ಸಾರಾಂಶ
- ಕೈಕಾಲು, ಮುರಿದುಕೊಂಡ, ರೋಗಕ್ಕೆ ತುತ್ತಾದ ಗೋವುಗಳ ಜೋಪಾನ
- ಎಲ್ಲರಿಗೂ ಬೇಡವಾದ ಗೋವುಗಳ ಜೋಪಾನ ಮಾಡಲಾಗುತ್ತದೆ- ಗೋವುಗಳ ಪೂಜಿಸುವ ಕಲ್ಪನೆ ಇರದ ಕಾಲದಲ್ಲಿಯೇ ಗೋ ಸಂರಕ್ಷಣೆ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ದಕ್ಷಿಣ ಭಾರತದ ಮೊದಲ ಗೋಶಾಲೆಗೆ ಬರೋಬ್ಬರಿ 81 ವರ್ಷ!1944ರಲ್ಲಿ ಗೋವುಗಳ ಸಂರಕ್ಷಣೆಗಾಗಿಯೇ ಇಲ್ಲಿ ತಲೆ ಎತ್ತಿದ ಗೋಶಾಲೆಯಲ್ಲಿ ಈಗ ಬರೋಬ್ಬರಿ 1300 ಗೋವುಗಳು ಇವೆ. ಗೋವುಗಳಿಗೆ ಈಗಿನಷ್ಟು ಪೂಜನೀಯ ಭಾವನೆ ಇರಲಿಲ್ಲ. ಗೋವುಗಳು ಕಾಲು ಮುರಿದುಕೊಂಡರೆ, ರೋಗಕ್ಕೆ ತುತ್ತಾದರೆ ಕಟುಕರಿಗೆ ನೀಡಿ, ಕೈ ತೊಳೆದುಕೊಳ್ಳಲಾಗುತ್ತಿತ್ತು. ಆದರೆ, ಯಾವುದೇ ಗೋವು ಕಟುಕನ ಪಾಲಾಗಬಾರದು ಎನ್ನುವ ಧ್ಯೇಯದೊಂದಿಗೆ ಇದು ಪ್ರಾರಂಭವಾಗಿದೆ.
ಆಗ ಗೋ ಸಂರಕ್ಷಣಾ ಕಾಯ್ದೆಯೂ ಇರಲಿಲ್ಲ. ಗೋವುಗಳ ಸಂರಕ್ಷಣೆಗೆ ಅನುದಾನ ನೀಡುತ್ತಿರಲಿಲ್ಲ. ಆ ಕಾಲಘಟ್ಟದಲ್ಲಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾವೀರ ಜೈನ್ ಸಂಘ ಗೋಶಾಲೆ ಪ್ರಾರಂಭಿಸಿತು. ಪ್ರಾರಂಭದಲ್ಲಿ ಕೇವಲ ಹತ್ತಾರು ಗೋವುಗಳು ಇದ್ದಿದ್ದು, ಈಗ ಬರೋಬ್ಬರಿ 1300 ಗೋವುಗಳು ಇವೆ.ಪ್ರಾರಂಭವಾಗಿದ್ದು ಹೇಗೆ:
ಜೈನ ಸಮಾಜದ ಗುರುಗಳಾಗಿದ್ದ ಗಣೇಶಲಾಲಜಿ ಮುನಿವರ್ಯರು ಕೊಪ್ಪಳಕ್ಕೆ ಆಗಮಿಸಿದ್ದರು. 1941 ಮತ್ತು 1944ರಲ್ಲಿ ಆಗಮಿಸಿ ಚಾತುರ್ಮಾಸ ಕಾರ್ಯಕ್ರಮ ಪ್ರಾರಂಭಿಸಿದ್ದರು. ಇವರು ಮೊದಲ ಬಂದಾಗ ಈ ವಿಷಯ ಪ್ರಸ್ತಾಪ ಮಾಡಿದ್ದರು. ಆಗ ಜೈನ ಸಮುದಾಯದ ಹಿರಿಯರು ಸೇರಿಕೊಂಡು ಗೋಶಾಲೆ ಪ್ರಾರಂಭಿಸಲು ತೀರ್ಮಾನಿಸಿ, 1944ರಲ್ಲಿ ಶ್ರೀಗಳ ಕಡೆಯಿಂದ ಗೋಶಾಲೆ ಉದ್ಘಾಟಿಸಲಾಯಿತು.ಕೊಪ್ಪಳ ಮಹಾವೀರ ಜೈನ ಗೋಶಾಲೆ ಎಂದರೆ ಗೋವುಗಳ ಆಶ್ರಯ ತಾಣ. ದಾನದಿಂದಲೇ ನಡೆಸುತ್ತಿರುವ ಈ ಗೋಶಾಲೆಯಲ್ಲಿ ಗೋವುಗಳನ್ನು ದೇವರಂತೆ ನೋಡಲಾಗುತ್ತದೆ.
