ಸಾರಾಂಶ
ಕಳೆದ ಬಾರಿ ಸುರಿದ ಅಲ್ಪ ಮಳೆಗೆ ಅರ್ಧಂಬರ್ಧ ಭರ್ತಿಯಾಗಿದ್ದ ಲಿಂಗನಮಕ್ಕಿ ಜಲಾಶಯದಲ್ಲಿ ಈಗ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದರ ಪರಿಣಾಮ ಶರಾವತಿ ಎಡದಂಡೆಯ ಸಿಗಂದೂರು ಲಾಂಚ್ ನಾಲ್ಕೈದು ದಿನಗಳಲ್ಲಿ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಪ್ರದೀಪ್ ಮಾವಿನಕೈ
ಬ್ಯಾಕೋಡು : ಕಳೆದ ಬಾರಿ ಸುರಿದ ಅಲ್ಪ ಮಳೆಗೆ ಅರ್ಧಂಬರ್ಧ ಭರ್ತಿಯಾಗಿದ್ದ ಲಿಂಗನಮಕ್ಕಿ ಜಲಾಶಯದಲ್ಲಿ ಈಗ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದರ ಪರಿಣಾಮ ಶರಾವತಿ ಎಡದಂಡೆಯ ಸಿಗಂದೂರು ಲಾಂಚ್ ನಾಲ್ಕೈದು ದಿನಗಳಲ್ಲಿ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಬಿಸಿಲಿನ ಝಳ 40 ಡಿಗ್ರಿ ದಾಟುತ್ತಿದೆ. ಕಳೆದ ಬಾರಿ ಮಳೆ ಕೈಕೊಟ್ಟ ಪರಿಣಾಮ ನದಿಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನೀರಿಲ್ಲದ ಪರಿಣಾಮ ಸಿಗಂದೂರು ಲಾಂಚ್ ಸ್ಥಗಿತಗೊಳ್ಳುವ ಆತಂಕ ಎದುರಾಗಿದ್ದು, ಈ ಭಾಗದ ಕರೂರು, ಬಾರಂಗಿ ಹೋಬಳಿಯ ಜನರಿಗೆ, ಸಿಗಂದೂರಿಗೆ ಆಗಮಿಸುವ ಸಾವಿರಾರು ಭಕ್ತರಿಗೆ ಸಾಕಷ್ಟು ಅನಾನುಕೂಲ ಉಂಟಾಗಲಿದೆ.
ಸಿಗಂದೂರು, ಕೊಲ್ಲೂರು ಹಾಗೂ ಕೊಡಚಾದ್ರಿಗೆ ಬರುವ ಭಕ್ತರು ಇದೇ ಮಾರ್ಗವನ್ನೇ ಹೆಚ್ಚಾಗಿ ಬಳಸುವುದರಿಂದ ಪ್ರವಾಸಿಗರಿಗೆ ತೊಂದರೆ ಆಗಲಿದೆ. ಲಾಂಚ್ ಸ್ಥಗಿತವಾದರೆ ಪ್ರವಾಸಿಗರು ಪರಡಾಡುವುದಷ್ಟೇ ಅಲ್ಲ, ಕರೂರು, ಬಾರಂಗಿಯ ಗ್ರಾಮಸ್ಥರು ಆಸ್ಪತ್ರೆ, ಕೋರ್ಟ್, ಕಚೇರಿಗೆ ಹೋಗಲು, ಗರ್ಭಿಣಿಯರು, ವೃದ್ಧರು, ಶಾಲಾ-ಕಾಲೇಜು ಮಕ್ಕಳು, ಸಾಗರ, ಶಿವಮೊಗ್ಗಕ್ಕೆ ತೆರಳಲು ಇದೇ ಮಾರ್ಗ ಬಳಸುತ್ತಿದ್ದು ಸಾಕಷ್ಟು ಅನಾನುಕೂಲ ಆಗುವ ಸಾಧ್ಯತೆಯಿದೆ.
ಜೊತೆಗೆ, ತುಮರಿ, ಬ್ಯಾಕೋಡು, ನಾಗೋಡಿ, ಹೆರಬೆಟ್ಟು, ಕಟ್ಟಿನಕಾರು ಮತ್ತಿತರ ಊರಿನ ಸುಮಾರು 30 ಸಾವಿರ ಜನರಿಗೂ ಇತರೆಡೆಯ ಸಂಪರ್ಕಕ್ಕೆ ತೊಂದರೆಯಾಗಲಿದೆ.
ಹೊಳೆಬಾಗಿಲು ಮತ್ತು ಅಂಬಾರಗೊಡ್ಲು ಎರಡೂ ದಡದಲ್ಲಿ ಲಾಂಚ್ ನಿಲ್ಲಿಸುವ ಪ್ಲಾಟ್ ಫಾರಂಗಿಂತ ನೀರು ಕೆಳಗಿಳಿದರೆ, ಪ್ಲಾಟ್ ಫಾರಂಗಳು ಬಳಕೆಗೆ ಬಾರದೇ ಲಾಂಚ್ಅನ್ನು ನಿಲ್ಲಿಸಲು ಸಿಬ್ಬಂದಿಗಳು ಹರಸಾಹಸ ಪಡಬೇಕಾಗುತ್ತದೆ. ಲಾಂಚ್ ಸ್ಥಗಿತದಿಂದ ಈ ಭಾಗದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲಿದ್ದು, ಇದರ ಬಿಸಿ ನೇರವಾಗಿ ಇಲ್ಲಿನ ಗ್ರಾಮಸ್ಥರಿಗೆ ತಟ್ಟಲಿದೆ ಎನ್ನುತ್ತಾರೆ ಸ್ಥಳೀಯ ಮುಖಂಡ ಜಿನೇಂದ್ರ ಜೈನ್.
ದ್ವೀಪ ಪ್ರದೇಶದಲ್ಲಿ ಇರುವ ಎಣ್ಣೆಹೊಳೆ, ಸುಳುಮನೆ ಹೊಳೆ, ಬ್ಯಾಕೋಡು ಹೊಳೆ, ಹುರುಳಿ ಹೊಳೆ, ಕೂದರೂರು ಹೊಳೆ, ಕಸನಗದ್ದೆಹೊಳೆ ಮಳೂರುಹೊಳೆ, ಮಾರಲಗೋಡುಯಂತಹ ಶರಾವತಿ ನದಿಯ ಉಪನದಿಗಳು ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಶುರುವಾಗುವ ಮಳೆಗಾಲದ ಆರಂಭದವರೆಗೂ ಬತ್ತುವುದಿಲ್ಲ. ಆದರೆ, ಮಳೆ ಕೊರತೆ, ಹೆಚ್ಚಿದ ತಾಪಮಾನಕ್ಕೆ ನದಿಗಳು ಈ ಬಾರಿ ಬತ್ತಿ ಹೋಗುತ್ತಿವೆ ಎನ್ನುತ್ತಾರೆ ಸ್ಥಳೀಯರು.