ಲೋಕಸಭಾ ಟಿಕೆಟ್ ಸಿದ್ದೇಶ್ವರ ಕುಟುಂಬಕ್ಕೆ ಬೇಡ: ಮಾಜಿ ಸಚಿವ ಎಸ್.ಎ.ರವೀಂದ್ರನಾಥ

| Published : Mar 18 2024, 01:52 AM IST

ಲೋಕಸಭಾ ಟಿಕೆಟ್ ಸಿದ್ದೇಶ್ವರ ಕುಟುಂಬಕ್ಕೆ ಬೇಡ: ಮಾಜಿ ಸಚಿವ ಎಸ್.ಎ.ರವೀಂದ್ರನಾಥ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಟಿಕೆಟ್‌ನ್ನು ತಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ವಿಶೇಷವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಥವಾ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಪೈಕಿ ಒಬ್ಬರಿಗೆ ನೀಡುವಂತೆ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದರೂ ವರಿಷ್ಠರು ಕಿವಿಗೊಡದ ಹಿನ್ನೆಲೆಯಲ್ಲಿ ಸಿದ್ದೇಶ್ವರ ಪತ್ನಿ ಸೇರಿ ಆ ಕುಟುಂಬದ ಯಾರಿಗೆ ಟಿಕೆಟ್ ಕೊಟ್ಟರೂ ನಮ್ಮ ಸಮ್ಮತಿ ಇಲ್ಲ. ತಕ್ಷಣ ಬೇರೆಯವರಿಗೆ ಟಿಕೆಟ್ ನೀಡುವಂತೆ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು...!

ನಗರದಲ್ಲಿ ಭಾನುವಾರ ಸಂಜೆ ನಡೆದ ಅಸಮಾಧಾನಗೊಂಡ ಗುಂಪಿನ ನಾಯಕರ ಸಭೆಯಲ್ಲಿ ಕೈಗೊಂಡ ಎರಡು ನಿರ್ಧಾರಗಳಿವು. ಸಂಸದ ಸಿದ್ದೇಶ್ವರ ಮತ್ತು ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಬೇರೆ ಯಾರಿಗೆ ಕೊಟ್ಟರೂ ನಮ್ಮ ಬೆಂಬಲವಿದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಟಿಕೆಟ್ ವಂಚಿತರು ಹಾಗೂ ಸಂಸದ ಸಿದ್ದೇಶ್ವರ ವಿರೋಧಿ ಬಣದ ನಾಯಕರು ಒಮ್ಮತದ ತೀರ್ಮಾನ ಕೈಗೊಳ್ಳುವ ಮೂಲಕ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಇಲ್ಲಿನ ಲಕ್ಷ್ಮೀ ಫ್ಲೋರ್ ಮಿಲ್ ಸಮೀಪ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ನಿವಾಸದಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಮಾಜಿ ಪದಾಧಿಕಾರಿಗಳ ಮಹತ್ವದ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಘೋಷಿಸಿದ್ದು ಹಿಂಪಡೆಯುವಂತೆ ಒಕ್ಕೊರಲಿನಿಂದ ನಾಯಕರು ಒತ್ತಾಯಿಸಿದ್ದಾರೆ.

