ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿಗಿಣಿಗೇರಾ ಮೆಹಬೂಬ್‍ನಗರ ರೈಲ್ವೆ ಲೈನ್ ಕಾಮಗಾರಿ ಸಿಂಧನೂರುವರೆಗೆ ಪೂರ್ಣಗೊಂಡಿದೆ. ಡಿ.15ಕ್ಕೆ ಸಿಂಧನೂರಿಗೆ ರೈಲು ಸಂಚಾರ ಮತ್ತು ಗದಗ ವಾಡಿ ಮಾರ್ಗದಲ್ಲಿ ಕುಷ್ಟಗಿ ಪಟ್ಟಣಕ್ಕೆ ಜನೇವರಿಯಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ರಿಸರ್ವೇಶನ್ ಸೌಲಭ್ಯ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಹತ್ತಾರು ರೀತಿಯ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಿಷ್ಕಿಂಧೆ ಪ್ರದೇಶವಾಗಿರುವ ಗಂಗಾವತಿಯಿಂದ ಅಯೋಧ್ಯೆವರೆಗೂ ನೇರ ರೈಲು ಸಂಚಾರ ಪ್ರಾರಂಭವಾಗುವ ವಿಶ್ವಾಸವಿದೆ ಎಂದು ಸಂಸದರು ಹೇಳಿದರು.ಕೊಪ್ಪಳ ಲೋಕಸಭೆ ಕ್ಷೇತ್ರ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಿಶೇಷವಾಗಿ ಜಿಲ್ಲೆಯ ವಾಣಿಜ್ಯ ನಗರವಾಗಿರುವ ಗಂಗಾವತಿಯಲ್ಲಿ ರೈಲ್ವೆ ಸಂಚಾರ, ಕೇಂದ್ರೀಯ ವಿದ್ಯಾಲಯ, ಅಮೃತ ಸಿಟಿ ಯೋಜನೆ ಸೇರಿ ಇನ್ನಿತರ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ಸಿಂಧನೂರಿನಲ್ಲೂ ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗಲಿದೆ. ರೈಲು ಸಂಚಾರ ಡಿಸೆಂಬರ್‌ನಿಂನಿಂದ ಪ್ರಾರಂಭವಾಗಲಿದೆ. ಅದೇ ರೀತಿ ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ರೈಲು ಸಂಚಾರದಿಂದ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಫ್ಲೈ ಓವರ್ ಮತ್ತು ಅಂಡರ್ ಪಾಸ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.ಕೊಪ್ಪಳದಿಂದ ಕುಷ್ಟಗಿಗೆ ಹೋಗುವ ಮಾರ್ಗದ ಫ್ಲೈ ಓವರ್ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗಿಣಿಗೇರಿ ಬಲಿ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಮನ್ನಣೆ ನೀಡುತ್ತಿದ್ದಾರೆ. ಜನರ ಬೇಡಿಕೆಯನ್ನು ನಾನು ಈಡೇರಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಗಂಗಾವತಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಗಂಗಾವತಿಗೆ ಬರುವ ಬೆಂಗಳೂರು ರೈಲಿನಲ್ಲಿ ನೀರಿನ ಕೊರತೆ ಬಗ್ಗೆ ದೂರುಗಳು ಬರುತ್ತಿದ್ದು, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಈ ಸಂದರ್ಭದಲ್ಲಿ ರೈಲ್ವೆ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಲಯದ ಅಧಿಕಾರಿ ಅಜಯಕುಮಾರಸಿಂಗ್, ಮುಖ್ಯ ಅಭಿಯಂತರ ವಿಜಯಕುಮಾರ, ಪಿಆರ್‌ಒ ಪ್ರಾಣೇಶ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ಬಿಜೆಪಿ ಯುವ ಮುಖಂಡ ಎಚ್.ಎಂ. ವಿರೂಪಾಕ್ಷಸ್ವಾಮಿ, ನಗರಸಭೆ ಸದಸ್ಯ ಉಮೇಶ ಸಿಂಗನಾಳ, ವಾಸುದೇವ ನವಲಿ, ಜೋಗದ ಹನುಮಂತಪ್ಪ ನಾಯಕ, ಬಿಜೆಪಿ ಅಧ್ಯಕ್ಷ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಸಂತೋಷ ಕೆಲೋಜಿ, ರಾಘವೇಂದ್ರ ಶೆಟ್ಟಿ ಇದ್ದರು.