ಗುಡಿಸಲು ನಿವಾಸಿಗಳು, ಬಾಡಿಗೆದಾರರು ‘ಗಣತಿ’ಗಿಲ್ಲ!

| Published : Oct 06 2025, 01:00 AM IST

ಸಾರಾಂಶ

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಧಾವಂತದಲ್ಲಿ ಅರೆಬರೆ ಆಗುತ್ತಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಭಾರೀ ವಿರೋಧದ ಮಧ್ಯೆಯೂ ‘ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ’ ಆರಂಭಿಸಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಧಾವಂತದಲ್ಲಿ ಅರೆಬರೆ ಆಗುತ್ತಿದೆ!

ಹೆಸ್ಕಾಂ ಸಿಬ್ಬಂದಿ ಮನೆ ಬಾಗಿಲಿಗೆ ಅಂಟಿಸಿರುವ ವಿದ್ಯುತ್‌ ಮೀಟರಿನ ಆರ್‌ಆರ್‌ ನಂಬರ್‌ ಲೇಬಲ್‌ ಬೆನ್ನತ್ತಿ ಸಮೀಕ್ಷೆ ಮಾಡುತ್ತಿರುವ ನಿಯೋಜಿತ ಸಿಬ್ಬಂದಿ, ಅದೇ ಮನೆಯ ಮೇಲಿನ ಬಾಡಿಗೆದಾರರು ಮತ್ತು ವಿದ್ಯುತ್ ಸಂಪರ್ಕವಿಲ್ಲದ ಗುಡಿಸಲು ನಿವಾಸಿಗಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಹಾಗಾಗಿ, ಅಪಾರ ಸಂಖ್ಯೆಯ ಮನೆಗಳು ಮತ್ತು ಜನರು ಈ ಸಮೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ.

ಸೆಪ್ಟಂಬರ್ 22ರಿಂದ ಆರಂಭವಾಗಿರುವ ಈ ಸಮೀಕ್ಷೆ ಅಕ್ಟೋಬರ್‌ 7ಕ್ಕೆ ಕೊನೆಗೊಳ್ಳಲಿದೆ. ಲೇಬಲ್‌ ಅಂಟಿಸಿದ ಮನೆಗಳು ಮಾತ್ರ ಗಣತಿದಾರರ ಪಟ್ಟಿಯಲ್ಲಿವೆ. ಅವುಗಳನ್ನು ಅವರು ಸಮೀಕ್ಷೆಗೆ ಒಳಪಡಿಸುತ್ತಿದ್ದು, ಅದೇ ಮನೆಯ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಆಗದಿರುವ ಸದಸ್ಯರನ್ನು (ಹೊಸದಾಗಿ ಬಂದ ಸೊಸೆ, ವರ್ಗಾವಣೆಯಾಗಿ ಬಂದ ಮಗ) ಸಹ ಗಣತಿ ಪಟ್ಟಿಯಲ್ಲಿ ಸೇರಿಸುತ್ತಿಲ್ಲ. ಕಾರಣ ಕೇಳಿದರೆ, ಆಧಾರ್‌ ನಂಬರ್‌ ಸೇರಿಸುವಲ್ಲಿ ಸರ್ವರ್‌ ಸಮಸ್ಯೆ ಆಗುತ್ತಿದೆ ಎನ್ನುತ್ತಿದ್ದಾರೆ.

ಹೊರಗುಳಿವ ಬಾಡಿಗೆದಾರರು:

ಹುಬ್ಬಳ್ಳಿ ಭೈರಿದೇವಕೊಪ್ಪ ಪ್ರದೇಶ ವ್ಯಾಪ್ತಿಯ ವೀರಸಂಗೊಳ್ಳಿ ರಾಯಣ್ಣ ನಗರದ ಮುಖ್ಯ ರಸ್ತೆಯಲ್ಲಿನ ಎಫ್‌-144 ಮನೆಯ ಸಮೀಕ್ಷೆ ವೇಳೆ, ಅದೇ ಮನೆಯ ಮೊದಲ ಅಂತಸ್ತಿನಲ್ಲಿ ಇರುವ ಎರಡು ಕುಟುಂಬಗಳ ಗಣತಿ ಮಾಡಲಿಲ್ಲ. ಅದಕ್ಕೆ ಸಮೀಕ್ಷೆಗೆ ಬಂದ ಸಿಬ್ಬಂದಿ ಕೊಡುವ ಕಾರಣ, ‘ಆ ಮನೆಗಳಿಗೆ ಹೆಸ್ಕಾಂ ಸಿಬ್ಬಂದಿ ಆರ್‌.ಆರ್‌. ನಂಬರ್‌ ಲೇಬಲ್‌ ಅಂಟಿಸಿಲ್ಲ. ಹಾಗಾಗಿ ಆ ಮನೆಗಳು ನಮ್ಮ ಪಟ್ಟಿಯಲ್ಲಿ ಇಲ್ಲ’ ಎನ್ನುವುದು.