ದಾವಣಗೆರೆ ಟಿಕೆಟ್‌ನ್ನು ತಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ವಿಶೇಷವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಥವಾ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ ಪೈಕಿ ಒಬ್ಬರಿಗೆ ನೀಡುವಂತೆ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದರೂ ವರಿಷ್ಠರು ಕಿವಿಗೊಡದ ಹಿನ್ನೆಲೆಯಲ್ಲಿ ಸಿದ್ದೇಶ್ವರ ಪತ್ನಿ ಸೇರಿ ಆ ಕುಟುಂಬದ ಯಾರಿಗೆ ಟಿಕೆಟ್ ಕೊಟ್ಟರೂ ನಮ್ಮ ಸಮ್ಮತಿ ಇಲ್ಲ. ತಕ್ಷಣ ಬೇರೆಯವರಿಗೆ ಟಿಕೆಟ್ ನೀಡುವಂತೆ ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಮಾಜಿ ಸಚಿವರಾದ ಹೊನ್ನಾಳಿಯ ಎಂ.ರೇಣುಕಾಚಾರ್ಯ, ಹರಪನಹಳ್ಳಿಯ ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕ ಮಾಯಕೊಂಡದ ಎಂ.ಬಸವರಾಜ ನಾಯ್ಕ, ಪರಾಜಿತ ಅಭ್ಯರ್ಥಿಗಳಾದ ಚನ್ನಗಿರಿಯ ಮಾಡಾಳ ಮಲ್ಲಿಕಾರ್ಜುನ, ದಾವಣಗೆರೆ ಉತ್ತರದ ಲೋಕಿಕೆರೆ ನಾಗರಾಜ, ದಕ್ಷಿಣದ ಬಿ.ಜಿ.ಅಜಯಕುಮಾರ, ಆರೈಕೆ ಆಸ್ಪತ್ರೆ ಮುಖ್ಯಸ್ಥ, ಜಗಳೂರಿನ ಡಾ.ಟಿ.ಜಿ.ರವಿಕುಮಾರ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎನ್. ಕಲ್ಲೇಶ ಇತರರು ಇದ್ದರು.

....................

ದಾವಣಗೆರೆ ಕ್ಷೇತ್ರ ಸೋಲಬಾರದೆಂದರೆ ಅಭ್ಯರ್ಥಿ ಬದಲಿಸಿ: ರವೀಂದ್ರನಾಥ

ದಾವಣಗೆರೆಯಲ್ಲಿ ಭಾನುವಾರ ಸಂಜೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ದಾವಣಗೆರೆ ಕ್ಷೇತ್ರಕ್ಕೆ ಸಂಸದ ಸಿದ್ದೇಶ್ವರ ಸೇರಿದಂತೆ ಆ ಕುಟುಂಬ ಹೊರತುಪಡಿಸಿ, ಬೇರೆ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುತ್ತೇವೆ. ರಾಜ್ಯ, ರಾಷ್ಟ್ರ ನಾಯಕರು ಯಾವುದೇ ಕಾರಣಕ್ಕೂ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಬಾರದು. ಇದು ನಮ್ಮ ಹೋರಾಟದ ಗುರಿ, ಒತ್ತಾಯವೂ ಆಗಿದೆ ಎಂದರು.

ಸಿದ್ದೇಶ್ವರರ ಕುಟುಂಬಕ್ಕೆ ನಾವು ಯಾವುದೇ ಬೆಂಬಲ ಕೊಡುವುದಿಲ್ಲ. ನಮ್ಮ ಮುಖ್ಯ ಗುರಿ ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬುದಾಗಿದೆ. ಹಾಗಾಗಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಬಾರದೆಂದರೆ ದಾವಣಗೆರೆ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಘೋಷಿಸಬೇಕು. ನಮ್ಮ ರಾಜ್ಯ ನಾಯಕರಾಗಲೀ, ರಾಷ್ಟ್ರ ನಾಯಕರಾಗಲೀ ಯಾರೂ ಏನೂ ಹೇಳಲಿಲ್ಲ. ಹಾಗಾಗಿ ನಮ್ಮ ಹೋರಾಟ ನಾವು ಮಾಡುತ್ತೇವೆ. ದುಗ್ಗಮ್ಮನ ಜಾತ್ರೆ ಆದ ನಂತರ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಶಿವಮೊಗ್ಗ ಮೋದಿ ಕಾರ್ಯಕ್ರಮಕ್ಕೆ ನಾವ್ಯಾರೂ ಹೋಗಲ್ಲ!

