ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಖಿಲ ಭಾರತ ಸುಸಂಘಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಸಂಶೋಧನಾ ಪ್ರಾಯೋಜನೆ ಹಾಗೂ ಕೇಂದ್ರದ ಸಹಯೋಗದೊಂದಿಗೆ ಮಣ್ಣು ಪರೀಕ್ಷೆ ಬೆಳೆ ಸ್ಪಂದನೆ ವಿಧಾನದ ಮೂಲಕ ರಸ ಗೊಬ್ಬರಗಳ ಶಿಫಾರಸ್ಸು ಕುರಿತ ತರಬೇತಿ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ.ಹನುಮಂತರಾಯ ಮಾತನಾಡಿ, ರೈತರು ಮಣ್ಣನ್ನು ಪರೀಕ್ಷಿಸಿ ಬೆಳೆ ಬೆಳೆಯುವಂತೆ ಮಾರ್ಗದರ್ಶನ ನೀಡಿದರು.ಜಿಕೆವಿಕೆ ಎಸ್‌ಟಿಸಿಆರ್ ಪ್ರಯೋಜನೆ ಮುಖ್ಯಸ್ಥ ಡಾ.ಆರ್.ಕೃಷ್ಣಮೂರ್ತಿ ಮಾತನಾಡಿ, ಮಣ್ಣು ಪರೀಕ್ಷೆಗನುಗುಣವಾಗಿ ರಸಗೊಬ್ಬರಗಳನ್ನು ಬಳಸಿದ್ದಲ್ಲಿ ಅನಾವಶ್ಯಕವಾಗಿ ರಸಗೊಬ್ಬರ ಬಳಕೆ ಮಾಡುವುದನ್ನು ತಪ್ಪಿಸಲು ಮಣ್ಣು ಪರೀಕ್ಷೆ ಅನುಕೂಲವಾಗುತ್ತದೆ. ಬೆಂ.ಗ್ರಾ. ಜಿಲ್ಲೆಯ ಮಣ್ಣು ಮಾದರಿಗಳು ಬಹುತೇಕ ಆಮ್ಲೀಯತೆಯಿಂದ ಕೂಡಿದ್ದು, ಆಮ್ಲ ಮಣ್ಣನ್ನು ಸುಧಾರಿಸಲು ಮಣ್ಣು ಪರೀಕ್ಷೆಗೆ ಅನುಗುಣವಾಗಿ ಎಕರೆಗೆ ಸುಮಾರು 250 ಕೆಜಿ ಕೃಷಿ ಸುಣ್ಣ ಬಳಸಬಹುದು. ಜಿಲ್ಲೆಯ ಮಣ್ಣುಗಳು ಕಡಿಮೆ ಪ್ರಮಾಣದ ಸಾವಯವ ಇಂಗಾಲ ಹೊಂದಿವೆ. ಸಸ್ಯ ಪೋಷಕಾಂಶಗಳಾದ ಸಾರಜನಕ, ಗಂಧಕ, ಸತು ಹಾಗೂ ಬೋರಾನ್ ಜಿಲ್ಲೆಯ ಮಣ್ಣುಗಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಕಾಪಾಡಿಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಡಾ.ಪಿ.ವೀರನಾಗಪ್ಪ ಮಾತನಾಡಿ, 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ಪರೀಕ್ಷೆಯ ಫಲಿತಾಂಶಕ್ಕನುಗುವಾಗಿ ವಿವಿಧ ಬೆಳೆಗಳನ್ನು ಬೆಳೆಯಬೇಕು. ಮಾಗು ಉಳುಮೆ, ಮಣ್ಣು, ನೀರು ಸಂರಕ್ಷಣಾ ಕ್ರಮಗಳಾದ ಕಂದಕ ಹಾಗೂ ಬದುಗಳ ನಿರ್ಮಾಣ, ಬೆಳೆ ಪರಿವರ್ತನೆ, ಮಿಶ್ರ ಬೆಳೆ ಪದ್ಧತಿ, ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು, ಸಾವಯವ, ಜೈವಿಕ, ಹಸಿರೆಲೆ ಗೊಬ್ಬರ ಬಳಕೆ, ಬೀಜೋಪಚಾರಗಳಿಂದ ಸುಸ್ಥಿರ ಉತ್ಪಾದನೆ ಪಡೆಯಬಹುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಭಾಗವಹಿಸಿದ್ದರು.
19ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಪರೀಕ್ಷೆ ಬೆಳೆ ಸ್ಪಂದನೆ ವಿಧಾನದ ಮೂಲಕ ರಸಗೊಬ್ಬರಗಳ ಶಿಫಾರಸು ತರಬೇತಿ ನಡೆಯಿತು.