ರಣ ಬಿಸಿಲಿನ ತಾಪಕ್ಕೆ ತತ್ತರಿಸಿದ ರೇಷ್ಮೆ ಸಾಕಣೆ

| Published : May 05 2024, 02:12 AM IST / Updated: May 05 2024, 12:34 PM IST

ಸಾರಾಂಶ

ರಾಮನಗರ: ಬಿಸಿಲಿನ ಪ್ರಖರತೆ ದಿನೇದಿನೇ ಹೆಚ್ಚುತ್ತಿರುವುದರಿಂದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ರೇಷ್ಮೆ ಕೃಷಿ ಸಂಕಷ್ಟಕ್ಕೆ ಸಿಲುಕಿದೆ. ಸತತ ಬರದಿಂದ ತತ್ತರಿಸಿರುವ ಜಿಲ್ಲೆಯ ರೈತರ ಪಾಲಿಗೆ ರೇಷ್ಮೆ ಕೃಷಿ ಕಲ್ಪವೃಕ್ಷವಾಗಿದೆ. ಆದರೆ, ರಣ ಬಿಸಿಲಿನಿಂದ ರೇಷ್ಮೆ ಹುಳು ಸಾಕಣೆಗೆ ಪೆಟ್ಟು ಬಿದ್ದಿದೆ.

ರಾಮನಗರ: ಬಿಸಿಲಿನ ಪ್ರಖರತೆ ದಿನೇದಿನೇ ಹೆಚ್ಚುತ್ತಿರುವುದರಿಂದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ರೇಷ್ಮೆ ಕೃಷಿ ಸಂಕಷ್ಟಕ್ಕೆ ಸಿಲುಕಿದೆ.

ಸತತ ಬರದಿಂದ ತತ್ತರಿಸಿರುವ ಜಿಲ್ಲೆಯ ರೈತರ ಪಾಲಿಗೆ ರೇಷ್ಮೆ ಕೃಷಿ ಕಲ್ಪವೃಕ್ಷವಾಗಿದೆ. ಆದರೆ, ರಣ ಬಿಸಿಲಿನಿಂದ ರೇಷ್ಮೆ ಹುಳು ಸಾಕಣೆಗೆ ಪೆಟ್ಟು ಬಿದ್ದಿದೆ.

ಜಿಲ್ಲೆಯಲ್ಲಿ 40 ರಿಂದ 42 ಡಿಗ್ರಿ ತಾಪಮಾನದಲ್ಲಿ ರೇಷ್ಮೆ ಹುಳು ರಕ್ಷಣೆ ಸವಾಲಿನ ಕೆಲಸವಾಗಿದ್ದು, ಹುಳು ಸಾಕಣೆಗೆ ತಂಪಾದ ವಾತಾವರಣ ಕಲ್ಪಿಸಲು ಸಾಕಣೆದಾರರು ಪರದಾಡುತ್ತಿದ್ದಾರೆ. ಕೆಲವರು ಸದ್ಯಕ್ಕೆ ಇದರ ಸಹವಾಸವೇ ಬೇಡವೆಂದು ರೇಷ್ಮೆ ಕೃಷಿಯಿಂದ ದೂರ ಉಳಿಯುತ್ತಿದ್ದಾರೆ.

ಉತ್ತಮ ಬೆಲೆ ಇದೆ, ರೇಷ್ಮೆಗೂಡೇ ಇಲ್ಲ:

ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಗೆ ಪ್ರತಿನಿತ್ಯ 40ರಿಂದ 50 ಟನ್ ಗಳಷ್ಟು ರೇಷ್ಮೆ ಗೂಡು ಮಾರಾಟವಾಗುತ್ತಿತ್ತು. ಕಳೆದ ಒಂದೂವರೆ ತಿಂಗಳಿಂದ ಕೇವಲ 15 ರಿಂದ 20 ಟನ್ ರೇಷ್ಮೆಗೂಡು ಮಾತ್ರ ಮಾರುಕಟ್ಟೆಗೆ ಬರುತ್ತಿದೆ.