ಶಿವಮೊಗ್ಗದಲ್ಲಿ ಸೋಮವಾರ (ಇಂದು) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಸಮಾವೇಶಕ್ಕೆ ನಾವ್ಯಾರೂ ಹೋಗುವುದಿಲ್ಲ. ಒಂದು ವೇಳೆ ಕ್ಷೇತ್ರದಲ್ಲಿ ಸಿದ್ದೇಶ್ವರ ಕುಟುಂಬಕ್ಕೆ ನೀಡಿದ ಟಿಕೆಟ್ ಬದಲಾವಣೆ ಮಾಡದಿದ್ದರೆ, ನಂತರ ಯೋಚಿಸುತ್ತೇವೆ. ಅಭ್ಯರ್ಥಿ ಬದಲಾವಣೆ ಆಗಬೇಕೆಂಬುದೇ ನಮ್ಮ ಮುಖ್ಯ ಅಜೆಂಡಾ ಆಗಿದೆ. ರಾಜಕಾರಣದಲ್ಲಿ ಯಾರ ಎದುರು ಯಾರು ಸೆಡ್ಡು ಹೊಡೆಯುತ್ತಾರೋ ನಮಗೆ ಗೊತ್ತಿಲ್ಲ. ನಮ್ಮ ಪ್ರಶ್ನೆ ಇರುವುದು ಸಂಸದ ಸಿದ್ದೇಶ್ವರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂಬುದೇ ಮುಖ್ಯ ಬೇಡಿಕೆ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಬಳಿ ಹೋಗಿ ನಾವ್ಯಾರೂ ಮಾತನಾಡಬೇಕಾಗಿಲ್ಲ. ಮಾತನಾಡುವುದೆಲ್ಲವೂ ಈಗಾಗಲೇ ಮುಗಿದಿದೆ. ಮಾತನಾಡುವುದಕ್ಕೆ ನಾವ್ಯಾರೂ ತಯಾರಿಲ್ಲ. ಇರುವ ವಿಷಯ, ಸಂಸದ ಸಿದ್ದೇಶ್ವರ ನಡವಳಿಕೆ ಬಗ್ಗೆ ಯಡಿಯೂರಪ್ಪನವರಿಗೆ ಹೇಳಿದ್ದೇವೆ. ನಮ್ಮನ್ನೆಲ್ಲಾ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ ಮನುಷ್ಯ ಸಿದ್ದೇಶ್ವರ ಅಂತಾ ನಮ್ಮೆಲ್ಲಾ ಪರಾಜಿತ ಅಭ್ಯರ್ಥಿಗಳ ಅಪವಾದ ಆಗಿದೆ ಎಂದು ಹೇಳಿದರು.

.............................................

