ಸಾರಾಂಶ
ಭರಮಣ್ಣನಾಯಕನ ಕೆರೆಗೆ ಮಲಿನ ನೀರು ಸೇರದಂತೆ ಮುನ್ನೆಚ್ಚರಿಕೆ | ಅದಕ್ಕಾಗಿ ಕೋಟಿ ರು. ಯೋಜನೆಕನ್ನಡಪ್ರಭ ವಾರ್ತೆ ಸಿರಿಗೆರೆ
ಜಿಲ್ಲೆಯ ಹೋಬಳಿ ಕೇಂದ್ರವಾದ ಭರಮಸಾಗರದಲ್ಲಿ ಭರಮಣ್ಣನಾಯಕರು ಕಟ್ಟಿಸಿದ ಕೆರೆಗೆ ಮಲಿನ ನೀರು ಸೇರದಂತೆ ತಡೆಯಲು ಕೆರೆಯ ತಟದಲ್ಲೊಂದು ನೀರು ಸಂಸ್ಕರಣ ಘಟಕ ಸ್ಥಾಪಿಸಲು ಯೋಜನೆಯೊಂದು ಸಿದ್ಧಗೊಳ್ಳುತ್ತಿದೆ.ಗ್ರಾಮದ ಚರಂಡಿಗಳ ಮೂಲಕ ಹರಿದು ಬರುವ ಅಶುದ್ಧ ನೀರು ಕೆರೆಗಳನ್ನು ಸೇರಿ ಅಲ್ಲಿನ ನೀರು ಮಲಿನಯುಕ್ತವಾಗುವ ಕ್ರಮವನ್ನು ತಡೆಗಟ್ಟಲು ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ತಾಲ್ಲೂಕಿನ ಭರಮಸಾಗರ, ತುರುವನೂರು ಮತ್ತು ಹೊಸದುರ್ಗ ತಾಲ್ಲೂಕಿನ ಬೆಲಗೂರು ಕೆರೆಗಳು ಈ ಯೋಜನೆಯಲ್ಲಿ ಸೇರಿವೆ. ಅದಕ್ಕಾಗಿ ೭ ಕೋಟಿ ರೂ.ಗಳ ವಿಸ್ತ್ರತ ಯೋಜನೆಯನ್ನು ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯ್ತಿಗಳು ಸಿದ್ಧಗೊಳಿಸುತ್ತಿರುವುದು ಈ ಕೆರೆಗಳ ಒಡನಾಟ ಇಟ್ಟುಕೊಂಡಿರುವ ಜನರಿಗೆ ಸಂತೋಷ ತಂದಿದೆ.
ಈ ಯೋಜನೆಯ ವಿಘ್ನಗಳು ನಿವಾರಣೆಯಾಗಿ ಇದು ರೂಪುಗೊಂಡರೆ ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆ ಶುದ್ಧ ನೀರಿನ ಜಲಪಾತ್ರೆಯಾಗಿ ಕಂಗೊಳಿಸಲಿದೆ.ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿಯ ಯೋಜನೆಯ ಫಲವಾಗಿ ಭರಮಸಾಗರದ ಕೆರೆಗೆ ೫೬ ಕಿ.ಮೀ. ದೂರದ ಹರಿಹರ ಸಮೀಪದ ದೀಟೂರು ಬಳಿಯ ತುಂಗಾಭದ್ರೆ ನದಿಯಿಂದ ಕಾಲುವೆ ಮೂಲಕ ನೀರು ಬರುತ್ತಿದೆ. ಹೀಗೆ ಭರಮಸಾಗರ ಕೆರೆಗೆ ಬಂದ ನೀರು ಅಲ್ಲಿಂದ ೪೨ ಕೆರೆಗಳಿಗೆ ಹರಿಯುತ್ತದೆ. ಇದರಿಂದ ಭರಮಸಾಗರ ಸುತ್ತಲಿನ ಪ್ರದೇಶಗಳ ಅಂತರಜಲ ಮಟ್ಟ ಸುಧಾರಿಸಿದೆ, ಜೊತೆಗೆ ರೈತ ಸಮುದಾಯದ ರೈತಾಪಿ ಚಟುವಟಿಕೆಗಳು ಇಮ್ಮಡಿಕೊಂಡಿವೆ. ಈ ತಟದಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಭರಮಸಾಗರದ ಭರಮಣ್ಣನಾಯಕನ ಕೆರೆಗೆ ನೀರು ಬಂದು ಕೆರೆ ತುಂಬುತ್ತಿದ್ದಂತೆ ಜನರು ಇಡೀ ಊರಿನ ತ್ಯಾಜ್ಯವನ್ನು ತಂದು ನೀರಿಗೆ ಸುರಿಯುವ ಕೆಲಸವನ್ನೂ ಮಾಡಿದ್ದು ಇದೆ. ಕೆರೆಯ ಅಂಚನ್ನು ಬಳಸಿಕೊಂಡು ನೂರಾರು ಅಡಿಕೆ ಬೆಳೆಗಾರರು ಮತ್ತು ಖೇಣಿದಾರರು ಹಸಿ ಅಡಿಕೆಯ ತ್ಯಾಜ್ಯವನ್ನು ನೀರಿಗೆ ಸೇರಿಸಿ ನೀರನ್ನು ಮಲಿನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ತರಳಬಾಳು ಶ್ರೀಗಳು ಘಟನಾಸ್ಥಳಕ್ಕೆ ಭೇಟಿಕೊಟ್ಟು ಜನರನ್ನು ಮನವೊಲಿಸಿದ ಪರಿಣಾಮ ಅಡಿಕೆ ತ್ಯಾಜ್ಯವನ್ನು ನೀರಿಗೆ ಸುರಿಯುವ ಕೆಲಸ ನಿಂತಿದೆ.ಆದರೆ ಹೋಬಳಿ ಕೇಂದ್ರವಾದ ಭರಮಸಾಗರದ ಹಲವು ಬಡಾವಣೆಗಳಿಂದ ಹರಿದು ಬರುವ ಕೊಚ್ಚೆ ನೀರು ಎಗ್ಗಿಲ್ಲದೆ ಕೆರೆಯನ್ನು ಸೇರುತ್ತಿದೆ. ತರಳಬಾಳು ಐಸಿಆರ್ ಕೃಷಿ ವಿಜ್ಞಾನ ಕೇಂದ್ರದ ತಜ್ಞ ವಿಜ್ಞಾನಿಗಳು ಕೆರೆಗೆ ಭೇಟಿ ನೀಡಿ ಕೆರೆಯ ನೀರು ಅಶುದ್ಧಗೊಳ್ಳುತ್ತಿರುವುದರ ವರದಿಯನ್ನು ಜನರ ಮುಂದಿಟ್ಟಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಕೆರೆಯಲ್ಲಿನ ಜೀವರಾಶಿಗಳಿಗೂ ಕುತ್ತುಬರುತ್ತದೆ ಜೊತೆಗೆ ಕೆರೆಯು ಮಾಲಿನ್ಯದ ಹೊಂಡವಾಗುತ್ತದೆ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಮನದಟ್ಟು ಮಾಡಿದ್ದಾರೆ.
