ಸಾಂಕ್ರಾಮಿಕ ರೋಗಗಳ ಪ್ರಕರಣ ಗಣನೀಯ ಇಳಿಕೆ!

| Published : Jun 27 2024, 01:04 AM IST

ಸಾಂಕ್ರಾಮಿಕ ರೋಗಗಳ ಪ್ರಕರಣ ಗಣನೀಯ ಇಳಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳು ಈ ಬಾರಿ ಗಣನೀಯವಾಗಿ ಇಳಿಕೆಯಾಗಿವೆ.

ರಾಮನಗರ: ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳು ಈ ಬಾರಿ ಗಣನೀಯವಾಗಿ ಇಳಿಕೆಯಾಗಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನಜಾಗೃತಿ, ಸ್ವಚ್ಚತೆಗೆ ಒತ್ತು ನೀಡುವ ಜೊತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡು ಕಾರಣ ಡೆಂಘೀ, ಮಲೇರಿಯಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳಿಂದ ಯಾವುದೇ ಸಾವು ಸಂಭವಿಸಿಲ್ಲ.

ಜಿಲ್ಲೆಯಲ್ಲಿ 2021 ಮತ್ತು 2022ನೇ ಸಾಲಿನಲ್ಲಿ ತಲಾ 2 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದರೆ, 2023ರಲ್ಲಿ ಇದೇ ಅವಧಿಗೆ 11 ಪ್ರಕರಣಗಳು ಇತ್ತು. ಈ ವರ್ಷದಲ್ಲಿ ಒಂದು ಪ್ರಕರಣವೂ ಪತ್ತೆಯಾಗಿಲ್ಲ.

2023ರ ವಿಧಾನಸಭಾ ಚುನಾವಣೆ ವೇಳೆ ಸ್ಟ್ರಾಂಗ್ ರೂಮ್ ನ ಭದ್ರತೆಗಾಗಿ ಸಿಆರ್ ಪಿಎಫ್ ನ 1300 ಸಿಬ್ಬಂದಿ ನಿಯೋಜನೆಗೊಂಡಿದ್ದರು. ಅವರೆಲ್ಲರ ರಕ್ತದ ಮಾದರಿ ಪರೀಕ್ಷಿಸಿದಾಗ 4 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಆನಂತರ ಬಿಹಾರ, ಜಾರ್ಖಂಡ್ , ಉತ್ತರ ಪ್ರದೇಶದಿಂದ ಬಂದಿದ್ದ 7 ಮಂದಿ ವಲಸೆ ಕಾರ್ಮಿಕರಲ್ಲಿಯೂ ಮಲೇರಿಯಾ ಕಂಡು ಬಂದಿತ್ತು. ಅವರೆಲ್ಲರು ರಾಮನಗರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾದರು.

44 ಡೆಂಘೀ ಪ್ರಕರಣಗಳು ಪತ್ತೆ :

ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಜೂನ್ 25ರವರೆಗೆ ಜಿಲ್ಲೆಯಲ್ಲಿ ಒಟ್ಟು 2395 ಜನರ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದ್ದು, 44 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ.

2021ರಲ್ಲಿ 406 ಜನರ ರಕ್ತದ ಮಾದರಿ ಪರೀಕ್ಷಿಸಿದಾಗ 41, 2022ರಲ್ಲಿ 2364 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಿದಾಗ 158 ಹಾಗೂ 2023ರಲ್ಲಿ 2395 ಜನರ ರಕ್ತದ ಮಾದರಿ ಪರೀಕ್ಷೆ ವೇಳೆ 128 ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿತ್ತು.

ಇನ್ನು ಚಿಕೂನ್ ಗುನ್ಯಾ ನಿಯಂತ್ರಣದಲ್ಲಿದ್ದು, ಈ ವರ್ಷ ಒಂದು ಪ್ರಕರಣವೂ ದಾಖಲಾಗಿಲ್ಲ. 2021ರಲ್ಲಿ 34, 2022ರಲ್ಲಿ 28 ಹಾಗೂ 2023ರಲ್ಲಿ 6 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದವು.

ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌!:

ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೀ, ಮಲೇರಿಯಾ ಪೀಡಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಗಳು ಕಾರ್ಯಾರಂಭಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದಿದ್ದರೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಅನ್ನು ತೆರೆಯಲಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಮಲೇರಿಯಾ, ಡೆಂಘೀ ಪ್ರಕರಣಗಳು ತೀವ್ರಗೊಳ್ಳುತ್ತವೆ. ಆರೋಗ್ಯ ಇಲಾಖೆ ಏಪ್ರಿಲ್‌ ನಿಂದಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ಪರಿಣಾಮ ರೋಗಗಳು ನಿಯಂತ್ರಣಕ್ಕೆ ಬಂದಿವೆ.