ಅಭ್ಯರ್ಥಿ ಬದಲಾವಣೆ ಆಗಬೇಕೆಂಬುದೇ ದೃಢ ನಿರ್ಧಾರ: ಜಿ.ಕರುಣಾಕರ ರೆಡ್ಡಿ

ದಾವಣಗೆರೆ: ಹರಪನಹಳ್ಳಿ ಕ್ಷೇತ್ರದ ಇತಿಹಾಸದಲ್ಲೇ 70-80 ಪೊಲೀಸರನ್ನು ಕರೆಸಿ, ಸಭೆ ಮಾಡಿದ್ದು ನಿಜಕ್ಕೂ ದುರಂತ. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ರ ಮಾತಿಗೆ ನಾನೂ ಬದ್ಧನಾಗಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಆಗಬೇಕೆಂಬುದೇ ನಮ್ಮ ದೃಢ ನಿರ್ಧಾರ ಎಂದು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸಂಜೆ ಅಸಮಾಧಾನ ಗುಂಪಿನ ನಾಯಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತಾಡಿ, ಸಂಸದರ ವಿಚಾರವಾಗಿ ತುಂಬಾ ಚೆನ್ನಾಗಿರೋದೆಲ್ಲಾ ನಿನ್ನೆ ಗೊತ್ತಾಗಿದೆ. ಸಂಸದರ ವರ್ತನೆ ಹೇಗಿದೆ, ಅದಕ್ಕೆ ಹೇಗೆ ಪ್ರತಿಕ್ರಿಯೆ ಬಂದಿತೆಂಬುದು ನಿನ್ನೆ ಹರಪನಹಳ್ಳಿಯಲ್ಲಿ ಗೊತ್ತಾಗಿದೆ. ಪೊಲೀಸರ ಕರೆಸಿ, ನಿಷ್ಠಾವಂತರ ಸಭೆಯಿಂದ ಹೊರ ಹಾಕಿಸುತ್ತಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಮಗ್ಯಾರಿಗೂ ಸಂಸದ ಸಿದ್ದೇಶ್ವರ ಕೆಲಸ ಮಾಡಿಲ್ಲ. ನಮ್ಮಲ್ಲಿ ದಾಖಲೆ, ಸಾಕ್ಷ್ಯ ಇವೆ. ಹಿಂದಿನ ಎರಡು ಸಭೆಗಳಿಗೆ ನಾನು ಬರಲಾಗಲಿಲ್ಲ. ನಮ್ಮೆಲ್ಲರ ದೃಢ ನಿರ್ಧಾರವನ್ನು ರವೀಂದ್ರನಾಥ್ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಬದಲಾವಣೆಯಾದರೆ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಿದ್ದೇಶ್ವರ ಮಾಡಿರುವುದು ಏನೆಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಭಗವಂತನಿಗೆ ಗೊತ್ತು. ಈ ಬಗ್ಗೆ ಹೆಚ್ಚು ಚರ್ಚೆ ಬೇಕಿಲ್ಲ ಎಂದು ತಿಳಿಸಿದರು.ದಾವಣಗೆರೆ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಆಗಬೇಕು. ಕಾರ್ಯಕರ್ತರೂ ಇದೇ ಮನವಿ ಮಾಡಿದ್ದಾರೆ. ಮಾಜಿ ಸಚಿವರು, ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಿ ಅಂತಾ ನಿಷ್ಠಾವಂತ ಕಾರ್ಯಕರ್ತರು ಹೇಳಿದರೆ, ಪೊಲೀಸರ ಕರೆಸಿ, ಸಿದ್ದೇಶ್ವರ ಅಲ್ಲಿ ಸಭೆ ಮಾಡಿದ್ದಾರೆ. ಮೊದಲ ಸಲ ನಿನ್ನೆ ಗೊಂದಲದಲ್ಲಿ ಸಭೆ ಮಾಡಿದ್ದಾರೆ. ಟಿಕೆಟ್ ಬದಲಾವಣೆಗೆ ವರಿಷ್ಠರು, ಹೈಕಮಾಂಡ್ ಒಪ್ಪದಿದ್ದರೆ ನಾವು ಮುಂದಿನ ಸಭೆ ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಆ ಸಭೆಯಲ್ಲೇ ನಮ್ಮ ನಿಲುವು ಪ್ರಕಟಿಸುತ್ತೇವೆ.

ಜಿ.ಕರುಣಾಕರ ರೆಡ್ಡಿ, ಮಾಜಿ ಸಚಿವ---

ದಾವಣಗೆರೆ ಸಂಸದ ಸಿದ್ದೇಶ್ವರ ಫೋನ್ ಗೀನ್ ಗೆಲ್ಲಾ ಉತ್ತರ ಕೊಡಬೇಕಾಗಿಲ್ಲ. ಮಾತನಾಡುವ ಅವಶ್ಯಕತೆಯೂ ಇಲ್ಲ. ಗೌರವ ಕೊಡುವ ಕಾಲದಲ್ಲಿ ಕೊಟ್ಟಿದ್ದೇವೆ. ಈಗ ಅದೆಲ್ಲವೂ ಮುಗಿದು ಹೋಗಿದೆ. ಮಾತನಾಡುವುದು ಏನೂ ಉಳಿದಿಲ್ಲ. ಮಾತನಾಡುವ ಅವಶ್ಯಕತೆಯೂ ಇಲ್ಲ.

ಎಸ್.ಎ.ರವೀಂದ್ರನಾಥ, ಬಿಜೆಪಿ ಹಿರಿಯ ಮುಖಂಡ ............................ಸಂಸದ ಸಿದ್ದೇಶ್ವರರ ಕುಟುಂಬವನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಘೋಷಿಸಬೇಕು. ಅಭ್ಯರ್ಥಿ ಬದಲಾವಣೆ ಆಗಲೇಬೇಕು. ಮತ್ತೆ ಮೋದಿ ಪ್ರಧಾನಿ ಆಗಬೇಕು. ಕಾಂಗ್ರೆಸ್‌ಗೆ ಲಾಭ ಮಾಡುವುದಕ್ಕಲ್ಲ ನಮ್ಮ ಸಭೆ, ಹೋರಾಟಗಳು. ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬ ಮಾತಿಗೆ ನಮ್ಮ ಸಹಮತವಿದೆ. ಅದಕ್ಕೆ ನಾವೆಲ್ಲರೂ ಬದ್ಧರಿದ್ದೇವೆ.

ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ

...............