ಸಿಲಿಕಾನ್ ಸಿಟಿ ವ್ಯಾಲಂಟೈನ್ಸ್ ಡೇ ಸಂಭ್ರಮಕ್ಕೆ ಸಜ್ಜು
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಪ್ರೇಮಿಗಳ ದಿನದ ಪ್ರತೀಕವಾಗಿರುವ ಕೆಂಪು ಗುಲಾಬಿ ಹೂವುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಫ್ಯಾಬ್) ಫೆ.1ರಿಂದ ಫೆ.13ರವರೆಗೆ ಒಂದು ಕೋಟಿ ಗುಲಾಬಿ ಹೂವುಗಳ ಮಾರಾಟವಾಗಿದೆ. ಇದರಲ್ಲಿ ಶೇ.30ರಿಂದ 40ರಷ್ಟು ಗುಲಾಬಿ ಹೂವುಗಳನ್ನು ಬೆಂಗಳೂರಿನ ವ್ಯಾಪಾರಿಗಳು ಖರೀದಿಸಿದ್ದಾರೆ. ಪ್ರೇಮ ನಿವೇದನೆಗೆ, ಪ್ರೀತಿ ಪಾತ್ರರ ಭೇಟಿಗೆ ಗುಲಾಬಿ ಹೂವು ಮತ್ತು ಹೂವಿನ ಗುಚ್ಛವೇ ಅಚ್ಚುಮೆಚ್ಚು. ಅದರ ಜೊತೆಗೆ ವಾರಾಂತ್ಯದಲ್ಲಿ ಪ್ರೇಮಿಗಳ ದಿನ ಬಂದಿರುವ ಕಾರಣ ಈ ಬಾರಿ ಗುಲಾಬಿ ಹೂವಿನ ಮಾರಾಟ ಜೋರಾಗಿದೆ.
ಮತ್ತೊಂದೆಡೆ ಪ್ರೇಮಿಗಳನ್ನು ಸ್ವಾಗತಿಸಲು ರೆಸ್ಟೋರೆಂಟ್, ಹೋಟೆಲ್‌ಗಳು ಕೂಡ ವಿಶೇಷವಾಗಿ ಸಜ್ಜುಗೊಂಡಿವೆ. ಜೋಡಿಗಳಿಗಾಗಿ ಕ್ಯಾಂಡಲ್ ಲೈಟ್ ಡಿನ್ನರ್ ಸೇರಿದಂತೆ ಬಗೆಬಗೆಯ ಭೋಜನ ವ್ಯವಸ್ಥೆಯನ್ನು ರೆಸ್ಟೋರೆಂಟ್‌ಗಳು ಮಾಡಿವೆ.ನಗರದ ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾನಗರ, ಜಯನಗರ ಸೇರಿದಂತೆ ನಗರ ಅನೇಕ ಪ್ರದೇಶಗಳಲ್ಲಿ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದಂತೆ ಹೂವಿನ ಅಂಗಡಿ, ಗಿಫ್ಟ್ ಸೆಂಟರ್‌ಗಳು ಹಾಗೂ ಮಾಲ್‌ಗಳಲ್ಲಿ ವಿಶೇಷ ರಿಯಾಯಿತಿಯ ಮಾರಾಟ ಜೋರಾಗಿದೆ. ಶಾಪಿಂಗ್ ಮಾಲ್‌ಗಳಲ್ಲಿ ಟ್ವಿನ್ನಿಂಗ್ ಡ್ರೆಸ್ ಹಾಗೂ ಕಸ್ಟಮೈಸ್ಡ್ ಗಿಫ್ಟ್‌ಗಳ ಖರೀದಿಯಲ್ಲಿ ಯುವಜನತೆ, ಪ್ರೇಮಿಗಳು ತೊಡಗಿದ್ದಾರೆ.
ವಾರಾಂತ್ಯದಲ್ಲಿ ಪ್ರೇಮಿಗಳ ದಿನ ಬಂದಿರುವುದರಿಂದ ಪ್ರೇಮಿಗಳ ಪಾಲಿಗೆ ವರವಾಗಿ ಪರಿಣಮಿಸಿದೆ. ಜೊತೆಯಾಗಿ ಹೆಚ್ಚು ಸಮಯ ಕಾಲ ಕಳೆಯಲು ಅವಕಾಶ ಸಿಕ್ಕಂತಾಗಿದೆ.ಹೂವು ಮಾರಾಟದಿಂದ ₹ 17 ಕೋಟಿಗೂ ಅಧಿಕ ವಹಿವಾಟುಗುಲಾಬಿ ಹೂವು ಮಾರಾಟದ ಕುರಿತು ಮಾಹಿತಿ ಹಂಚಿಕೊಂಡಿರುವ ಐಫ್ಯಾಬ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿಶ್ವನಾಥ್, ಕಳೆದ ಒಂದು ವಾರದಿಂದ ಗುಲಾಬಿ ಹೂವುಗಳಿಗೆ ಬೇಡಿಕೆ ಚೆನ್ನಾಗಿದೆ. ದೇಶದ ಅನೇಕ ಮಹಾನಗರಗಳಿಗೆ ಹೂವುಗಳು ಮಾರಾಟವಾಗಿವೆ. 1 ಕೋಟಿ ಹೂವುಗಳ ಮಾರಾಟದಿಂದ 17 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷ ಸುಮಾರು 80 ಲಕ್ಷ ಹೂವುಗಳು ಮಾರಾಟವಾಗಿದ್ದವು. ರೈತರಿಗೂ ಶೇ.10ರಿಂದ 15ರಷ್ಟು ಹೆಚ್ಚುವರಿ ಆದಾಯ ಬಂದಿದೆ ಎಂದು ತಿಳಿಸಿದರು.
