ಸಾರಾಂಶ
ಧಾರವಾಡ:
ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಜಗತ್ತಿನಾದ್ಯಂತ ದೊಡ್ಡ ಕ್ರಾಂತಿಯನ್ನುಂಟು ಮಾಡುತ್ತಿದ್ದು, ಇದರ ಪರಿಣಾಮವಾಗಿ ಮುಖ್ಯ ವಾಹಿನಿಯ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿವೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.ಕರ್ನಾಟಕ ವಿವಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಜರ್ನಲಿಸ್ಟ್ ಗಿಲ್ಡ್ ಜಂಟಿಯಾಗಿ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಸಾಮಾಜಿಕ ಮಾಧ್ಯಮದ ಪರಿಣಾಮಗಳು ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯದ ಸಾಮಾನ್ಯ ಸಂಗತಿಗಳು ಮಾತ್ರವಲ್ಲದೇ ಮುಖ್ಯ ವಾಹಿನಿಯ ಮಾಧ್ಯಮಗಳು ಮಾಡದೇ ಇರುವ ರೈತರ ಸಮಸ್ಯೆ, ನೀಟ್, ಎಲೆಕ್ಟ್ರೋ ಬಾಂಡ್ ಸೇರಿದಂತೆ ಸಮಾಜದಲ್ಲಿನ ಅನೇಕ ಸಮಸ್ಯೆಗಳನ್ನು ಸಾಮಾಜಿಕ ಮಾಧ್ಯಮಗಳು ಬಯಲಿಗೆಳೆದಿವೆ. ಆದರೆ, ಕೆಲವು ಸಂದರ್ಭಗಳಲ್ಲಿ ಈ ಮಾಧ್ಯಮಗಳನ್ನು ದುರುಪಯೋಗ ಸಹ ಪಡಿಸಿಕೊಂಡಿರುವ ಉದಾಹರಣೆಗಳೂ ಇದ್ದು ಯುವ ಪತ್ರಕರ್ತರು ಈ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಭವಿಷ್ಯದಲ್ಲಿ ಯಶಸ್ವಿ ಆಗಬಹುದು ಎಂದು ಸಲಹೆ ನೀಡದರು.ಸಮಾಜ ಸೇವೆಗೆ ಪತ್ರಿಕಾರಂಗ ಅತ್ಯುತ್ತಮ ದಾರಿ. ಮಾನವೀಯ ಕಳಕಳಿ ಹಾಗೂ ಅನ್ಯಾಯದ ವಿರುದ್ಧ ಬರೆಯುವವನು ನಿಜವಾದ ಪತ್ರಕರ್ತ. ಜನಪರ ಕಾಳಜಿ ಹೊಂದಿದ ಪತ್ರಕರ್ತನಿಗೆ ಸದಾ ಗೆಲುವಿರುತ್ತದೆ. ಹೀಗಾಗಿ ಪತ್ರಿಕಾರಂಗವನ್ನು ಸಮಾಜದ ಕಾವಲು ನಾಯಿ ಎಂದು ಕರೆಯಲಾಗುತ್ತದೆ ಎಂದ ಅವರು, ಸಮಾಜದ ಬೇರೆ ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಿಕೋದ್ಯಮ ವಿಭಿನ್ನ. ಬೇರೆ ಉದ್ಯೋಗಗಳಂತೆ ಸಂಪಾದನೆ ಬದಲು ಸಮಾಜದ ಸಮಸ್ಯೆಗಳಿಗೆ ಪತ್ರಿಕೋದ್ಯಮ ತುಡಿಯುತ್ತದೆ ಎಂದರು.
ಧಾರವಾಡ ಜರ್ನಲಿಸ್ಟ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ ಹೊಂಗಲ ಮಾತನಾಡಿ, ಸಾಮಾಜಿಕ ಮಾಧ್ಯಮಗಳಿಂದ ಆಗಿರುವ ಉಪಯೋಗದಂತೆ ಸಮಾಜದ ಮೇಲೆ ದುಷ್ಪರಿಣಾಮಗಳು ಇವೆ. ಕೈಯಲ್ಲೊಂದು ಮೊಬೈಲ್ ಹಿಡಿದು ನಕಲಿ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ಅವರ ಕಡಿವಾಣಕ್ಕೆ ಕಠಿಣ ಕಾನೂನುಗಳು ಜಾರಿಯಾಗಬೇಕಿವೆ. ಜಗತ್ತಿನಲ್ಲಿ ಬದಲಾವಣೆ ನಿರಂತರವಾಗಿದ್ದು, ಮಾಧ್ಯಮ ಕ್ಷೇತ್ರ ಹೊರತಾಗಿಲ್ಲ. ಬದಲಾವಣೆಯನ್ನು ಅಳವಡಿಸಿಕೊಂಡು ಪತ್ರಕರ್ತರು ಬೆಳೆಯಬೇಕೆಂದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ. ಚಂದುನವರ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆದಿತ್ಯ ಯಲಿಗಾರ, ಮಡಿವಾಳೆಪ್ಪ, ವಿನಾಯಕ ಹಾಗೂ ಮಾಳೇಶ ಸಾಮಾಜಿಕ ಮಾಧ್ಯಮದ ಕುರಿತಾಗಿ ಪ್ರಶ್ನೆಗಳನ್ನು ಕೇಳಿದರು. ನೇತ್ರಾ ಎನ್.ವಿ. ವಚನ ಗೀತೆ ಪ್ರಸ್ತುತ ಪಡಿಸಿದರು. ಪ್ರಾಧ್ಯಾಪಕ ಡಾ. ಸಂಜಯಕುಮಾರ ಮಾಲಗತ್ತಿ ವಂದಿಸಿದರು.