ಮಾರ್ಚ್ ತಿಂಗಳ ಮೊದಲ ವಾರದಲ್ಲಿ 45 ಟನ್ ಗೂಡು ಆವಕ ಇತ್ತು. ಆದಾದ ಬಳಿಕ 15 ರಿಂದ 20 ಟನ್ ಗೂಡಿಗೆ ಕುಸಿದಿದೆ. ಮಿತ್ರತಳಿ ರೇಷ್ಮೆ ಗೂಡಿನ ಪ್ರತಿ ಕೆ.ಜಿಗೆ 312 ರು.ನಿಂದ 499 ರು.ಇದ್ದರೆ, ಬೈವೋಲ್ಟಿನ್ 335 ರಿಂದ 618 ರು.ವರೆಗೆ ಇದೆ. ರೇಷ್ಮೆಗೂಡಿಗೆ ಉತ್ತಮ ಬೆಲೆ ಇದೆ, ಆದರೆ, ರೇಷ್ಮೆ ಗೂಡೇ ಇಲ್ಲದಂತಾಗಿದೆ.

ರೇಷ್ಮೆಹುಳು ಸಾಕಾಣಿಕೆಗೆ ಉಷ್ಣಾಂಶ 25 ಡಿಗ್ರಿಯಷ್ಟು ಇರಬೇಕು. ತೇವಾಂಶ 60 ಡಿಗ್ರಿಯಷ್ಟಿರಬೇಕು. ಆದರೆ, ದಿನದಿಂದ ದಿನಕ್ಕೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಲೇ ಇದೆ. ಹುಳು ಸಾಕಣೆ ಮನೆಗಳ ಸುತ್ತಲೂ ನೆಟ್ ಕಟ್ಟಿದರೂ ಬಿಸಿಗಾಳಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೋಣಿಚೀಲಗಳನ್ನು ಕಟ್ಟಿ, ಅರ್ಧಗಂಟೆಗೊಮ್ಮೆ ನೀರು ಹಾಕುತ್ತಿದ್ದಾರೆ.

ಅಲ್ಲದೆ, ತುಂತುರು ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಬೆಳಗ್ಗೆ ಕಟಾವು ಮಾಡಿಕೊಂಡು ಬಂದಿರುವ ಹಿಪ್ಪುನೇರಳೆ ಸೊಪ್ಪು ಸಂಜೆಯೊಳಗೆ ಎಲೆಗಳು ಮುದುಡಿಕೊಳ್ಳುತ್ತಿವೆ. ಬಿಸಿಲು ಹೆಚ್ಚಾಗಿರುವ ಕಾರಣ ರೇಷ್ಮೆ ಸಾಕಾಣಿಕೆ ಕಷ್ಟವಾಗುತ್ತಿದೆ ಎಂದು ಸಾಕಣಿಕೆದಾರರು ಅಳಲು ತೋಡಿಕೊಂಡಿದ್ದಾರೆ.

100 ಮೊಟ್ಟೆ ರೇಷ್ಮೆಹುಳುವಿಗೆ (2 ಜ್ವರವೆದ್ದಿರುವ ಹುಳು) 6 ಸಾವಿರ ಕೊಡಬೇಕು. 100 ಮೊಟ್ಟೆ ಹುಳು ಹಣ್ಣಾಗುವಷ್ಟರಲ್ಲಿ ಔಷಧಿಗಳು, ಕೂಲಿ ಎಲ್ಲಾ ಸೇರಿ ಸರಾಸರಿ 30 ರಿಂದ 35 ಸಾವಿರ ಖರ್ಚಾಗುತ್ತದೆ.

100 ಮೊಟ್ಟೆಗೆ ಉತ್ತಮ ಇಳುವರಿ ಸಿಗಬೇಕಾದರೆ 100 ಕೆ.ಜಿ. ಗೂಡ ಬರಬೇಕು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೂಡು 400 ರಿಂದ 450 ರುಪಾಯಿಗೆ ಹರಾಜಾಗುತ್ತಿದೆ. ತಿಂಗಳು ಪೂರ್ತಿ ಮನೆಯವರೆಲ್ಲರೂ ದುಡಿಯಬೇಕು. ಅದರಲ್ಲಿ ತಿಂಗಳಿಗೆ ಖರ್ಚು ಕಳೆದು ಸಿಗುವುದು ಕೇವಲ 5 ಸಾವಿರ ಮಾತ್ರ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇದರ ಬದಲು ಬೇರೆ ಉದ್ಯೋಗ ಹುಡುಕುವ ಚಿಂತನೆಯಲ್ಲಿ ರೇಷ್ಮೆ ಕೃಷಿಕರು.

