ಸಾರಾಂಶ
ಮಂಜುನಾಥ ಸಾಯೀಮನೆ
ಶಿರಸಿ:ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸಲು ಹೆಸ್ಕಾಂ ಚಿಂತನೆ ನಡೆಸಿದೆ. ಈ ಕುರಿತಂತೆ ಸಾಧ್ಯಾ-ಅಸಾಧ್ಯತೆ ಕುರಿತು ತಳ ಮಟ್ಟದ ಸಮೀಕ್ಷೆ ಆರಂಭಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕೃಷಿ ಕಾರ್ಯಗಳಿಗೆ ಕೃಷಿ ಪಂಪ್ ಅಳವಡಿಸಿಕೊಂಡಿದ್ದಾರೆ. ಹೆಸ್ಕಾಂ ಅನುಮತಿ ಪಡೆಯದೇ ವಿದ್ಯುತ್ ಕಂಬಗಳಿಂದ ಅಕ್ರಮವಾಗಿ ತಂತಿ ಜೋಡಿಸಿಕೊಂಡು ವಿದ್ಯುತ್ ಬಳಸುವವರ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ೨೦೧೪ರ ವೇಳೆ ಅಂದಿನ ರಾಜ್ಯ ಸರ್ಕಾರ ರೈತರು ಅಕ್ರಮವಾಗಿ ಅಳವಡಿಸಿಕೊಂಡ ಕೃಷಿ ಪಂಪ್‌ಸೆಟ್‌ಗಳ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಿತ್ತು. ಪ್ರತಿ ಪಂಪ್‌ಸೆಟ್‌ಗೆ ₹ ೧೦ ಸಾವಿರ ದಂಡದ ಜತೆ ಪ್ರತಿ ಎಚ್‌ಪಿಹೆ ₹ ೧ ಸಾವಿರದಂತೆ ರೈತರಿಂದ ಹಣ ಪಡೆದು ವ್ಯವಸ್ಥಿತವಾಗಿ ವಿದ್ಯುತ್ ಮಾರ್ಗ ಅಳವಡಿಸಿ ಈ ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ವಿದ್ಯುತ್ ಮಾರ್ಗ, ಕಂಬ, ವಿದ್ಯುತ್ ಪರಿವರ್ತಕಗಳಿಗೆ ತಗಲುವ ವೆಚ್ಚವೂ ಅಧಿಕವಾಗಿದ್ದ ಕಾರಣ ಈ ಯತ್ನ ಇನ್ನೂ ಪೂರ್ಣಗೊಂಡಿಲ್ಲ.ಶಿರಸಿ ಹೆಸ್ಕಾಂ ವಿಭಾಗ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮದಲ್ಲಿ ಸಂಪರ್ಕ ಪಡೆದ ಕೃಷಿ ಪಂಪ್‌ಸೆಟ್‌ಗಳ ಸಂಖ್ಯೆಯೇ ೨೩೨೯ರಷ್ಟಿದೆ. ಶಿರಸಿ ತಾಲೂಕಿನಲ್ಲಿ ೮೭೧, ಸಿದ್ದಾಪುರ ೧೦೪೦, ಯಲ್ಲಾಪುರ ೧೭೯, ಮುಂಡಗೋಡಿನಲ್ಲಿ ೨೩೯ರಷ್ಟು ರೈತರ ಪಂಪ್‌ಸೆಟ್‌ಗೆ ಅಕ್ರಮ-ಸಕ್ರಮದಲ್ಲಿ ಸಮರ್ಪಕವಾಗಿ ಕಂಬ ಜೋಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ. ಆದರೆ, ಈ ಪಂಪ್‌ಸೆಟ್‌ಗೆ ಸುರಕ್ಷಿತ ವಿದ್ಯುತ್ ವ್ಯವಸ್ಥೆ ಮಾಡುವುದೂ ಸವಾಲಿನ ಕೆಲಸವಾಗಿದೆ. ವಿದ್ಯುತ್ ಪರಿವರ್ತಕದಿಂದ ದೂರದವರೆಗೂ ಹಲವು ರೈತರು ವಿದ್ಯುತ್ ವೈರ್ ಹಾಕಿಕೊಂಡಿದ್ದಾರೆ. ಇನ್ನು ಕೆಲ ಪಂಪ್‌ಸೆಟ್‌ಗಳಿಗೆ ಬೇರೆಯವರ ಹೊಲದ ಮೂಲಕ ವಿದ್ಯುತ್ ವೈರ್ ಹಾಕಿಕೊಂಡಿದ್ದು ಆ ಹೊಲಗಳಲ್ಲಿ ಕಂಬ ನೆಟ್ಟು ಹೊಸ ಮಾರ್ಗ ನಿರ್ಮಿಸಲು ಸಾಧ್ಯವಿಲ್ಲದಂತಾಗಿದೆ.
