ತೆಯಾಗಿಲ್ಲ.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮಧ್ಯೆ, ಭಾನುವಾರ ರಜಾ ದಿನವಾಗಿದ್ದು, ಶೋಧ ಪ್ರಕ್ರಿಯೆಗೆ ವಿರಾಮ ನೀಡಲಾಗಿದೆ ಎಂದು ತಿಳಿದು ಬಂದಿದೆ.