ಮಹಾನಗರ ಪಾಲಿಕೆ ನೌಕರ ಮೌನೇಶ್‌ ಜಾಲಿಹಾಳ ಅವರ ನೇತೃತ್ವದಲ್ಲಿ ಮೂವರು ಸಿಬ್ಬಂದಿಯನ್ನು ಈ ಪ್ರದೇಶದ ಸಮೀಕ್ಷೆಗೆ ನೇಮಿಸಲಾಗಿದೆ. ಇವರಿಗೆ 128 ಮನೆಗಳ ಸಮೀಕ್ಷೆ ವಹಿಸಲಾಗಿದೆ. ಅಚ್ಚರಿಯೆಂದರೆ ಸುಮಾರು 90 ಮನೆಗಳಲ್ಲಿ ಬಾಡಿಗೆದಾರರು ವಾಸವಾಗಿದ್ದು, ಆ ಕುಟುಂಬಗಳು ಇವರ ಪಟ್ಟಿಯಲ್ಲಿ ಇಲ್ಲ. ಅಂದರೆ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ಈ ಸಮೀಕ್ಷೆಯಿಂದ ಹೊರಗುಳಿದಿವೆ.

ಈ ಬಾಡಿಗೆದಾರರು ನಮ್ಮ ಮನೆಗೂ ಗಣತಿಗೆ ಬನ್ನಿ ಎಂದು ಕರೆದರೂ ಈ ತಂಡ ಹೋಗುವುದಿಲ್ಲ. ಕಾರಣ ‘ಮಂಗಳವಾರದ (ಅ.7) ಒಳಗಾಗಿ ನಮಗೆ ವಹಿಸಲಾದ 128 ಮನೆಗಳ ಗಣತಿ ಪೂರ್ಣಗೊಳಿಸಬೇಕಿದೆ. ತಪ್ಪಿದರೆ ದಂಡ ಬೀಳುತ್ತದೆ. ಮೊದಲು ನಮಗೆ ವಹಿಸಿದ ಕಾರ್ಯ ನಿರ್ವಹಿಸುತ್ತೇವೆ. ಉಳಿದದ್ದು, ಮುಂದೆ ಅಧಿಕಾರಿಗಳು ಏನು ಹೇಳುತ್ತಾರೋ ನೋಡುತ್ತೇವೆ’ ಎಂದು ತಮ್ಮ ಧಾವಂತದ ಅಸಹಾಯಕತೆ ವ್ಯಕ್ತಪಡಿಸಿದರು.

ಗ್ಯಾರಂಟಿಯೂ ಇಲ್ಲ, ಗಣತಿಯೂ ಇಲ್ಲ:

ಇದೇ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಕಳೆದ 15 ವರ್ಷಗಳಿಂದ ಈರವ್ವ ಛಲವಾದಿ ಎಂಬ ವೃದ್ಧೆಯ ಕುಟುಂಬ ಗುಡಿಸಲು ಕಟ್ಟಿಕೊಂಡು ವಾಸವಾಗಿದೆ. ವೃದ್ಧೆ ಈರವ್ವ ಸೇರಿದಂತೆ ನಾಲ್ವರು ಹೆಣ್ಣು ಮಕ್ಕಳು ಕಸ-ಮುಸುರೆ ತಿಕ್ಕುವ ಕೆಲಸ ಮಾಡುತ್ತಿದ್ದರೆ, ಯುವಕ ಗಾರೆ ಕೆಲಸಕ್ಕೆ ಹೋಗುತ್ತಿದ್ದಾನೆ. ಇದು ಅಕ್ರಮ ಗುಡಿಸಲು ಎನ್ನುವ ಕಾರಣಕ್ಕೆ ಇದಕ್ಕೆ ವಿದ್ಯುತ್‌ ಸಂಪರ್ಕ ಇಲ್ಲ. ಹಾಗಾಗಿ, ಹೆಸ್ಕಾಂ ಸಿಬ್ಬಂದಿ ಈ ಗುಡಿಸಲಿಗೆ ಆರ್‌.ಆರ್‌. ನಂಬರಿನ ಲೇಬಲ್‌ ಅಂಟಿಸಿಲ್ಲ. ಲೇಬಲ್‌ ಇಲ್ಲ ಎನ್ನುವ ಕಾರಣಕ್ಕೆ ಸಮೀಕ್ಷೆದಾರರು ಈ ಗುಡಿಸಲಿನತ್ತ ಸುಳಿಯುತ್ತಿಲ್ಲ. ಈ ಐದೂ ಜನ ಕಡು ಬಡವರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಇಂಥ ಎಷ್ಟೋ ಕುಟುಂಬಗಳು ಈ ಸಮೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ ಎನ್ನುವುದು ಅಷ್ಟೇ ಸತ್ಯ.

