ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಹಡಪದ ಅಪ್ಪಣ್ಣ ಅವರು ವಚನ ಕ್ರಾಂತಿಕಾರರು, ಸಾಮಾಜಿಕ ಚಳವಳಿಕಾರರು. ಇವರು ಬಸವಣ್ಣನವರಿಗೆ ಬಲಗೈ ಬಂಟರಂತಿದ್ದರು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂದು ಹಡಪದ ಸಮಾಜದವರು ಬೆಳಗ್ಗೆ ಎದುರುಗಡೆ ಬಂದರೆ ಏನೋ ಆಗುತ್ತದೆಂಬ ಮೂಢನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ ಎಂದರು.
ಅಪ್ಪಣ್ಣ ಅವರ ಪತ್ನಿ ಲಿಂಗಮ್ಮ ಅವರು ಸಹ ಮಹಾನ್ ವಚನಗಾರ್ತಿಯಾಗಿದ್ದರು. ಇವರು ಸುಮಾರು 250 ಹೆಚ್ಚು ವಚನಗಳನ್ನು ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿoದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರೆಂಬುದಕ್ಕೆ ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ತಿಳಿದುಕೊಂಡರೆ ಗೊತ್ತಾಗುತ್ತದೆ. ಒಬ್ಬ ಕಾರ್ಯದರ್ಶಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರು ಒಂದು ಉತ್ತಮ ಉದಾಹರಣೆ ಎಂದು ಅವರು ಹೇಳಿದರು.ಸಾಮಾಜಿಕ ಸುಧಾರಣೆಗೆ ಶ್ರಮ
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ ಎಂಬುದು ಬಹಳ ಹಿಂದೆಯಿಂದ ಬಂದಿರುವಂಥದ್ದು ಎಂಬುದಕ್ಕೆ ಹಡಪದ ಅಪ್ಪಣ್ಣನವರೇ ಸಾಕ್ಷಿ. ಅವರು ಬಸವಣ್ಣನವರ ಬಾಲ್ಯದ ಗೆಳೆಯರಾಗಿದ್ದರು ಮತ್ತು ಬಸವಣ್ಣನವರು ಕಲ್ಯಾಣದ ಪ್ರಧಾನ ಮಂತ್ರಿಯಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಅಲ್ಲಿ ಅವರು ಸಮಾಜದಲ್ಲಿನ ಅಸಮಾನತೆಗಳನ್ನು ಪ್ರಶ್ನಿಸಿದರು ಮತ್ತು ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು ಎಂದು ತಿಳಿಸಿದರು.ಸಾಹಿತಿ ಕಿರಣ್ ಸಿಡ್ಲೇಹಳ್ಳಿ ಮಾತನಾಡಿ, ಇತಿಹಾಸದಲ್ಲಿ ಹಡಪದ ಅಪ್ಪಣ್ಣನವರ ಬಗೆಗಿನ ವಿವರಗಳು ಅತ್ಯಲ್ಪ. ಅವರ ಹೆಸರಿಗೆ ಹಡಪದ ಎಂಬ ವೃತ್ತಿ ನಾಮ ಸೇರಿಕೊಂಡಿದೆ. ಆದರೆ, ಕ್ಷೌರಿಕ ಕಾಯಕದವರು ತಮ್ಮನ್ನು ಹಡಪದ ಅಪ್ಪಣ್ಣನವರ ವಂಶದವರೆಂದು ಹೇಳಿಕೊಳ್ಳುವುದರಿಂದ ಅವರ ವಾದವನ್ನೇ ಪುರಸ್ಕರಿಸಿ ಕವಿ ಚರಿತ್ರಕಾರರು ಅಪ್ಪಣ್ಣನವರನ್ನು ಕ್ಷೌರಿಕ ಜಾತಿಯವರೆಂದೇ ಗುರುತಿಸಿದ್ದಾರೆ. ಅಪ್ಪಣ್ಣನವರು ತಮ್ಮ ಜೀವನವಿಡೀ ಬಸವಣ್ಣನ ನಂಬಿಕಸ್ಥ ಸಹಾಯಕರಾಗಿದ್ದರು. ಶರಣರೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು. ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿಗೆ ಯಾವ ಲೋಪವೂ ಬಾರದಂತೆ ನಡೆದುಕೊಳ್ಳುತ್ತಿದ್ದುದರಿಂದ ಶರಣ ಸಮೂಹ ಅವರನ್ನು ನಿಜ ಸುಖಿ ಅಪ್ಪಣ್ಣ ಎಂದು ಕರೆಯಿತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. .ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.----
ಕೋಟ್...ಹಡಪದ ಸಮಾಜ ಆರ್ಥಿಕವಾಗಿ ಹಿಂದುಳಿದ ಕಾರಣ ಅವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೈಕ್ಷಣಿಕ ರಾಜಕೀಯ ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಸರ್ಕಾರ ತನ್ನ ಪ್ರಮಾಣಿಕ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಹೆಚ್ಚಿನ ಜನರು ಶಿಕ್ಷಣ, ಉದ್ಯೋಗವಿಲ್ಲದೆ ವಂಶಪರಂಪರೆಯಾಗಿ ಸಮಾಜದ ಕೊಳೆಯನ್ನು ತೊಳೆಯುವ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
- ಕಿರಣ್ ಸಿಡ್ಲೇಹಳ್ಳಿ, ಸಾಹಿತಿ