ಸಾರಾಂಶ
ರಾಣಿಬೆನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿರುವ ಕೋಳಿವಾಡ ಅಹಿಂದ ಸಮುದಾಯಗಳ ವಿರೋಧಿಯೇ ಹೊರತು ನಾವಲ್ಲ ಎಂದು ಬಿಜೆಪಿ ಮಾಜಿ ಶಾಸಕ ಮಾಜಿ ಶಾಸಕ ಅರುಣಕುಮಾರ ಪೂಜಾರ ತಿರುಗೇಟು ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಹಿಂದ ವಿರೋಧಿ ಎಂಬರ್ಥದಲ್ಲಿ ಹರಿಬಿಟ್ಟಿರುವ ವಿಷಯವಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಸ್ಪಷ್ಟಣೆ ನೀಡಿದ ಅವರು, ಎಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಎಂದರು.2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕೆ.ಬಿ.ಕೋಳಿವಾಡ ಅವರು ಪರಾಜಿತರಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಾಚಾಮಗೋಚರವಾಗಿ ನಿಂದಿಸಿದ್ದು ಅಹಿಂದ ವಿರೋಧಿಯಲ್ಲವೇ? ಬಿಜೆಪಿ ಆಡಳಿತದಲ್ಲಿ ಯಡಿಯೂರಪ್ಪನವರು ಹಿಂದುಳಿದ ಮಠಗಳನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ ಅವುಗಳಿಗೆ ಕೋಟ್ಯಂತರ ಅನುದಾನ ನೀಡಿದ್ದು ಅಹಿಂದ ವಿರೋಧವೇ? ಎಂದು ಪ್ರಶ್ನಿಸಿದರು.ಬಿಜೆಪಿ ಎಂದಿಗೂ ಅಹಿಂದ ವಿರೋಧಿಯಾಗಿಲ್ಲ. ಸಂವಿಧಾನ ರಚಿಸಿದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಅಪಾರ ಗೌರವವಿದೆ. ಅದೇ ಶಾಸಕ ಪ್ರಕಾಶ ಕೋಳಿವಾಡ ಸತತ ಎರಡು ವರ್ಷ ತಾಲೂಕು ಆಡಳಿತದ ವತಿಯಿಂದ ಜರುಗಿದ ಅಂಬೇಡ್ಕರ್ ಜಯಂತಿಗೆ ಗೈರು ಆಗುವ ಮೂಲಕ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದಾರೆ ಎಂದು ಹರಿಹಾಯ್ದರು.
ನಾನು ಶಾಸಕನಾಗಿದ್ದಾಗ ಕುಮಾರಪಟ್ಟಣಂನಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ, ಹಲಗೇರಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ, ಅಹಿಂದ ವರ್ಗಗಳ ಪರ ಅನೇಕ ಕೆಲಸ ಮಾಡಿರುವೆ. ಎಸ್‌ಟಿ/ಎಸ್‌ಸಿ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಎರಡೂ ಸಮಾಜದ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡಿದ್ದೆ ಎಂದು ಹೇಳಿದರು.ನಗರದ ವಿವಿಧ ಸರ್ಕಲ್‌ಗಳಿಗೆ ಮಹಾನ್ ನಾಯಕರುಗಳ ಹೆಸರಿಡುವ ಸಲುವಾಗಿ ಕರೆಯಲಾಗಿದ್ದ ನಗರಸಭೆ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಗೈರಾಗಿದ್ದರು ಎಂದು ಆರೋಪಿಸಿ ಬಿಜೆಪಿ ಅಹಿಂದ ವಿರೋಧಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗುತ್ತಿರುವುದು ಕಾಂಗ್ರೆಸ್ಸಿನ ನೀಚತನದ ಪರಮಾವಧಿ ಎಂದು ಪುಜಾಯ ಕಿಡಿಕಾರಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ನಗರಸಭಾ ಸದಸ್ಯರುಗಳಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಬುರಡಿಕಟ್ಟಿ, ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ರೂಪಾ ಚಿನ್ನಿಕಟ್ಟಿ, ಪ್ರಭಾವತಿ ತಿಳವಳ್ಳಿ, ಮುಖಂಡರುಗಳಾದ ಭಾರತಿ ಜಂಬಗಿ, ಕೆ.ಶಿವಲಿಂಗಪ್ಪ, ಚೋಳಪ್ಪ ಕಸವಾಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.