ರೇಷ್ಮೆಗೂಡು ಬೆಳೆದು ಚಂದ್ರಿಕೆಯಿಂದ ಬಿಡಿಸಿದ ಕೂಡಲೇ ಮಾರುಕಟ್ಟೆಗೆ ಸಾಗಾಣಿಕೆ ಮಾಡಬೇಕು. ಇಲ್ಲವಾದರೆ, ಬಿಸಿಲಿನ ತಾಪಕ್ಕೆ ಗೂಡಿನ ತೇವಾಂಶವೆಲ್ಲಾ ಹೀರಿಕೊಂಡು, ತೂಕ ಕಡಿಮೆ ಆಗುತ್ತದೆ. 100 ಕೆ.ಜಿ.ಬರಬೇಕಾಗಿರುವ ಗೂಡು 80 ಕೆ.ಜಿಗೆ ಇಳಿಕೆಯಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಸಾಕಣೆಯಲ್ಲಿ ನಿಲ್ಲಿಸುತ್ತಿದ್ದೇವೆ ಎನ್ನುತ್ತಾರೆ ರೈತರು. 

ವಾತಾವರಣದಲ್ಲಿ ಏರುಪೇರಾದರೆ ರೇಷ್ಮೆಗೆ ಪೆಟ್ಟು

ವಾತಾವರಣದಲ್ಲಿ ಏರುಪೇರಾದಾಗಲೆಲ್ಲಾ ಒಂದೊಂದು ರೋಗಕ್ಕೆ ರೇಷ್ಮೆ ಬೆಳೆ ತುತ್ತಾಗುವುದು ಸಾಮಾನ್ಯ. ಗಾಳಿ ಹೆಚ್ಚಾದರೆ ಸಪ್ಪೆರೋಗ ಆವರಿಸಲಿದೆ. ಈ ರೋಗ ಆವರಿಸಿದರೆ ಹಿಪ್ಪುನೇರಳೆಯಲ್ಲಿ ತೇವಾಂಶ ಕಡಿಮೆಯಾಗಿ, ಹುಳ ಗೂಡು ಕಟ್ಟುವುದಿಲ್ಲ. ಇನ್ನು ಬಿಸಿಲು ಹೆಚ್ಚಾದರೆ ರೋಗ ಬರಲಿದ್ದು, ಈ ರೋಗ ಬಂದರೆ ಹುಳ ಸಾಯುತ್ತದೆ. ಹೆಚ್ಚು ಮಳೆಯಾದರೆ, ಸುಣ್ಣಕಟ್ಟು ರೋಗ ಬರಲಿದ್ದು, ತೇವ, ಚಳಿ ಹೆಚ್ಚಾಗಿ ರೇಷ್ಮೆ ಹುಳ ಸಾಯುತ್ತವೆ. ಹಾಗಾಗಿ ಈ ಕೃಷಿಯಲ್ಲಿ ತೊಡಗಿರುವವರು ಹೆಚ್ಚು ಗಮನ ಹರಿಸಬೇಕಾಗಲಿದೆ. ಬಿಸಿಲಿನ ತಾಪ ಹೆಚ್ಚಾಗುವ ಸಂದರ್ಭದಲ್ಲಿ ಹುಳ ಬೆಳವಣಿಗೆಯಲ್ಲಿ ಏರುಪೇರಾಗಿ, ರೋಗಕ್ಕೆ ತುತ್ತಾಗಲಿದೆ. ಇದರಿಂದ ರೇಷ್ಮೆ ಕೃಷಿಕರು ಕೈ ಸುಟ್ಟುಕೊಂಡಿರುವ ನಿದರ್ಶನವೂ ಇದೆ.ಬಾಕ್ಸ್ ..............

ರಾಮನಗರ ಏಷ್ಯಾದ ಅತಿದೊಡ್ಡ ರೇಷ್ಮೆಮಾರುಕಟ್ಟೆ

ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆ ಏಷ್ಯಾದ ಅತಿದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ರಾಮನಗರ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕ, ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಭಾಗದ ರೈತರು ರೇಷ್ಮೆಗೂಡನ್ನು ಮಾರಾಟ ಮಾಡಲು ತರುತ್ತಾರೆ. ಪ್ರತಿದಿನ 2ರಿಂದ 3 ಸಾವಿರ ಮಂದಿ ರೈತರು 40 ರಿಂದ 50 ಟನ್‌ಗಳಷ್ಟು ರೇಷ್ಮೆ ಗೂಡು ತಂದು ಮಾರಾಟ ಮಾಡುತ್ತಿದ್ದರು. ಇನ್ನು ರಾಮನಗರ ಮಾರುಕಟ್ಟೆ ಮಾತ್ರವಲ್ಲದೆ ಚನ್ನಪಟ್ಟಣ, ಕನಕಪುರ ಮಾರುಕಟ್ಟೆಗಳಲ್ಲಿ ರೇಷ್ಮೆಗೂಡಿನ ವಹಿವಾಟು ನಡೆಯುತ್ತಿತ್ತು. ಎಲ್ಲ ಮಾರುಕಟ್ಟೆಗಳಲ್ಲಿ ರೇಷ್ಮೆಗೂಡಿನ ಆವಕ ಕುಸಿದಿದೆ. 

