ಸರ್ಕಾರಿ ಶಾಲೆಗಳಲ್ಲಿ 1605 ಶಿಕ್ಷಕರ ಕೊರತೆ..!

| Published : May 21 2024, 12:42 AM IST / Updated: May 21 2024, 02:24 PM IST

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ೭೮೩ ಕಿರಿಯ ಪ್ರಾಥಮಿಕ, ೮೧೮ ಹಿರಿಯ ಪ್ರಾಥಮಿಕ, ೨೧೫ ಪ್ರೌಢಶಾಲೆಗಳು, ೯ ಪದವಿ ಪೂರ್ವ ಕಾಲೇಜುಗಳು (ಪ್ರೌಢಶಾಲೆ ವಿಭಾಗ ಸೇರಿ) ಸೇರಿದಂತೆ ೧೮೨೪ ಸರ್ಕಾರಿ ಶಾಲೆಗಳಿವೆ.  

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ಶಾಲೆಗಳ ಪುನಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಸರ್ಕಾರಿ ಶಾಲೆಗಳನ್ನು ಶಿಕ್ಷಕರ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು ೧೬೦೫ ಶಿಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ.

ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಿಸುವುದಕ್ಕೆ ಅತಿಥಿ ಶಿಕ್ಷಕರೇ ಪ್ರಮುಖ ಆಧಾರವಾಗಿದ್ದಾರೆ. ಬೇಡಿಕೆಯಿರುವಷ್ಟು ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಒಲವು ತೋರದಿರುವುದರಿಂದ ಅತಿಥಿ ಉಪನ್ಯಾಸಕರ ಅವಲಂಬನೆ ಅನಿವಾರ್ಯವೂ ಆಗಿದೆ.

೧,೧೨೬ ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ:

ಪ್ರಾಥಮಿಕ ಶಾಲೆಗಳಿಗೆ ೪,೪೯೬ ಸಹ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಆದರೆ, ಈ ಪೈಕಿ ೩,೩೭೦ ಹುದ್ದೆಗಳಷ್ಟೇ ಭರ್ತಿಯಾಗಿದ್ದು, ೧,೧೨೬ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಮಧ್ಯೆ ಕಳೆದ ನಾಲ್ಕೈದು ತಿಂಗಳ ಹಿಂದೆ ೪೩೦ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಆಯ್ಕೆಯಾಗಿರುವ ೩೬೦ ಮಂದಿ ವರದಿ ಮಾಡಿಕೊಂಡಿದ್ದಾರೆ. ಉಳಿದವರು ನ್ಯಾಯಾಲಯದ ತಡೆಯಾಜ್ಞೆ ಹಾಗೂ ಇತರೆ ಕಾರಣಗಳಿಂದ ವರದಿ ಮಾಡಿಕೊಂಡಿಲ್ಲ.

ಸಹ ಶಿಕ್ಷಕರ ಕೊರತೆಯೇ ಹೆಚ್ಚು:

ಪ್ರಾಥಮಿಕ ಶಾಲೆಗಳಲ್ಲಿ ಇರುವ ಸಹ ಶಿಕ್ಷಕರೇ ಹೇಗೋ ವಿಷಯವಾರು ಪಾಠಗಳನ್ನು ಮಾಡಿ, ಶೈಕ್ಷಣಿಕ ಚಟುವಟಿಕೆ ಮುಗಿಸುತ್ತಾರೆ. ಆದರೆ, ಪ್ರೌಢ ಶಾಲೆಗಳಿಗೆ ವಿಷಯವಾರು ಶಿಕ್ಷಕರೇ ಬೇಕಿದೆ. ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಒಟ್ಟಾರೆ ೩೫೦ಕ್ಕೂ ಶಿಕ್ಷಕರ ಕೊರತೆಯಿದೆ. ಇದರಲ್ಲಿ ೧೫ಕ್ಕೂ ಹೆಚ್ಚು ಮುಖ್ಯಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಿಂದ ಅಷ್ಟೇನೂ ಸಮಸ್ಯೆಯಿಲ್ಲ. ಸಹ ಶಿಕ್ಷಕರೇ ಪ್ರಭಾರ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ, ಮುಖ್ಯ ಶಿಕ್ಷಕರು ಸೇರಿದಂತೆ ೪೭೯ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇವುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಸೇರಿವೆ. ಪ್ರತಿ ಪ್ರೌಢಶಾಲೆಯಲ್ಲೂ ಒಂದೊಂದು ವಿಷಯಕ್ಕೆ ಒಬ್ಬೊಬ್ಬರು ಶಿಕ್ಷಕರಿರಬೇಕಿದೆ. ಆದರೆ, ಜಿಲ್ಲೆಯಲ್ಲಿ ಆ ಪರಿಸ್ಥಿತಿಯಿಲ್ಲದಿರುವುದು ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಹೊಡೆತ ಬಿದ್ದಿದೆ.

ತರಗತಿ ನಡೆಸುವುದೇ ದೊಡ್ಡ ಸವಾಲು:

ಮೇ ೨೯ರಿಂದ ಶಾಲೆಗಳು ಆರಂಭವಾಗಲಿವೆ. ಆದರೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು ಬರೋಬ್ಬರಿ ೧೬೦೫ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ವಿಷಯವಾರು ತರಗತಿ ನಡೆಸುವುದೇ ದೊಡ್ಡ ಸವಾಲಾಗಿವೆ.