ಮನೆ ಮನೆ ಸರ್ವೆ - ಬುಧವಾರ ಡ್ರೈ ಡೇ :

ಡೆಂಘೀ, ಮಲೇರಿಯಾ ಮತ್ತಿತರ ರೋಗವಾಹಕ ಆಶ್ರಿತ ರೋಗಗಳ ತಡೆಯುವುದಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಜಾರಿಯಲ್ಲಿದೆ. ಈ ಪ್ರಕರಣಗಳು ಪತ್ತೆಯಾಗಬಹುದಾದ ಪ್ರದೇಶಕ್ಕೆ ತೆರಳಿ ಕಟ್ಟಡ ಸ್ಥಳ, ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಆಶಾ ಮತ್ತು ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಈ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಬುಧವಾರ ಡ್ರೈ ಡೇ (ಒಣ ದಿನ) ಆಚರಣೆಗೆ ಒತ್ತು ನೀಡಲಾಗುತ್ತಿದೆ. ಸೊಳ್ಳೆಗಳ ಉತ್ಪತ್ತಿಯ ಎಲ್ಲಾ ಮೂಲಗಳನ್ನು ನಾಶ ಪಡಿಸಲು ನೀರು ನಿಲ್ಲದಂತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡ್ರೈ ಡೇ ಆಚರಿಸುವಂತೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮತ್ತು ಗಂಬೂಸಿಯಾ ಮೀನಿನ ಮರಿಗಳನ್ನು ಸಾಕಾಣಿಕೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಕೆರೆ ಕಟ್ಟೆ, ಬಾವಿಗಳಲ್ಲಿ ಬಿಡಲಾಗಿದೆ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅನುಪಯುಕ್ತ ಟೈರು - ಟ್ಯೂಬ್ ಗಳನ್ನು ವಿಲೇವಾರಿ ಮಾಡಿಸಿದ್ದಾರೆ. ಅಲ್ಲದೆ ಗ್ರಾಪಂನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ - ಕಾಲೇಜು ಮಕ್ಕಳು, ಶಿಕ್ಷಕರಲ್ಲಿಯೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನಗರ ವ್ಯಾಪ್ತಿಯಲ್ಲಿರುವ ಬೆಸ್ಕಾಂ, ಪಿಡಬ್ಲ್ಯುಡಿ, ಆರ್‌ಟಿಓ, ನಗರಸಭೆ ಕಚೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಕಚೇರಿ ಸುತ್ತಮುತ್ತ ಸ್ವಚ್ಛತಾ, ಲಾರ್ವ ತೆರವು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ. ವಾರಕ್ಕೊಮ್ಮೆ ಈ ರೀತಿಯ ಅಭಿಯಾನ ನಡೆಯಬೇಕು ಮಾತ್ರವಲ್ಲದೆ ಮನೆ, ವಸತಿ ಸಮುಚ್ಚಯದಲ್ಲಿ ಈ ರೀತಿ ಡ್ರೈವ್‌ ನಡೆದರೆ ಡೆಂಘೀ, ಮಲೇರಿಯಾ ನಿಯಂತ್ರಣ ಸಾಧ್ಯವಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಬಾಕ್ಸ್ .............

ಸಾರ್ವಜನಿಕರಿಗೆ ಮುನ್ನೆಚ್ಚರಿಕೆಗಳು:

ಹವಾಮಾನ ಬದಲಾವಣೆಯಿಂದ ಸೊಳ್ಳೆ ವೃದ್ಧಿಯಾಗಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಮರಳಿ ಕಾಣಿಸಿಕೊಳ್ಳಬಹುದು. ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯ ಜತೆಗೆ ಜನರೂ ಮುನ್ನೆಚ್ಚರಿಕೆ ವಹಿಸಬೇಕು.

-ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ

-ಮನೆಯಲ್ಲಿ ಸೊಳ್ಳೆ ಪರದೆ ಅಳವಡಿಸಿ. ಆ ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ

-ಸೊಳ್ಳೆಗಳು ಒಳಬರದಂತೆ ಸಂಜೆಯಾಗುತ್ತಲೆ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಳ್ಳಿ.

-ದಿನಂಪ್ರತಿ ಸೋಂಕುನಿವಾರಕ ಬಳಸಿ ಮನೆಯ ನೆಲ ಒರಸಲು ಮರೆಯದಿರಿ.

-ಜ್ವರ ಲಕ್ಷಣ 4 ರಿಂದ 5 ದಿನಗಳ ಕಾಲ ಇದ್ದರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ.

ಕೋಟ್ ................

ರಾಮನಗರ ಜಿಲ್ಲೆಯಲ್ಲಿ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ಪ್ರಕರಣ ನಿಯಂತ್ರಣದಲ್ಲಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮನೆ ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗ ಬಂದರೂ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧ ದಾಸ್ತಾನು ಸಮರ್ಪಕವಾಗಿದ್ದು, ಬೆಡ್‌ಗಳ ಕೊರತೆ ಇಲ್ಲ.

- ಡಾ.ಶಶಿಧರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ರಾಮನಗರ

26ಕೆಆರ್ ಎಂಎನ್ 1,2,3.ಜೆಪಿಜಿ

1.ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆ ಸರ್ವೆ ಮಾಡುತ್ತಿರುವುದು.

2.ಡಾ.ಶಶಿಧರ್ ಮನೆ ಮನೆ ಭೇಟಿ ವೇಳೆ ಡ್ರಮ್ ನಲ್ಲಿ ಸಂಗ್ರಹಿಸಿದ್ದ ನೀರನ್ನು ಪರಿಕ್ಷೀಸುತ್ತಿರುವುದು.

3.ಡಾ.ಶಶಿಧರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ರಾಮನಗರ