ಇದೆಲ್ಲದರ ಪ್ರತಿಫಲವೆಂಬಂತೆ ಇದೀಗ ನವದೆಹಲಿಯ ಗ್ರೀನ್ ಗ್ರಾಸ್ ಪ್ರೊ ಸಂಸ್ಥೆಯು ಈ ಕೆರೆಯ ಒಡಲೊಳಗೇ ಒಂದು ಮಲಿನ ನೀರು ಸಂಸ್ಕರಿಸುವ ಘಟಕ ಸ್ಥಾಪನೆಗೆ ಮುಂದಾಗಿದೆ. ಕೆರೆಯ ಸಮೀಪ ಹರಿಯುವ ಎಲ್ಲಾ ಚರಂಡಿಗಳ ನೀರನ್ನು ಒಂದೆಡೆ ಸೇರಿಸಿ ಅದನ್ನು ಸಂಸ್ಕರಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತದೆ. ಸಂಸ್ಕರಿಸಿ ಯೋಗ್ಯವಾದ ನೀರನ್ನು ಕೆರೆಗೆ ಕಳಿಸುವುದು ಮತ್ತು ಆಶುದ್ಧ ನೀರು ಕೆರೆಗೆ ಹೋಗದಂತೆ ಮಾಡುವುದು ಇವರ ಉದ್ದೇಶವಾಗಿದೆ.ಕೆರೆಯ ಅಂಗಳದಲ್ಲಿ 100 * 100 ಅಡಿ ನಿವೇಶನದಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕಿದೆ. ಅದಕ್ಕಾಗಿ ಸೂಕ್ತ ಜಾಗ ತುರ್ತಾಗಿ ಈ ಸಂಸ್ಥೆಗೆ ಬೇಕಾಗಿದೆ. ಅದಕ್ಕಾಗಿ ಸಂಸ್ಥೆಯ ಅಜಯ್ ಕುಮಾರ್ ಮತ್ತು ಸಂಗಡಿಗರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣಾ ಕೆಲಸವನ್ನು ಪೂರೈಸಿದ್ದಾರೆ. ಈ ಸಂಸ್ಥೆಗೆ ನಿವೇಶನ ದೊರಕಿಸಿಕೊಡಲು ಗ್ರಾಮ ಪಂಚಾಯ್ತಿ ಇಲ್ಲವೇ ಸಣ್ಣ ನೀರಾವರಿ ಇಲಾಖೆಗಳು ಮುಂದಾಗಬೇಕಾಗಿದೆ.
ಭರಮಸಾಗರ ಕೆರೆಯು ಇಲಾಖೆಯ ಆದ್ಯತೆಯಾಗಿದ್ದು ಯೋಜನೆಗೆ ನಿಗದಿಮಾಡಿರುವ ಹಣವನ್ನು ಮೊದಲು ಭರಮಸಾಗರ ಸಂಸ್ಕರಣ ಘಟಕಕ್ಕೆ ಬಳಸಿಕೊಳ್ಳಲಾಗುವುದು. ಉಳಿದ ಹಣವನ್ನು ಜಿಲ್ಲೆಯ ಮತ್ತೆರಡು ಕೆರೆಗಳ ಘಟಕಗಳಿಗೆ ಉಪಯೋಗಿಸಿಕೊಳ್ಳಲಾಗುವುದು ಎಂದು ತಾಪಂ ಎಡಿಪಿಆರ್ ರೂಪಾ ಕುಮಾರಿ ತಿಳಿಸಿದರು. ನವದೆಹಲಿ ಸಂಸ್ಥೆಯ ಅಧಿಕಾರಿಗಳು ಭರಮಸಾಗರಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಾದ ಎಪಿಓ ಸುಮಾರ, ಎಪಿಆರ್ ಪ್ರಮೀಳಾ, ಎಡಿಪಿಆರ್ ರೂಪಾ ಕುಮಾರಿ, ಭರಮಸಾಗರ ಪಿಡಿಓ ಟಿ. ವೀರೇಶ್, ಗ್ರಾಮದ ಮುಖಂಡರಾದ ಸಂತೋಷ್, ಕೋಗುಂಡೆ ಕರಿಬಸಪ್ಪ, ಇಬ್ರಾಹಿಂ ಮತ್ತಿತರರು ಜೊತೆಗಿದ್ದರು.