೧೮೨೪ ಸರ್ಕಾರಿ ಶಾಲೆಗಳು:

ಜಿಲ್ಲೆಯಲ್ಲಿ ೭೮೩ ಕಿರಿಯ ಪ್ರಾಥಮಿಕ, ೮೧೮ ಹಿರಿಯ ಪ್ರಾಥಮಿಕ, ೨೧೫ ಪ್ರೌಢಶಾಲೆಗಳು, ೯ ಪದವಿ ಪೂರ್ವ ಕಾಲೇಜುಗಳು (ಪ್ರೌಢಶಾಲೆ ವಿಭಾಗ ಸೇರಿ) ಸೇರಿದಂತೆ ೧೮೨೪ ಸರ್ಕಾರಿ ಶಾಲೆಗಳಿವೆ. ಜೊತೆಗೆ, ೧೭೨ ಅನುದಾನಿತ, ೪೨೩ ಅನುದಾನರಹಿತ ಖಾಸಗಿ ಶಾಲೆಗಳು, ೪೨ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳು, ತಲಾ ಒಂದೊಂದು ಜವಾಹರ್ ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, ೨ ಮೌಲಾನ ಅಬ್ದುಲ್ ಆಜಾದ್ ಶಾಲೆಗಳು ಸೇರಿದಂತೆ ೨,೪೬೫ ಶಾಲೆಗಳಿವೆ.

ಅನುದಾನಿತ, ಅನುದಾನ ರಹಿತ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಸಂಸ್ಥೆಯವರೇ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರದ್ದೇ ಬಹುದೊಡ್ಡ ಸಮಸ್ಯೆಯಾಗಿದೆ.

೪೩೦ ಮುಖ್ಯ ಶಿಕ್ಷಕರ ಹುದ್ದೆ ಖಾಲಿ:

ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಸೇರಿದಂತೆ ಒಟ್ಟು ೧೯೫೭ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಆದರೆ, ಪ್ರಸ್ತುತ ೧,೪೭೮ ಹುದ್ದೆಗಳಲ್ಲಿ ಮಾತ್ರ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ೪೭೯ ಹುದ್ದೆಗಳು ಖಾಲಿ ಉಳಿದಿವೆ. ಇನ್ನು ಪ್ರಾಥಮಿಕ ಶಾಲೆಗಳಿಗೆ ೪,೪೯೬ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ೩,೩೭೦ ಹುದ್ದೆಗಳು ಭರ್ತಿಯಾಗಿವೆ. ೧,೧೨೬ ಶಿಕ್ಷಕರ ಹುದ್ದೆಗಳು ಈಗಲೂ ಖಾಲಿ ಇವೆ. ಇದರೊಂದಿಗೆ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ೪೩೦ ಮುಖ್ಯ ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಮತ್ತು ಪಾಠ ಪ್ರವಚನಗಳಿಗೆ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು. ಶಾಲಾ ಪ್ರಾರಂಭೋತ್ಸವಕ್ಕೆ ೧೦ ದಿನಗಳಷ್ಟೇ ಬಾಕಿ ಉಳಿದಿದೆ. ಶಾಲಾ ಪ್ರಾರಂಭೋತ್ಸವದ ಬೆನ್ನಲ್ಲೇ ಮಕ್ಕಳ ದಾಖಲಾತಿ ನಡೆಯುತ್ತಿದ್ದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸವನ್ನೂ ಶಿಕ್ಷಕರು ಮಾಡಬೇಕು. ಮತ್ತೊಂದೆಡೆ ತರಗತಿಗಳಲ್ಲಿ ಪಾಠಪ್ರವಚನಗಳ ಆಗಬೇಕಿದೆ.

ಆದರೆ, ಶಿಕ್ಷಕರ ಕೊರತೆಯಿಂದಾಗಿ ಇದ್ಯಾವ ಕಾರ್ಯವೂ ಸರಿಯಾಗಿ ನಡೆಯದೆ, ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹೀಗಾಗಿ ಶಿಕ್ಷಕರ ಕೊರತೆ ನೀಗಿಸುವ ದೃಷ್ಟಿಯಿಂದಲೇ ರಾಜ್ಯ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆ ತ್ವರಿತ ಕ್ರಮ ವಹಿಸಬೇಕಿದೆ.

ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ೧೨೦೦ ಶಿಕ್ಷಕರ ಹುದ್ದೆಗಳು ಖಾಲಿಯಿದ್ದವು. ಈ ಪೈಕಿ ೩೬೦ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಪ್ರೌಢಶಾಲೆಗಳಲ್ಲಿ ೪೭೯ ಶಿಕ್ಷಕ ಹುದ್ದೆಗಳು ಖಾಲಿಯಿವೆ. ಜೂ.೧೦ರ ನಂತರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಅವಕಾಶ ಕಲ್ಪಿಸಲಿದ್ದು, ಸರ್ಕಾರದ ಸೂಚನೆಯಂತೆ ಕ್ರಮ ವಹಿಸಲಾಗುವುದು.

- ಎಚ್.ಶಿವರಾಮೇಗೌಡ, ಡಿಡಿಪಿಐ, ಮಂಡ್ಯ