ರೈತರು ಸೇರಿದಂತೆ ಉಪಜೀವನಕ್ಕಾಗಿ ಗೋವುಗಳನ್ನು ಸಾಕುವುದು ಸಂಪ್ರದಾಯ. ಆದರೆ, ಹೀಗೆ ಸಾಕುತ್ತಿದ್ದ ಗೋವುಗಳ ರೋಗಕ್ಕೆ ತುತ್ತಾದಾಗ, ಕಾಲು ಮುರಿದುಕೊಂಡಾಗ, ಗಾಯಗೊಂಡಾಗ ಅವುಗಳನ್ನು ಕಟುಕರಿಗೆ ನೀಡಲಾಗುತ್ತಿತ್ತು. ಆದರೆ, ಇವುಗಳನ್ನು ಕಟುಕರಿಗೆ ನೀಡಬಾರದು. ಸಂರಕ್ಷಣೆ ಮಾಡಬೇಕು ಎನ್ನುವ ಮಹದುದ್ದೇಶದಿಂದಲೇ ದಕ್ಷಿಣ ಭಾರತದಲ್ಲಿಯೇ ಮೊಟ್ಟಮೊದಲ ಗೋಶಾಲೆ ಕೊಪ್ಪಳದಲ್ಲಿ ಪ್ರಾರಂಭವಾಯಿತು.ಹೀಗೆ ಪ್ರಾರಂಭವಾದ ಗೋಶಾಲೆಗೆ ರೋಗದಿಂದ ಬಳಲುವ, ಕಾಲು ಮುರಿದುಕೊಂಡಿರುವ ಹಾಗೂ ವಯಸ್ಸಾದ ಗೋವುಗಳನ್ನು ತಂದು ಜನರು ಬಿಡಲು ಪ್ರಾರಂಭಿಸಿದರು. ಅವುಗಳನ್ನು ಪಡೆದು, ಗೋಶಾಲೆಯಲ್ಲಿ ಸಂರಕ್ಷಣೆ ಮಾಡಲಾಯಿತು.
ಗೋವುಗಳ ಆಶ್ರಯತಾಣ:ಇಂದಿಗೂ ಸಹ ಇಂಥ ಗೋವುಗಳನ್ನೇ ಇಲ್ಲಿಗೆ ತಂದು ಬಿಡಲಾಗುತ್ತದೆ. ಅಷ್ಟೇ ಅಲ್ಲ, ಕೆಲವರು ಸಾಕಲು ಆಗದೆ ಗೋವುಗಳನ್ನು ಇಲ್ಲಿಗೆ ಕೊಟ್ಟು ಹೋಗುತ್ತಾರೆ. ಕಟುಕರಿಗೆ ಮಾರಾಟ ಮಾಡಲು ಹೊರಟ ಗೋವುಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದು ಇಲ್ಲಿಗೆ ಬಿಡಲಾಗುತ್ತದೆ.
ಈ ರೀತಿ ಬರುವ ಗೋವುಗಳನ್ನು ಸ್ವೀಕಾರ ಮಾಡಿ, ಅವುಗಳನ್ನು ಜೋಪಾನ ಮಾಡಲಾಗುತ್ತದೆ. ಗೋವುಗಳ ಕೊನೆಯ ಉಸಿರು ಇರುವವರೆಗೂ ಅವುಗಳನ್ನು ಸಾಕಲಾಗುತ್ತದೆ. ಹೀಗೆ, ಜೀವಿಸಿದ ಗೋವುಗಳು ಕೊನೆಯುಸಿರೆಳದ ಮೇಲೆ ಅವುಗಳನ್ನು ನಿಯಮಾನುಸಾರವಾಗಿ ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇದಕ್ಕಾಗಿ ಗೋಶಾಲೆಯಲ್ಲಿ ಪ್ರತ್ಯೇಕ ತಂಡವೇ ಇದ್ದು, ಅದು ಅಂತ್ಯಸಂಸ್ಕಾರದ ಹೊಣೆಯನ್ನು ನಿಭಾಯಿಸುತ್ತದೆ. ಇದಲ್ಲದೆ ಗೋವುಗಳ ಸಂರಕ್ಷಣೆಗೆ, ಮೇವು ತರಲು, ಸ್ವಚ್ಛತೆ ಕಾಪಾಡಲು ನೂರಾರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದರಿಂದ ಯಾವುದೇ ಆದಾಯ ನಿರೀಕ್ಷೆ ಮಾಡುವುದಿಲ್ಲ. ಆದರೆ, ಇದರ ನಿರ್ವಹಣೆಗೆ ದಾನಿಗಳನ್ನೇ ಆಶ್ರಯಿಸಲಾಗಿದೆ. ಜೊತೆಗೆ ಸುಸಜ್ಜಿತ ಗೋಶಾಲೆ ಇದ್ದು, ಸುತ್ತಮುತ್ತಲ ಬಾಡಿಗೆ ಸಹ ಬರುತ್ತದೆ. ಹಾಗೆ ಈಗ ಸೆಗಣಿಯನ್ನು ಮಾರಾಟ ಮಾಡಲಾಗುತ್ತಿದೆ. ಹೀಗೆ ಗೋಶಾಲೆಯನ್ನು 81 ವರ್ಷಗಳಿಂದ ನಿಭಾಯಿಸಿಕೊಂಡು ಬರಲಾಗುತ್ತಿದೆ.
ವಾರ್ಷಿಕೋತ್ಸವ:ಗೋಶಾಲೆಯ 81ನೇ ವಾರ್ಷಿಕೋತ್ಸವ ಮತ್ತು ಗಣೇಶಲಾಲಜಿ ಮುನಿವರ್ಯರ 63ನೇ ಪುಣ್ಯ ತಿಥಿ ಕಾರ್ಯಕ್ರಮವನ್ನು ಜ. 29ರಂದು ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.