ಸಾರಾಂಶ
ಚಿತ್ರದುರ್ಗ: ಖ್ಯಾತ ಸಂಶೋಧಕ ಸೋಮೇನಹಳ್ಳಿಯ ಎಚ್.ಶ್ರೀಶೈಲ ಆರಾಧ್ಯ(78)ಗುರುವಾರ ಮುಂಜಾನೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರ ಅಗಲಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.
ಶ್ರೀಶೈಲ ಆರಾಧ್ಯರ ಸಾವು ಚಿತ್ರದುರ್ಗದ ನೆಲ ಕವಿ ಪ್ರಾಧ್ಯಾಪಕ, ಸಂಶೋಧಕ, ಜ್ಯೋತಿಷ್ಯಗಾರರೋರ್ವರ ಕಳೆದುಕೊಂಡಂತಾಗಿದೆ. ಹೊಸದುರ್ಗ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಶ್ರೀಶೈಲ ಆರಾಧ್ಯ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ 33 ವರ್ಷದಷ್ಟು ಸುದೀರ್ಘ ಕಾಲ ಕಾರ್ಯನಿರ್ವಹಿಸಿದ್ದರು. ತಮ್ಮ ಶಿಷ್ಯಂದಿರ ಬಹುದೊಡ್ಡ ಗುಂಪನ್ನೇ ಹೊಂದಿದ್ದ ಶ್ರೀಶೈಲ ಆರಾಧ್ಯರು ಸಂಶೋಧನಾ ಕ್ಷೇತ್ರವನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಕನ್ನಡ ಉಪನ್ಯಾಸಕನ ಕೆಲಸಕ್ಕೆ ನನ್ನನ್ನು ಅರ್ಪಿಸಿಕೊಂಡಂತೆ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಾಚೀನ ಬದುಕನ್ನು ಬಿಚ್ಚಿಡುವ ಇತಿಹಾಸದ ಕಡೆಗೂ ಅವರು ಕಣ್ಣಾಯಿಸಿದ್ದರು. ಕೋಟೆ ಕೊತ್ತಲ, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ ಆಚರಣೆಗಳು ಇಂಥ ವಿಭಿನ್ನ ವಿಷಯಗಳ ಬಗ್ಗೆ ಕಣ್ಣಾಯಿಸಿ ಲೇಖನಗಳ ಬರೆದಿದ್ದರು.ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಗಳಲ್ಲಿ ಶಿಲಾಯುಗದ ಮಾನವರಚಿತ ರೇಖಾಚಿತ್ರಗಳು, ನೆರಳು ಚಿತ್ರಗಳಿರುವ ಬಗ್ಗೆ, ಹುಟ್ಟು ಬಂಡೆಗಳು ಮೇಲೆ ಪ್ರಾಣಿ ಮನುಷ್ಯಾಕೃತಿಗಳನ್ನು ಉಜ್ಜಿ ಸಂಶೋಧನೆ ಜಾಡು ಹಿಡಿದಿದ್ದರು. 1983ರಲ್ಲಿ ಮೊತ್ತ ಮೊದಲಿಗೆ ಸಂಶೋಧನೆಯ ಹಾದಿಯಲ್ಲಿ ಎಂಬ ಕೃತಿಯ ಮೂಲಕ ಪುರಾತನ ಇತಿಹಾಸದ ಅಧ್ಯಯನಕ್ಕಾಗಿ ಬಾಗಿಲನ್ನು ತೆರೆದಿಟ್ಟಿದ್ದರು.
ದೇಶ ವಿದೇಶಗಳ ಗಮನ ಸೆಳೆದ ಈ ಶೋಧನೆ ನನ್ನ ಜೀವನದ ಒಂದು ಮೈಲಿಗಲ್ಲು . ಜ್ಯೋತಿಷ್ಯ, ರತ್ನಶಾಸ್ತ್ರ, ಭಾರತೀಯ ಪ್ರಾಚೀನ ಆಚರಣೆಗಳು, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಅಧ್ಯಯನ ನನ್ನ ಒಲವು ಹಾಗೂ ಅಭಿರುಚಿಗಳೆಂದು ಶ್ರೀಶೈಲ ಆರಾಧ್ಯ ಹೇಳುತ್ತಿದ್ದರು. ಕಾಶಿ ಸಾಹಿತ್ಯ ಸಮೀಕ್ಷೆ (ಸಂಭಾವನ ಕೃತಿ- ಸಂಪಾದನೆ)ಸಂಶೋದನೆಯ ಹಾದಿಯಲ್ಲಿ (ಪ್ರಾಚೀನ ಗುಹಾಚಿತ್ರಗಳ ಬಗೆಗೆ),ಸೀಮೇಗಿಲ್ಲದೋರ ಸೂರಿನ ಕೆಳಗೆ (ನಗೆ ಲೇಖನಗಳು)ಕೃತಿ ರಚಿಸಿದ್ದರು. ತರಾಸು ಅವರ ಸ್ಮರಣ ಸಂಪುಟ(ಗಿರಿ ಮಲ್ಲಿಗೆ) ಸಂಪಾದನೆ ಮಾಡಿದ್ದರು.
ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ, ಸ್ಥಳೀಯ ನಾಗರೀಕ ಹಿತರಕ್ಷಣಾ ವೇದಿಕೆ ಇವುಗಳ ಅಧ್ಯಕ್ಷ, ಗೌರಾವಧ್ಯಕ್ಷರಾಗಿಯೂ ಆರಾಧ್ಯರು ಕಾರ್ಯನಿರ್ವಹಿಸಿದ್ದರು.2015 ರಲ್ಲಿ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ “ಮುರುಘಾಶ್ರೀ” ಪ್ರಶಸ್ತಿ ನೀಡಿ ಆರಾಧ್ಯರ ಗೌರವಿಸಲಾಗಿತ್ತು. ಆದರೆ ಚಿತ್ರದುರ್ಗ ಜಿ್ಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಮಾತ್ರ ಆರಾಧ್ಯರಿಗೆ ಲಭ್ಯವಾಗಲೇ ಇಲ್ಲ. ಇದೊಂದ ಕೊರಗು ಅವರನ್ನು ಸದಾ ಕಾಡುತ್ತಿತ್ತು.