ಈ ಅನಕ್ಷರಸ್ಥ ನತದೃಷ್ಟರಿಗೆ ಮತದಾರ ಚೀಟಿ ಮಾತ್ರ ಇವೆ. ಪ್ರತಿ ಚುನಾವಣೆ ವೇಳೆ ಇವರನ್ನು ಕರೆದೊಯ್ದು ಓಟು ಹಾಕಿಸಿಕೊಳ್ಳಲಾಗುತ್ತಿದೆ. ಆದರೆ, ಆಧಾರ್ ಕಾರ್ಡ್‌, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ರಹವಾಸಿ ಪತ್ರ, ಆದಾಯ ಪ್ರಮಾಣಪತ್ರ ಏನೊಂದೂ ಇವರಲ್ಲಿಲ್ಲ. ಹಾಗಾಗಿ, ಕಾಂಗ್ರೆಸ್‌ ಸರ್ಕಾರದ ಯಾವ ಭಾಗ್ಯಗಳು, ಗ್ಯಾರಂಟಿಗಳು ಈವರೆಗೆ ಇವರಿಗೆ ಲಭಿಸಿಲ್ಲ. ಈಗ ಸಮೀಕ್ಷೆ ಒಳಗೂ ಬರುತ್ತಿಲ್ಲ.

ನಿಗದಿತ ಅವಧಿಯಲ್ಲಿ ಗೊತ್ತುಪಡಿಸಿದ ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಧಾವಂತದಲ್ಲಿ ಇರುವ ಗಣತಿದಾರರು ತಮ್ಮ ವ್ಯಾಪ್ತಿಯ ಬಾಡಿಗೆದಾರರು ಮತ್ತು ಗುಡಿಸಲು ನಿವಾಸಿಗಳನ್ನು ಪರಿಗಣಿಸುತ್ತಿಲ್ಲ. ಸರ್ಕಾರ ಕೂಡ ಬಾಡಿಗೆದಾರರು ಮತ್ತು ಗುಡಿಸಲು ನಿವಾಸಿಗಳ ಬಗ್ಗೆ ಗಣತಿದಾರರಿಗೆ ಯಾವುದೇ ನಿರ್ದಿಷ್ಟ ಸಲಹೆ ಸೂಚನೆ ನೀಡುತ್ತಿಲ್ಲ. ಹಾಗಾಗಿ, ಈ ಸಮೀಕ್ಷೆ ಅರೆಬರೆ ಆಗುತ್ತಿದೆ ಮತ್ತು ಅಪಾರ ಸಂಖ್ಯೆಯ ಜನರು ಸಮೀಕ್ಷೆಯಿಂದ ಹೊರಗೆ ಉಳಿಯುತ್ತಿದ್ದಾರೆ.

---

ಕೋಟ್‌...

ನನ್ನನ್ನು 20 ಗಣತಿ ತಂಡಗಳ ಮೇಲೆ ಸೂಪರ್‌ವೈಸರ್‌ ಎಂದು ನೇಮಿಸಲಾಗಿದೆ. ತಾಂತ್ರಿಕ ಸಮಸ್ಯೆ ನಿವಾರಿಸುವುದಷ್ಟೇ ನನ್ನ ಕೆಲಸ. ಬಾಡಿಗೆದಾರರು ಮತ್ತು ಗುಡಿಸಲು ನಿವಾಸಿಗಳ ಗಣತಿಯನ್ನು ಆಯಾ ತಂಡಗಳೇ ಸ್ವ-ಇಚ್ಛೆಯಿಂದ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ನಿರ್ದೇಶನ ಇಲ್ಲ.

-ಸಾದಿಯಾ ಪೀರಜಾದೆ, ಇಇ, ಮಹಾನಗರ ಪಾಲಿಕೆ.