ನೆರವಾಗಲಿದೆಯೇ ಪಿಎಂ ಕುಸುಮ?:ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸುವ ಪ್ರಧಾನಮಂತ್ರಿ ಕುಸುಮ ಯೋಜನೆಯ ಲಾಭ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಅನ್ವಯ ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ಅಳವಡಿಸಲು ತಗಲುವ ವೆಚ್ಚದ ಶೇ. ೩೦ರಷ್ಟು ಕೇಂದ್ರ ಸರ್ಕಾರ ಭರಿಸುತ್ತದೆ. ಶೇ. ೫೦ರಷ್ಟು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಪಂಪ್‌ಗೆ ಸೋಲಾರ್ ಅಳವಡಿಕೆಯ ಸಾಧ್ಯಾ ಸಾಧ್ಯತೆ ಕುರಿತು ಪರಿಶೀಲಿಸಲು ರಾಜ್ಯ ಸರ್ಕಾರ ಎಲ್ಲ ವಿಭಾಗಗಳಿಗೂ ಸೂಚನೆ ನೀಡಿದೆ. ಹೀಗಾಗಿ, ಹೆಸ್ಕಾಂ ಶಿರಸಿ ವಿಭಾಗದಲ್ಲಿ ಸಾಧ್ಯತೆಯ ಪರಿಶೀಲನೆ ನಡೆಸಲಾರಂಭಿಸಿದೆ. ಪವರ್‌ಮನ್‌ಗಳು ಈಗ ಹಳ್ಳಿ-ಹಳ್ಳಿ ತಿರುಗಿ ಅಕ್ರಮ ಹಾಗೂ ಸಕ್ರಮ ಪಂಪ್‌ಸೆಟ್‌ಗೆ ಈಗ ಇರುವ ವಿದ್ಯುತ್ ಮಾರ್ಗ, ಪರಿವರ್ತಕದಿಂದ ಇರುವ ದೂರ, ವಿದ್ಯುತ್ ಬಳಕೆಯ ಪ್ರಮಾಣ, ಬಳಸಲಾಗಿರುವ ಸರ್ವಿಸ್ ತಂತಿಗಳ ದೂರ ಎಲ್ಲವನ್ನೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸವಾಲುಗಳೂ ಅಧಿಕ:ಶಿರಸಿ ಉಪ ವಿಭಾಗದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯೂ ಸವಾಲಿನ ವಿಷಯವಾಗಿದೆ. ಸಬ್ ಗ್ರಿಡ್ ಗಳ ಕೊರತೆಯಿಂದಾಗಿ ತಾಲೂಕು ಮುಖ್ಯ ಗ್ರಿಡ್‌ನಿಂದ ಹಳ್ಳಿಗಳಿಗೆ ಸಂಪರ್ಕ ನೀಡಿದ್ದೇ ಹೆಚ್ಚು. ಶಿರಸಿ ತಾಲೂಕಿನ ಸಂಪಖಂಡ ಫೀಡರ್ ೩೦೦ ಕಿಮೀಯಷ್ಟು ವಿದ್ಯುತ್ ಜಾಲ ಶಿರಸಿ ಮುಖ್ಯಗ್ರಿಡ್ ಗೇ ಜೋಡಣೆಯಾಗಿದೆ. ಬನವಾಸಿಗೆ ಶಿರಸಿಯಿಂದಲೇ ವಿದ್ಯುತ್ ಒದಗಿಸಲಾಗುತ್ತಿದ್ದು, ಪ್ರತಿ ರಾತ್ರಿ ವಿದ್ಯುತ್ ಕೈ ಕೊಡುತ್ತಿದೆ, ಬೆಳೆಗಳು ಒಣಗುತ್ತಿವೆ. ಹೀಗಾಗಿ ಪಂಪ್ ಸೆಟ್‌ಗಳಿಗೆ ಸೋಲಾರ್ ಅಳವಡಿಸಿದ್ದೇ ಆದಲ್ಲಿ ರೈತರಿಗೆ ವರವಾಗಲಿದೆ.
ಸಾಮಾನ್ಯ ಪಂಪ್‌ಗೂ ಆಧಾರ ಜೋಡಣೆ:ಅಕ್ರಮ ಸಕ್ರಮ ಹೊರತಾದ ಅನೇಕ ವರ್ಷಗಳಿಂದ ಬಳಕೆಯಲ್ಲಿರುವ ಪಂಪ್‌ಸೆಟ್ ಗಳನ್ನೂ ಆಧಾರಗೆ ಜೋಡಿಸುವ ಕಾರ್ಯವನ್ನು ಹೆಸ್ಕಾಂ ನಡೆಸುತ್ತಿದೆ. ಎಸ್ ಬಂಗಾರಪ್ಪ ಮುಖ್ಯಮಂತ್ರಿ ಆದ ವೇಳೆ ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸಿದ್ದರು. ಹೀಗಾಗಿ, ಅಂದಿನಿಂದ ಪಂಪ್‌ಗಳ ಮೀಟರ್ ರೀಡಿಂಗ್ ನಡೆದಿದ್ದರೂ ಬಿಲ್ ಇರದ ಕಾರಣ ನಿರ್ಲಕ್ಷ್ಷಕ್ಕೆ ಒಳಗಾಗಿತ್ತು. ಈಗ ಆಧಾರ್‌ಗೆ ಜೋಡಿಸಿ ವ್ಯವಸ್ಥಿತಗೊಳಿಸುವ ಯತ್ನವನ್ನು ಹೆಸ್ಕಾಂ ನಡೆಸಿದೆ.
ಕೃಷಿ ಪಂಪ್‌ಸೆಟ್‌ಗೆ ಸೋಲಾರ್ ಅಳವಡಿಕೆ ಕುರಿತು ಯಾವುದೇ ಅಧಿಕೃತ ಆದೇಶ ನಮಗೆ ಬಂದಿಲ್ಲ. ಸಾಧ್ಯಾ ಅಸಾಧ್ಯತೆ ಕುರಿತು ಸಮೀಕ್ಷೆ ನಡೆಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸುತ್ತಿದ್ದೇವೆ.ಎಂ.ಟಿ. ಅಪ್ಪಣ್ಣವರ, ಕಾರ್ಯನಿರ್ವಾಹಕ ಎಂಜಿನಿಯರ್, ಹೆಸ್ಕಾಂ ಶಿರಸಿ ವಿಭಾಗ