ಸಾರಾಂಶ
ಹೊನ್ನಾವರ: ಕೆರೆಮನೆಯ ಶಿವರಾಮ ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ ಈ ಬಾರಿ ಬೆಂಗಳೂರಿನ ಖ್ಯಾತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ ಅವರಿಗೆ ಲಭಿಸಿದರೆ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯು ಹಿರಿಯ ಯಕ್ಷಗಾನ ಕಲಾವಿದ ಎಂ.ಎಲ್. ಸಾಮಗ ಮಲ್ಪೆ ಅವರಿಗೆ ದೊರಕಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಕೆರೆಮನೆಯ ಆಶ್ರಯದಲ್ಲಿ 14ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾತ್ಯೋತ್ಸವ ಮಾ. 16ರಿಂದ 20ರ ವರೆಗೆ ನಡೆಯಲಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ನಾಟ್ಯೋತ್ಸವ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿದರೆ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಮಾ. 17ರ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದ ಅವರು, ನಾಟ್ಯೋತ್ಸವ ಮೊದಲ ದಿನ ಪ್ರಸ್ತುತ ಆವೃತ್ತಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಚಿವ ಮಂಕಾಳು ವೈದ್ಯ ಉತ್ಸವದ ಉದ್ಘಾಟಿಸುವರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉತ್ಸವದ ಅಧ್ಯಕ್ಷತೆ ವಹಿಸಲಿದ್ದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕೇರಳದ ಫೋಕ್ ಲ್ಯಾಂಡ್ ಅಧ್ಯಕ್ಷ ಡಾ. ಜಯರಾಜನ್, ಉಪೇಂದ್ರ ಪೈ, ಶಿರಸಿ, ಡಾ. ಸಂಜಯ ಎಚ್.ಆರ್. ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.
ಉತ್ಸವದ ಐದು ದಿನದ ಅವಧಿಯಲ್ಲಿ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಉತ್ಸವದ ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕ, ಕೇರಳ ಮುಂತಾದ ರಾಜ್ಯಗಳ ಕಲಾತಂಡಗಳು ಭಾಗವಹಿಸಲಿವೆ. ಶಾಲಾ ಮಕ್ಕಳಿಗಾಗಿ ತುಮರಿಯ ತಂಡದಿಂದ ಅನ್ಯಾಳ ಡೈರಿ ನಾಟಕ, ಕಲಾ ಗಂಗೋತ್ರಿ ಅವರಿಂದ ಮುಖ್ಯಮಂತ್ರಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಲ್.ಎಂ. ಹೆಗಡೆ, ಕೆ.ಜಿ. ಹೆಗಡೆ ಅಪ್ಸರಕೊಂಡ, ರಾಜೇಶ್ವರೀ ಹೆಗಡೆ ಕೆರೆಮನೆ, ಶ್ರೀಧರ ಹೆಗಡೆ ಕೆರೆಮನೆ ಉಪಸ್ಥಿತರಿದ್ದರು.