ರೇಷ್ಮೆ ಹುಳುಗಳಿಗೆ ಸಪ್ಪೆರೋಗ ಬಾಧೆ

ಬಿಸಿಲಿನ ಪ್ರಖರತೆಗೆ ಸೊಪ್ಪು ಬಾಡುತ್ತಿದೆ. ಗುಣಮಟ್ಟವಿಲ್ಲದ ಸೊಪ್ಪು ತಿನ್ನುವ ರೇಷ್ಮೆ ಹುಳುಗಳಿಗೆ ಸಪ್ಪೆರೋಗ ಬಾಧಿಸುತ್ತದೆ ಎಂಬ ಕಾರಣಕ್ಕೆ ಸೊಪ್ಪು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಸಾಮಾನ್ಯವಾಗಿ ರೇಷ್ಮೆ ಕೃಷಿಗೆ 25ರಿಂದ 29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. ಈ ಬೇಸಿಗೆಯಲ್ಲಿ ಉಷ್ಣಾಂಶ 40 ರಿಂದ 42 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದು ರೇಷ್ಮೆ ಕೃಷಿಯ ಹಿನ್ನಡೆಗೆ ಕಾರಣವಾಗಿದೆ. ಗೂಡಿನ ಗುಣಮಟ್ಟ ಹಾಗೂ ಗಾತ್ರದ ಮೇಲೂ ಪರಿಣಾಮ ಬೀರಿದೆ.

ಕಾರ್ಮಿಕರ ಕೊರತೆ ರೋಗಬಾಧೆ, ಗುಣಮಟ್ಟವಿಲ್ಲದ ಗೂಡು, ನೀರಿನ ಸಮಸ್ಯೆಯಿಂದ ಬೇಸತ್ತಿರುವ ಬೆಳೆಗಾರರು ಮಳೆಗಾಲದ ತನಕ ರೇಷ್ಮೆ ಕೃಷಿಯ ಸಹವಾಸವೇ ಬೇಡ ಎಂದು ಕೈಚೆಲ್ಲುತ್ತಿದ್ದಾರೆ. ಹಲವರು ಸೊಪ್ಪು ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ.ಕೋಟ್ .......

ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ರೇಷ್ಮೆಗೂಡಿನ ಆವಕ ಕಡಿಮೆಯಾಗಿದೆ. ಪ್ರತಿನಿತ್ಯ 15ರಿಂದ 20 ಟನ್ ರೇಷ್ಮೆಗೂಡು ಮಾತ್ರ ಮಾರುಕಟ್ಟೆಗೆ ಬರುತ್ತಿದೆ.

-ಮಲ್ಲಿಕಾರ್ಜುನ ಸ್ವಾಮಿ, ಉಪನಿರ್ದೇಶಕರು, ರೇಷ್ಮೆಗೂಡು ಮಾರುಕಟ್ಟೆ

 ರಣ ಬಿಸಿಲಿನಿಂದಾಗಿ ರೇಷ್ಮೆ ಕೃಷಿಗೆ ಹೊಡೆತ ಬಿದ್ದಿದೆ. ರೇಷ್ಮೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ಸಾಗಿಸುವುದೇ ದುಸ್ತರವಾಗಿದೆ. ಬೆಳೆಗಾರರಿಗೆ 25 ಸಾವಿರದಿಂದ 1.50 ಲಕ್ಷ ರುಪಾಯಿವರೆಗೆ ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಕೂಡಲೇ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸಬೇಕು.

-ರವಿ, ಪ್ರಧಾನ ಕಾರ್ಯದರ್ಶಿ, ರೇಷ್ಮೆಬೆಳೆಗಾರರ ಹಿತರಕ್ಷಣಾ ಸಮಿತಿ, ರಾಮನಗರ