ಪ್ರತ್ಯೇಕ ರಾಜ್ಯ: ಕತ್ತಿ ನಂತರ ಕಾಗೆ ಕೂಗು?

| Published : Sep 30 2025, 12:00 AM IST

ಸಾರಾಂಶ

ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್‌ ಮುಖಂಡ, ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ, ಮಾಜಿ ಸಚಿವ ದಿ.ಉಮೇಶ್ ಕತ್ತಿ ಅವರು ಆಗಾಗ ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ’ ಆಗಬೇಕು ಎಂದು ಹೇಳುತ್ತಲೇ ಇದ್ದರು. ಹೀಗೆ ಹೇಳಿಕೆ ನೀಡಿದಾಗಲೆಲ್ಲ ಪರ-ವಿರೋಧ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಅದೇ ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್‌ ಮುಖಂಡ, ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂದು ಏರು ದನಿಯಲ್ಲಿ ಪ್ರಶ್ನಿಸಿದ್ದಾರೆ.

ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ರಾಜು ಕಾಗೆ, ಸೋಮವಾರ ಸುದ್ದಿಗೋಷ್ಠಿಯಲ್ಲಿ ‘ಉತ್ತರ ಕರ್ನಾಟಕ ಹಿಂದಿನಿಂದಲೂ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಭಾಗಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕದ ಪ್ರತಿ ಶಾಸಕರಿಗೂ ₹500 ಕೋಟಿ ಅನುದಾನ ನೀಡಲಾಗುತ್ತಿದೆ. ಅದರಂತೆ ಕಿತ್ತೂರು ಕರ್ನಾಟಕಕ್ಕೂ ವಿಶೇಷ ಅನುದಾನ ನೀಡಲಿ ಅಥವಾ ಪ್ರತ್ಯೇಕ ರಾಜ್ಯ ಮಾಡಲಿ’ ಎಂದು ದೊಡ್ಡ ದನಿಯಲ್ಲಿ ಆಗ್ರಹಿಸಿದರು.

ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಸಕ್ತಿ ಮತ್ತು ಒಗ್ಗಟ್ಟಿನ ಕೊರತೆಯಿಂದ ಉತ್ತರ ಕರ್ನಾಟಕ ಸದಾ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಹೀಗಾಗಿ, ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿದೆ, ನಿರ್ಲಕ್ಷ್ಯಕ್ಕೆ ಒಳಗಾದಾಗ ಪ್ರತ್ಯೇಕ ರಾಜ್ಯ ಕೇಳುವುದು ಸಹಜ ಎಂದರು.

ಸಿಎಂ ಸ್ಥಾನ ನಿಭಾಯಿಸುವೆ:

ಸಂಪುಟ ಪುನಾರಚನೆಯಲ್ಲಿ ನೀವು ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನವೇಕೆ ಸಿಎಂ ಸ್ಥಾನಕ್ಕೂ ನಾನು ಆಕಾಂಕ್ಷಿ. ಆದರೆ, ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಯಾವುದೇ ಖಾತೆ ನೀಡಿದರೂ ಅದನ್ನು ಈಗಿನ ಸಚಿವರಿಗಿಂತ ಚೆನ್ನಾಗಿ ನಿಭಾಯಿಸಬಲ್ಲೆ. ಮೊದಲಿನ ಅವಧಿಯಲ್ಲಿ ಹಲವರಿಗೆ ಅವಕಾಶ ನೀಡಲಾಗಿದೆ. ಪುನಾರಚನೆ ವೇಳೆ ನಮ್ಮಂಥ ಹಿರಿಯರಿಗೂ ಅವಕಾಶ ನೀಡಲಿ ಎಂದು ಆಗ್ರಹಿಸಿದರು.

ಉಳ್ಳವರಿಗೆ ಸೌಲಭ್ಯ:

ನನ್ನ ಸಂಬಂಧಿಕರಿಗೂ ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಅನೇಕ ಸೌಲಭ್ಯ ಸಿಗುತ್ತಿವೆ. ಇದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಅನೇಕ ಶ್ರೀಮಂತರು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇಂಥವರನ್ನು ಗುರುತಿಸಿ ಸೌಲಭ್ಯ ಹಿಂಪಡೆಯಲಿ, ಅನೇಕ ಮಾಸಾಶನಗಳಿಗೆ ಶೇ.70ರಷ್ಚು ಅನರ್ಹ ಫಲಾನುಭವಿಗಳಾಗಿದ್ದಾರೆ. ಸೌಲಭ್ಯಗಳು ಉಳ್ಳವರಿಗೆ ಸಿಗಬಾರದು. ಬಡವರಿಗೆ ಅವು ದೊರೆಯಬೇಕು. ಇದನ್ನು ಹೇಳಿದರೆ ಅದು ಹೇಗೆ ಸರ್ಕಾರದ ವಿರುದ್ಧ ಮಾತನಾಡಿದಂತಾಗುತ್ತದೆ? ಈ ರೀತಿ ಅನುದಾನ ಸೋರಿಕೆ ತಡೆದು ಅದನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಲಿ. ಆ ಕುರಿತು ಸರ್ಕಾರ ಗಮನಹರಿಸಲಿ ಎಂದು ಸಲಹೆ ನೀಡಿದರು.

ಬಾಕ್ಸ್...

ಶೀಘ್ರ ಚಿಕ್ಕೋಡಿ ಜಿಲ್ಲೆ?

ಬೆಳಗಾವಿ ಜಿಲ್ಲೆ ವಿಂಗಡನೆಗೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಆಗ್ರಹಿಸುತ್ತಲೇ ಬರಲಾಗುತ್ತಿದೆ. ಇದೀಗ ಸವದತ್ತಿ, ರಾಮದುರ್ಗ, ಬೈಲಹೊಂಗಲ ಸೇರಿ ಬೈಲಹೊಂಗಲ ಜಿಲ್ಲೆ ರಚನೆ ಕೂಗು ಕೇಳಿಬರುತ್ತಿದೆ. ಅಲ್ಲಿನ ಜನ ಸರ್ಕಾರಕ್ಕೆ ಒತ್ತಡ ಹೇರುತ್ತಲೇ ಇದ್ದಾರೆ. ಸರ್ಕಾರ ಮುಂದಿನ ಕೆಲ ದಿನಗಳಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.