ಕುಡಿಯುವ ನೀರಿನ ಕಾಲುವೆಗೆ ಒಳಚರಂಡಿ ನೀರು

| Published : Mar 26 2024, 01:25 AM IST

ಸಾರಾಂಶ

ಮಹಾನಗರ ಪಾಲಿಕೆ ಆಯುಕ್ತ, ಒಳಚರಂಡಿ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಕೆ.ಎಂ.ಮಂಜುನಾಥ್ ಬಳ್ಳಾರಿ: ಇಲ್ಲಿನ ಅಶೋಕ ನಗರ (ಚೈತನ್ಯ ಟೆಕ್ನೋ ಕಾಲೇಜು ಬಳಿ) ಸೇರಿದಂತೆ ಎಚ್‌ಎಲ್‌ಸಿ (14ನೇ ಉಪ ಕಾಲುವೆ) ಆಸುಪಾಸಿನ ಪ್ರದೇಶದ ನಿವಾಸಿಗಳು ಒಳಚರಂಡಿ ನೀರನ್ನು ನೇರವಾಗಿ ಕಾಲುವೆ ಹರಿದುಬಿಡುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಕುರಿತು ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ, ಒಳಚರಂಡಿ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜನ-ಜಾನುವಾರುಗಳಿಗೆ ಬಳಕೆ ಮಾಡುವ ಕುಡಿವ ನೀರಿನಲ್ಲಿ ಚರಂಡಿ ನೀರು ಸೇರಿಕೊಳ್ಳುತ್ತಿದ್ದು, ನಾನಾ ಕಾಯಿಲೆಗಳಿಗೆ ತುತ್ತಾಗುವ ಆತಂಕ ಎದುರಾಗಿದೆ.ಚರಂಡಿ ನೀರು ಕಾಲುವೆಗೆ: ನಗರದ ಸಿರುಗುಪ್ಪ ರಸ್ತೆಯಿಂದ ಕಪ್ಪಗಲ್ ರಸ್ತೆವರೆಗಿನ ಎಚ್‌ಎಲ್‌ಸಿ ಕಾಲುವೆ ಬಳಿಯ ನಿವಾಸಿಗಳು ನೇರವಾಗಿ ಮನೆಯ ಚರಂಡಿ ನೀರನ್ನು ಕಾಲುವೆಗೆ ಬಿಡುತ್ತಿದ್ದು, ಕೆಲವರು ಮನೆಯ ಸ್ನಾನಗೃಹ ಹಾಗೂ ಶೌಚಾಲಯದಿಂದ ನೇರವಾಗಿ ಕಾಲುವೆಗೆ ಪೈಪ್‌ ಲೈನ್ ಮಾಡಿಸಿಕೊಂಡಿದ್ದಾರೆ. ಈ ಹಿಂದಿನಿಂದಲೂ ಈ ರೀತಿಯ ಚರಂಡಿ ನೀರನ್ನು ಕಾಲುವೆಗೆ ಬಿಡುವ ದುಷ್ಕೃತ್ಯವನ್ನು ಅನೇಕರು ಮುಂದುವರಿಸಿಕೊಂಡು ಬಂದಿದ್ದಾರೆ. ಇದರಿಂದ ಡೆಂಘೀ ಸೇರಿದಂತೆ ನಾನಾ ಕಾಯಿಲೆಗಳು ಹರಡುತ್ತಿವೆ. ಅಶೋಕ ನಗರ, ಕಪ್ಪಗಲ್ ರಸ್ತೆಯ ಪ್ರದೇಶದ ಅನೇಕ ಮಕ್ಕಳು ಕಾಯಿಲೆಯಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ಕುಡಿವ ನೀರಿನ ಕಾಲುವೆಗೆ ಚರಂಡಿ ನೀರು ಹರಿಯುತ್ತಿರುವುದು ಇದು ಪಾಲಿಕೆಯ ಅಧಿಕಾರಿಗಳು, ಒಳಚರಂಡಿ ಮಂಡಳಿ ಅಧಿಕಾರಿಗಳಿಗೂ ಗೊತ್ತಿದೆ. ಆದರೆ, ಯಾವುದೇ ಕ್ರಮಕ್ಕೆ ಮುಂದಾಗದೆ ಮೌನ ವಹಿಸಿದ್ದಾರೆ ಎಂದು ಆಪಾದಿಸುವ ಸ್ಥಳೀಯರು, ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಯಾವುದೇ ಕಾಳಜಿಯಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನೀರು ಕುಡಿಯೋದು ಹ್ಯಾಂಗ?: ಕಾಲುವೆಗೆ ಚರಂಡಿ ನೀರು ಬಿಡುತ್ತಾರೆ. ಅದೇ ನೀರನ್ನು ಕುಡಿಯೋದು ಹೇಗೆ? ಸ್ನಾನ ಮಾಡೋದು ಹೇಗೆ? ಅಧಿಕಾರಿಗಳಿಗೆ ಇದು ಅರ್ಥವಾಗುತ್ತಿಲ್ಲವೇ? ಎಂದು ಸ್ಥಳೀಯ ನಿವಾಸಿ ರವಿಕುಮಾರ್, ವಿಜಯಮ್ಮ, ರಾಜಲಕ್ಷ್ಮಿಹಾಗೂ ಉರುಕುಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.ಕಾಲುವೆಗೆ ಒಳಚರಂಡಿ ನೀರು ಬಿಡುವುದನ್ನು ತಡೆಗಟ್ಟುವಂತೆ ಕೋರಿ ಜಿಲ್ಲಾಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಅಶೋಕನಗರ ವಕೀಲ ಈರಪ್ಪಯ್ಯ.ಪ್ರತಿನಿತ್ಯ ಚರಂಡಿ ನೀರು ಹರಿದು ಕಾಲುವೆಗೆ ಸೇರುತ್ತದೆ. ಕಾಲುವೆಯಲ್ಲಿ ನೀರು ಇದ್ದಾಗಲೂ ಚರಂಡಿ ನೀರು ಬಿಡುತ್ತಾರೆ. ಇದರಿಂದ ಮಕ್ಕಳಿಗೆ ಡೆಂಘೀ ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತಿವೆ. ಅಧಿಕಾರಿಗಳು ಯಾರೂ ಈ ಕಡೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಾಳಮ್ಮ.