ಶಿವಾಜಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು

| Published : Mar 05 2024, 01:33 AM IST

ಶಿವಾಜಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಾಜಿ ಮಹಾರಾಜ ಕರ್ನಾಟಕದ ಅಳಿಯನಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅವಿನಾಭಾವ ಸಂಬಂಧವನ್ನು ಕಲ್ಪಿಸಿದೆ. ಸುಮಾರು ೪೦೦೦ ಜನಕ್ಕೂ ಮೇಲ್ಪಟ್ಟು ಬಂಗಾರಪೇಟೆ ಕ್ಷೇತ್ರದಲ್ಲಿ ಮರಾಠ ಸಮುದಾಯದ ಜನ ಇದ್ದರೂ ಒಗ್ಗಟ್ಟಿನ ಕೊರತೆ ಇದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಛತ್ರಪತಿ ಶಿವಾಜಿ ಹಿಂದೂ ಸಾಮ್ರಾಜ್ಯವನ್ನು ನಿರ್ಮಾಣ ಮಾಡಲು ಹೋರಾಡಿದ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಿದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗೋಳ್ ಗ್ರಾಮದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಮತ್ತು ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ೩೯೭ ನೇ ಶಿವಾಜಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ದೇಶಪ್ರೇಮ ಬೋಧಿಸಿದ ತಾಯಿ

ಶಿವಾಜಿಗೆ ತಾಯಿ ಜೀಜಾಬಾಯಿ ಬಾಲ್ಯದಿಂದಲೇ ದೇಶ ಪ್ರೇಮ ಮತ್ತು ಹೋರಾಟ ಮನೋಭಾವ ತುಂಬುವ ಜತೆಗೆ ಅನೇಕ ಮಹನೀಯರ ಕಥೆಗಳನ್ನು ಹೇಳಿದ ಪರಿಣಾಮ ೧೬ನೇ ವಯಸ್ಸಿನಲ್ಲಿಯೇ ಶಿವಾಜಿ ಬಿಜಾಪುರದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡಿದ್ದರು. ಅವರ ದೇಶಪ್ರೇಮವನ್ನು ಕಂಡು ೧೬೭೪ ರಲ್ಲಿ ಛತ್ರಪತಿ ಎಂಬ ಬಿರುದನ್ನು ಜನ ನೀಡಿದರು ಎಂದರು.

ಶಿವಾಜಿ ಮಹಾರಾಜ ಕರ್ನಾಟಕದ ಅಳಿಯನಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅವಿನಾಭಾವ ಸಂಬಂಧವನ್ನು ಕಲ್ಪಿಸಿದೆ. ಸುಮಾರು ೪೦೦೦ ಜನಕ್ಕೂ ಮೇಲ್ಪಟ್ಟು ಬಂಗಾರಪೇಟೆ ಕ್ಷೇತ್ರದಲ್ಲಿ ಮರಾಠ ಸಮುದಾಯದ ಜನ ಇದ್ದರೂ ಒಗ್ಗಟ್ಟಿನ ಕೊರತೆ ಇದೆ. ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠ ಸಮುದಾಯದ ಜನ ವಾಸವಿರುವ ಕಾರಣ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಡಿಪಿ ಹಳ್ಳಿ ಗ್ರಾಮದ ಬಳಿ ೨೫ ಕೋಟಿ ರು. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತೆರೆಯಲಾಗಿದೆ. ಹಾಗೂ ಮರಾಠರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.ಸಮುದಾಯ ಭವನಕ್ಕೆ ಜಾಗ ನೀಡಿ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಅಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ ಮಾತನಾಡಿ, ಹಿಂದೂ ಧರ್ಮವನ್ನು ಕಾಪಾಡುವಲ್ಲಿ ಶಿವಾಜಿ ಪ್ರಮುಖ ಪಾತ್ರ ವಹಿಸಿದ್ದರು. ಯರಗೋಳ್ ಭಾಗದ ಗ್ರಾಮಗಳ ಮರಾಠ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ದೇಶ ಸೇವೆ ಮಾಡುತ್ತಿರುವುದು ಬಹಳ ಹೆಮ್ಮೆಯ ಸಂಗತಿ. ಮರಾಠ ಸಮುದಾಯದ ಸಮುದಾಯ ಭವನಕ್ಕೆ ಶಾಸಕರು ಭೂಮಿಯನ್ನು ಮಂಜೂರು ಮಾಡಿದರೆ ಮರಾಠ ಪರಿಷತ್ ನಿಂದ ೧೦ ಲಕ್ಷ ಅನುದಾನವನ್ನು ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮರಾಠ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಸುನೀಲ್ ಚೌವಾನ್, ಗ್ರಾಮಾಂತರ ಅಧ್ಯಕ್ಷ ಗಿರಿಪ್ರಸಾದ್, ಕಾರ್ಯದರ್ಶಿ ಕಾಶಿನಾಥ್ ಶಿಂದೆ, ತಾ.ಪಂ ಮಾಜಿ ಸದಸ್ಯೆ ಅಂಬೂಬಾಯಿ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ರಾಮಶೆಟ್ಟಿ, ಪಿಡಿಒ ಮಧುಚಂದ್ರ, ಡಿಇಓ ಎಂ. ಕೇದಾರ್‌ರಾವ್ ಖರಾಡೆ, ಮುಖಂಡರಾದ ನಾಗೇಶ್ ರಾವ್, ಶ್ರೀನಿವಾಸ್ ರಾವ್ ಕದಂಬ, ಶ್ರೀನಿವಾಸರಾವ್, ರಾಜಪ್ಪ ಮುಂತಾದವರು ಹಾಜರಿದ್ದರು.